ಲಕ್ಕೀ ಸ್ಕೀಂ ಹೆಸರಿನಲ್ಲಿ ಲಕ್ಷಾಂತರ ರೂ. ಪಂಗನಾಮ: ಕಂಗಾಲಾದ ಜನತೆ..!

ವಂಚಕರು ನಾಪತ್ತೆ, ಪೊಲೀಸರಿಗೆ ದೂರು| 4 ಸಾವಿರಕ್ಕೂ ಹೆಚ್ಚು ಜನರಿಗೆ ಮೋಸ| ಬೈಕ್‌ ಸೇರಿ ಇನ್ನಿತರ ಬಹುಮಾನ ಆಸೆಗಾಗಿ ತಲಾ 700 ಪಾವತಿ| ಈ ಸಂಬಂಧ ಬ್ಯಾಡಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ ಸಾವಿರಾರು ಜನರು| 

Crafty Team Cheat to People in Byadagi in Haveri District grg

ಬ್ಯಾಡಗಿ(ನ.12): ಲಾಟರಿ ನೆಪದಲ್ಲಿ ವಂಚಕರ ತಂಡವೊಂದು ಬ್ಯಾಡಗಿ ಸೇರಿದಂತೆ ಹಿರೇಕೆರೂರ, ರಟ್ಟಿಹಳ್ಳಿ, ರಾಣಿಬೆನ್ನೂರ ತಾಲೂಕಿನ ವಿವಿಧ ಗ್ರಾಮಗಳಲ್ಲಿ 4 ಸಾವಿರಕ್ಕೂ ಹೆಚ್ಚು ಜನರಿಗೆ 28 ಲಕ್ಷಕ್ಕೂ ಅಧಿಕ ಮೊತ್ತದ ಪಂಗನಾಮ ಹಾಕಿದ ಘಟನೆ ಬೆಳಕಿಗೆ ಬಂದಿದೆ.

ಶ್ರೀ ಸಾಯಿ ಎಂಟರಪ್ರೈಸಿಸ್‌ ಎಂಬ ಕಂಪನಿ ಹೆಸರಿನಲ್ಲಿ ಜಿಲ್ಲೆಯಲ್ಲಿ ವಿವಿಧ ಗ್ರಾಮಗಳಿಗೆ ತೆರಳಿರುವ ವಂಚಕರ ತಂಡ ಲಾಟರಿ ಹೆಸರಿನಲ್ಲಿ ಮುಗ್ಧ ಗ್ರಾಮೀಣ ಮಹಿಳೆಯರು ಸೇರಿದಂತೆ ರೈತರಿಗೆ ದ್ವಿಚಕ್ರ ವಾಹನ ಹಾಗೂ ಇನ್ನು ಅನೇಕ ಬಹುಮಾನದ ಆಸೆ ತೋರಿಸಿ 28 ಲಕ್ಷಕ್ಕೂ ಅಧಿಕ ಪಂಗನಾಮ ಹಾಕಿದ್ದಾರೆ. ಬೈಕ್‌ ಹಾಗೂ ಇನ್ನಿತರ ಬಹುಮಾನದ ಆಸೆಗಾಗಿ ಜಿಲ್ಲೆ ವಿವಿಧ ಗ್ರಾಮಗಳ ಜನರು ತಲಾ 700 ಗಳಂತೆ ಪಾವತಿ ಮಾಡಿದ್ದು ಅವರಿಗೆ ಒಂದು ಬುಕ್‌ಲೆಟ್‌ ನೀಡಲಾಗಿದೆ. ಉಳಿದಂತೆ ರಸೀದಿಯಲ್ಲಿ ಬ್ಯಾಡಗಿ ವಿದ್ಯಾನಗರದ ವಿಳಾಸ ನಮೂದಿಸಲಾಗಿದೆ.

ನ. 11ರಂದು ಡ್ರಾ

ವಂಚಕರ ಜಾಲಕ್ಕೆ ಸಿಲುಕಿರುವ ಸಾವಿರಾರು ಸಾರ್ವಜನಿಕರು ಮೊದಲು 100 ತುಂಬಿ ನಂತರ 600 ಗಳನ್ನು ತುಂಬಿ ರಸೀದಿ ಪಡೆದುಕೊಂಡಿದ್ದಾರೆ. ನ. 11ರಂದು ಡ್ರಾ ಇದೆ ಎಂದು ಬ್ಯಾಡಗಿ ವಿದ್ಯಾನಗರ ವಿಳಾಸಕ್ಕೆ ಬಂದ ಜನರಿಗೆ ತಾವು ಮೋಸ ಹೋಗಿರುವ ವಿಷಯ ತಿಳಿದು ಬಂದಿದೆ.

