ಬೆಂಗಳೂರು(ಮೇ.01): ಕತ್ರಿಗುಪ್ಪೆ ಮುಖ್ಯರಸ್ತೆಯಲ್ಲಿ ಅನುಮಾನಾಸ್ಪದ ವಸ್ತುವೊಂದು ಪತ್ತೆಯಾಗಿ ಗುರುವಾರ ಬೆಳಗ್ಗೆ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ವಿಷಯ ತಿಳಿದ ಕೂಡಲೇ ಬಾಂಬ್‌ ನಿಷ್ಕ್ರಿಯದಳ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿ ಮುಂಜಾಗ್ರತಾ ಕ್ರಮ ಕೈಗೊಂಡು, ವಸ್ತು ಪತ್ತೆಯಾಗಿದ್ದ ಸ್ಥಳದಲ್ಲಿ ಬ್ಯಾರಿಕೇಡ್‌ ಹಾಕಿದ್ದರು.

ಸ್ಥಳಕ್ಕೆ ಬಂದ ಬಾಂಬ್‌ ನಿಷ್ಕ್ರಿಯ ದಳ ಹಾಗೂ ತಾಂತ್ರಿಕ ತಂಡ, ಸಿಡಿದಾಗ ಆಕಾಶದಲ್ಲಿ ನಕ್ಷತ್ರಗಳನ್ನು ಸೃಷ್ಟಿಸುವ ಪಟಾಕಿ ಮಾದರಿಯ ವಸ್ತು ಇದೆಂದು ದೃಢಪಡಿಸಿದ ನಂತರ ಸಾರ್ವಜನಿಕರು ಹಾಗೂ ಪೊಲೀಸರು ನಿಟ್ಟುಸಿರು ಬಿಟ್ಟರು. ಆದರೂ ವಸ್ತುವನ್ನು ತಪಾಸಣೆಗಾಗಿ ಎಫ್‌ಎಸ್‌ಎಲ್‌ಗೆ ಕಳಹಿಸಲಾಗಿದೆ ಎಂದು ಹನುಮಂತನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

11 ಮಂದಿಗೆ ವೈರಸ್‌: ರಾಜ್ಯಕ್ಕೆ ಮತ್ತೆ ತಬ್ಲೀಘಿ ಸಂಕಷ್ಟ

ಗುರುವಾರ ಬೆಳಗ್ಗೆ 10.30ರ ಸುಮಾರಿಗೆ ಕತ್ರಿಗುಪ್ಪೆ ಮುಖ್ಯರಸ್ತೆಯಲ್ಲಿ ಸಾರ್ವಜನಿಕರೊಬ್ಬರು ಕಾಲ್ನಡಿಗೆಯಲ್ಲಿ ಹೋಗುವಾಗ ಚೆಂಡಿನ ಮಾದರಿಯ ವಸ್ತು ಹಾಗೂ ಅಲ್ಲಿಯೇ ತುಂಡಾಗಿ ಬಿದ್ದಿದ್ದ ವೈಯರ್‌ ಕಂಡು ಆತಂಕದಿಂದ ಸ್ಥಳೀಯ ಠಾಣೆಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಂಬ್‌ ನಿಷ್ಕಿ್ರೕಯ ದಳ ಸಿಬ್ಬಂದಿಗೆ ವಿಷಯ ತಲುಪಿಸಿದ್ದರು. ಬಾಂಬ್‌ ನಿಷ್ಕಿ್ರಯ ದಳ, ತಾಂತ್ರಿಕ ತಂಡ ಪರಿಶೀಲನೆ ನಡೆಸಿ, ಆಕಾಶದಲ್ಲಿ ನಕ್ಷತ್ರಗಳನ್ನು ಸೃಷ್ಟಿಸುವ ಪಟಾಕಿ ಮಾದರಿಯ ವಸ್ತು ಮಾದರಿಯಲ್ಲಿದೆ. ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ದೃಢಪಡಿಸಿದರು. ನಂತರ ವಸ್ತುವನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಪರೀಕ್ಷಿಸಿದಾಗ ಅದರಲ್ಲಿ ಪಟಾಕಿಗೆ ಬಳಸುವ ಪೋಟ್ಯಾಷಿಯಂ ನೈಟ್ರೇಟ್‌ ಅಂಶ ಇದೆ ಎಂಬುದು ತಿಳಿದು ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಇಂದಿನಿಂದ ಮಾಸ್ಕ್‌ ಧರಿಸದಿದ್ದರೆ 1000 ರು. ದಂಡ!

ಸ್ಥಳಕ್ಕೆ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಯಾರು ತಪ್ಪು ಮಾಡಿದ್ದಾರೆ ಎಂಬುದು ತನಿಖೆ ಬಳಿಕ ತಿಳಿಯಲಿದೆ ಎಂದರು.

ಜಪ್ತಿಯಾದ ವಾಹನಗಳು ಇಂದಿನಿಂದ ವಾಪಸ್‌! ಯಾವ ವಾಹನಕ್ಕೆಷ್ಟು ದಂಡ..?

ಘಟನಾ ಸ್ಥಳದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಮೇಲ್ನೋಟಕ್ಕೆ ಪಟಾಕಿ ಎಂಬುದು ಕಂಡು ಬಂದಿದೆ. ಮನೆಯಲ್ಲಿದ್ದ ಪಟಾಕಿಯನ್ನು ಯಾರೋ ಬಿಸಾಡಿರುವ ಸಾಧ್ಯತೆ ಇದೆ. ಮಳೆ ಬಂದಾಗ ಒಳಚರಂಡಿ ನೀರಿನ ಮೂಲಕ ವಸ್ತು ಹೊರಬಂದಿರುವ ಸಾಧ್ಯತೆಯಿದೆ. ಎಫ್‌ಎಸ್‌ಎಲ್‌ ವರದಿ ಬಂದ ಬಳಿಕ ನಿಖರ ಕಾರಣ ತಿಳಿಯಲಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್‌ ಸೆಪಟ್‌ ತಿಳಿಸಿದ್ದಾರೆ.