ಜಪ್ತಿಯಾದ ವಾಹನಗಳು ಇಂದಿನಿಂದ ವಾಪಸ್! ಯಾವ ವಾಹನಕ್ಕೆಷ್ಟು ದಂಡ..?
ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ರಸ್ತೆಗಿಳಿದು ಜಪ್ತಿಗೊಳಗಾಗಿದ್ದ ವಾಹನಗಳನ್ನು ಶುಕ್ರವಾರದಿಂದ ಸವಾರರಿಗೆ ನೀಡಲು ಪೊಲೀಸರು ನಿರ್ಧರಿಸಿದ್ದಾರೆ.
ಬೆಂಗಳೂರು(ಮೇ.01): ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ರಸ್ತೆಗಿಳಿದು ಜಪ್ತಿಗೊಳಗಾಗಿದ್ದ ವಾಹನಗಳನ್ನು ಶುಕ್ರವಾರದಿಂದ ಸವಾರರಿಗೆ ನೀಡಲು ಪೊಲೀಸರು ನಿರ್ಧರಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಮಾಲೀಕರಿಗೆ ವಾಹನಗಳನ್ನು ವಾಪಸ್ ನೀಡಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಟ್ವೀಟ್ ಮಾಡಿದ್ದಾರೆ.
ದೇಶದಲ್ಲಿ 11 ದಿನಕ್ಕೆ ಕೊರೋನಾ ಡಬಲ್..!
ಲಾಕ್‌ಡೌನ್ ಅದಾಗಿನಿಂದ ಇಲ್ಲಿಯ ತನಕ ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರ ವಾಹನ ಸೇರಿ ಒಟ್ಟು 47 ಸಾವಿರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಈ ಎಲ್ಲ ವಾಹನಗಳಿಂದ ಸುಮಾರು .2.50 ಕೋಟಿ ದಂಡ ವಸೂಲಿ ಆಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಪ್ತಿ ಮಾಡಲಾದ ವಾಹನಗಳು ಆಯಾ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಗಳಿಗೆ ಒಪ್ಪಿಸಲಾಗಿದೆ. ಒಂದೇ ದಿನಕ್ಕೆ ಎಲ್ಲ ವಾಹನಗಳನ್ನು ಹಸ್ತಾಂತರಿಸುವುದಿಲ್ಲ. ವಾಹನಗಳನ್ನು ಬಿಡಿಸಿಕೊಳ್ಳಲು ಏಕಾಏಕಿ ಸಾವಿರಾರು ಜನ ಸೇರುತ್ತಾರೆ. ಇದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಷ್ಟವಾಗುತ್ತದೆ. ಹಂತಹಂತವಾಗಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಮೊದಲು ಜಪ್ತಿಯಾದ ವಾಹನಗಳು ಮೊದಲಿಗೆ ಬಿಡಲಾಗುವುದು ಎಂದು ಭಾಸ್ಕರ್ ರಾವ್ ತಿಳಿಸಿದ್ದಾರೆ.
"
ಹಳೇ ದಂಡ ವಸೂಲಿ:
ಜಪ್ತಿಯಾದ ವಾಹನಗಳಿಗೆ ಸೂಕ್ತ ದಾಖಲಾತಿ ನೀಡಬೇಕು. ಸೂಕ್ತ ದಾಖಲಾತಿ ನೀಡದಿದ್ದಲ್ಲಿ ವಾಹನವನ್ನು ಮಾಲೀಕರಿಗೆ ನೀಡುವುದಿಲ್ಲ. ಇನ್ನು ಲಾಕ್‌ಡೌನ್‌ಗೂ ಹಿಂದೆ ಸಂಚಾರ ನಿಯಮ ಉಲ್ಲಂಘಿಸಿದ್ದ ದಂಡವನ್ನು ಪಾವತಿಸಬೇಕು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ದಂಡ ಕಟ್ಟಿದ್ದರೂ ಮತ್ತೆ ಜಪ್ತಿ:
ಲಾಕ್‌ಡೌನ್ ಮುಗಿಯುವ ತನಕ ಇನ್ನು ಮುಂದೆ ಯಾವುದಾದರೂ ವಾಹನಗಳು ರಸ್ತೆಗಿಳಿದರೆ ಅಂತಹ ವಾಹನಗಳನ್ನು ಜಪ್ತಿ ಮಾಡಲಾಗುವುದು. ಒಮ್ಮೆ ದಂಡ ಪಾವತಿಸಿದ್ದೇವೆ ಎಂದು ಹೇಳಿದರೂ ಬಿಡುವುದಿಲ್ಲ. ಮತ್ತೊಮ್ಮೆ ಜಪ್ತಿಗೆ ಒಳಗಾಗಬೇಕಾದೀತು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಜಪ್ತಿಯಾಗಿರುವ ವಾಹನಗಳ ವಿವರ
ದ್ವಿಚಕ್ರ ವಾಹನ 44,081
ತ್ರಿಚಕ್ರ ವಾಹನ 1,168
ನಾಲ್ಕುಚಕ್ರ 2009
ಒಟ್ಟು 47,258
ವಾಹನ ಬಿಡಿಸಿಕೊಳ್ಳುವುದು ಹೇಗೆ:
- ವಾಹನಗಳ ಮಾಲೀಕರು ಆಯಾ ಠಾಣೆಗಳಿಗೆ ತೆರಳಿ ದಂಡ ಪಾವತಿಸಿ ವಾಹನ ಬಿಡಿಸಿಕೊಳ್ಳಬೇಕು
- ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ .500, 4 ಚಕ್ರದ ವಾಹನಗಳಿಗೆ .1000 ಪಾವತಿಸಬೇಕು
- ಇನ್ಯೂರೆನ್ಸ್, ಆರ್‌ಸಿ ಹೀಗೆ ವಾಹನಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಪ್ರಸ್ತುತ ಪಡಿಸಬೇಕು
- ಮತ್ತೊಮ್ಮೆ ಲಾಕ್‌ಡೌನ್ ನಿಯಮ ಉಲ್ಲಂಘಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಡಬೇಕು
- ಒಮ್ಮೆಲೆ ಎಲ್ಲಾ ವಾಹನಗಳನು ಬಿಡುವುದಿಲ್ಲ, ಹಂತ ಹಂತವಾಗಿ ಬಿಡುಗಡೆ
- ಮೊದಲು ವಶ ಪಡಿಸಿಕೊಂಡ ವಾಹನಗಳು ಮೊದಲಿಗೆ ಬಿಡುಗಡೆ