ಕುರುಬ ಸಮಾಜಕ್ಕೆ ಮೀಸಲಾತಿ ಸಿಗೋವರೆಗೂ ಹೋರಾಟ ನಿಲ್ಲದು: ನಿರಂಜನಾನಂದಪುರಿ ಶ್ರೀ

ಪೊಲೀಸ್‌ ಠಾಣೆಗೆ ದೂರು

ವಿದ್ಯಾನಗರದಲ್ಲಿನ ವಿಳಾಸ ಪತ್ತೆಯಾಗದ ಕಾರಣ ದೂರವಾಣಿಗೆ ಕರೆ ಮಾಡಿದ್ದಾರೆ. ಆದರೆ ವಂಚಕರು ನೀಡಿದ್ದ ಎಲ್ಲ ದೂರವಾಣಿ ಸಂಖ್ಯೆಗಳು ಸ್ವಿಚ ಆಫ್‌ ಆಗಿದ್ದ ಹಿನ್ನೆಲೆಯಲ್ಲಿ ಆತಂಕಗೊಂಡ ಜನರು ಪೊಲೀಸ್‌ ಠಾಣೆಯ ಎದುರು ಜಮಾಯಿಸಿ ತಮ್ಮ ಅಳಲನ್ನು ಪೊಲೀಸ್‌ ಎದುರು ತೋಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಹಣ ಕಳೆದುಕೊಂಡ ಕಾಟೇನಹಳ್ಳಿ ಗ್ರಾಮದ ಚಂದ್ರು ಕಲ್ಲಾಪುರ ಹಳ್ಳಿ ಜನರ ಮುಗ್ಧತೆ ಯನ್ನು ವಂಚಕರು ಬಂಡವಾಳ ಮಾಡಿಕೊಂಡು ಜಿಲ್ಲೆಯಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಜನರಿಗೆ ಮೋಸ ಮಾಡಿದ್ದಾರೆ. ಇಬ್ಬರು ಹೆಣ್ಣು ಮಕ್ಕಳೊಂದಿಗೆ ಹಳ್ಳಿಗೆ ಬರುತ್ತಿದ್ದ ಇವರು ಜನರಿಗೆ ವಂಚನೆಯ ಸುಳಿವು ಸಿಗದಂತೆ ಹಣ ಕಟ್ಟಿಸಿಕೊಂಡು ಯಾಮಾರಿಸಿದ್ದಾರೆ. ಅವರು ತಂದಿದ್ದ ಬೈಕ್‌ ನಂಬರ್‌ ಸೇರಿದಂತೆ ವಿವಿಧ ದಾಖಲೆಗಳು ನಮ್ಮ ಬಳಿಯಿದ್ದು ಇವುಗಳನ್ನು ಆಧರಿಸಿ ಅವರ ಪತ್ತೆ ಹಚ್ಚುವಂತೆ ಆಗ್ರಹಿಸಿದರು.

ಲಕ್ಷಾಂತರ ರು. ಪಂಗನಾಮ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿರಾರು ಜನರು ಬ್ಯಾಡಗಿ ಪೊಲೀಸ್‌ ಠಾಣೆಗೆ ತೆರಳಿ ವಂಚಕರ ವಿರುದ್ಧ ದೂರು ಸಲ್ಲಿಸಿದ್ದು ವ್ಯವಸ್ಥಿತವಾದ ವಂಚಕರ ಜಾಲವನ್ನು ಪತ್ತೆ ಹಚ್ಚುವಂತೆ ಆಗ್ರಹಿಸಿದ್ದಾರೆ.
ನಾವು ಮೊಸ ಹೋದಂತೆ ಮತ್ಯಾರೂ ಮೋಸ ಹೋಗುವುದ ಬೇಡ, ಈ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ಮುತುವರ್ಜಿ ವಹಿಸಿ ವಂಚಕರ ಜಾಲ ಪತ್ತೆ ಮಾಡಬೇಕಿದೆ. ಇಲ್ಲದಿದ್ದಲ್ಲಿ ಇದೇ ರೀತಿಯಲ್ಲಿ ಸಾವಿರಾರು ಜನರು ಬಹುಮಾನ ಆಸೆಗೆ ಬಿದ್ದು ಹಣ ಕಳೆದುಕೊಳ್ಳವುದರಲ್ಲಿ ಅನುಮಾನವಿಲ್ಲ ಎಂದು ಸಂತ್ರಸ್ತ ಶೇಖಪ್ಪ ಉಳ್ಳಾಗಡ್ಡಿ ತಿಳಿಸಿದ್ದಾರೆ. 

ಲಾಟರಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರು ದೂರನ್ನು ಸಲ್ಲಿಸಿದ್ದಾರೆ ಅವರು ನೀಡಿರುವ ಬೈಕ್‌ ಹಾಗೂ ಮೊಬೈಲ್‌ ನಂಬರ್‌ ಟ್ರೇಸ್‌ ಮಾಡಿ ವಂಚಕರನ್ನು ಶೀಘ್ರದಲ್ಲಿಯೇ ಪತ್ತೆ ಹಚ್ಚಲಾಗುವುದು ಎಂದು ಸಿಪಿಐ ಬಸವರಾಜ ಪಿ.ಎಸ್‌ ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios