ಚಿಕ್ಕಬಳ್ಳಾಪುರ(ಜು.17): ಕೊರೋನಾ ಸೋಂಕಿನ ತೀವ್ರತೆ ಹೆಚ್ಚಾಗಲು ಕೋವಿಡ್‌ ಪರೀಕ್ಷಾ ವರದಿಗಳು ತಡವಾಗುತ್ತಿರುವುದೇ ಕಾರಣವೇ ಎಂಬ ಸಂದೇಹ ಜಿಲ್ಲೆಯ ಜನತೆಯಲ್ಲಿ ಮೂಡಿದ್ದು, ಸೋಂಕು ಬಂದು ವಾರಗಳೇ ಕಳೆದರೂ ವರದಿ ಬಾರದ ಕಾರಣ ಸೋಂಕಿತರು ಜನರಲ್ಲಿ ಸೋಂಕು ಹಬ್ಬಿಸಲು ಕಾರಣವಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಕೋವಿಡ್‌ ಪರೀಕ್ಷೆಗಾಗಿ ಸ್ವಾ್ಯಬ್‌ ಪಡೆದು ವಾರಗಳೇ ಕಳೆದರೂ ವರದಿ ಬರುತ್ತಿಲ್ಲ. ವಾರ ಕಳೆದ ನಂತರ ವರದಿಯಲ್ಲಿ ಪಾಸಿಟಿವ್‌ ಇದ್ದು, ಅದುವರೆಗೂ ಸೋಂಕಿತ ವ್ಯಕ್ತಿ ಎಷ್ಟುಮಂದಿಯೊಂದಿಗೆ ಸಂಪರ್ಕ ಬೆಳೆಸಿರುತ್ತಾರೆ, ಎಷ್ಟುಮಂದಿಗೆ ಸೋಂಕು ಹಬ್ಬಿಸಿರುತ್ತಾರೆ ಎಂಬ ಆತಂಕ ಸಾರ್ವಜನಿಕರನ್ನು ಕಾಡತೊಡಗಿದೆ.

ಬಾರ್‌ ಕ್ಯಾಷಿಯರ್‌ಗೆ ವಾರದ ನಂತರ ವರದಿ:

ಬಾಗೇಪಲ್ಲಿಯ ಬಾರ್‌ವೊಂದರ ಕ್ಯಾಷಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಸೋಂಕಿನ ಲಕ್ಷಣಗಳು ಕಾಣಿಸಿದ ಕಾರಣ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದರು. ಜು.4ರಂದು ಇವರು ಪರೀಕ್ಷೆಗೆ ಒಳಗಾಗಿದ್ದರೆ ಜು.14ರ ವರೆಗೂ ಪರೀಕ್ಷಾ ವರದಿ ಬಂದಿಲ್ಲ. ಜಿಲ್ಲೆಯಲ್ಲಿ ಯಾವುದೇ ವ್ಯಕ್ತಿ ಕೋವಿಡ್‌ ಪರೀಕ್ಷೆಗೆ ಒಳಗಾದರೂ ವರದಿ ನೀಡುತ್ತಿಲ್ಲ. ಪಾಸಿಟಿವ್‌ ಬಂದಿದ್ದರೆ ಮಾತ್ರ ಆ್ಯಂಬುಲೆನ್ಸ್‌ ಬಂದು ಸೋಂಕಿತ ವ್ಯಕ್ತಿಯನ್ನು ಕರೆದೊಯ್ಯುತ್ತಾರೆ. ಹಾಗಾಗಿ ಪರೀಕ್ಷೆಗೆ ಒಳಗಾದ ವ್ಯಕ್ತಿಗಳು ವರದಿಗಾಗಿ ಕಾಯುವುದಿಲ್ಲ.

10 ದಿನ ಕಲೆದರೂ ಯಾವುದೇ ಕರೆ ಬಾರದ ಕಾರಣ ತನಗೆ ನೆಗೆಟಿವ್‌ ಇದೆ ಎಂದೇ ತಿಳಿದ ಬಾರ್‌ ಕ್ಯಾಷಿಯರ್‌, ನಿರಂತರವಾಗಿ ಬಾರ್‌ನಲ್ಲಿ ಕೆಲಸ ಮಾಡಿದ್ದು, ಸಾವಿರಾರು ಮಂದಿಯಿಂದ ಹಣ ಪಡೆದು ಮದ್ಯ ಸರಬರಾಜು ಮಾಡಿದ್ದಾರೆ. 10 ದಿನಗಳ ನಂತರ ಕ್ಯಾಷಿಯರ್‌ಗೆ ಆರೋಗ್ಯ ಇಲಾಖೆಯಿಂದ ಕರೆ ಬಂದಿದ್ದು, ಕೊರೋನಾ ಪಾಸಿಟಿವ್‌ ಬಂದಿರುವ ಹಿನ್ನೆಲೆಯಲ್ಲಿ ಐಸೋಲೇಷನ್‌ಗೆ ಹೋಗಲು ಸಿದ್ಧರಾಗುವಂತೆ ಸೂಚಿಸಿದ್ದಾರೆ.

ಕೊರೋನಾ ನಡುವೆಯೂ ಜೆಡಿಎಸ್ ಪಕ್ಷ ಸಂಘಟಿಸಿ: ದೇವೇಗೌಡ

ಪರೀಕ್ಷೆ ನಂತರ ಬಾರ್‌ನಲ್ಲಿ 10 ದಿನಗಳ ಕಾಲ ಕೆಲಸ ಮಾಡಿರುವ ಕ್ಯಾಷಿಯರ್‌ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಯಾವುದೇ ರೀತಿಯ ಮಾರ್ಗಸೂಚಿ ಪಾಲಿಸಿದ ಉದಾಹರಣೆಗಳಿಲ್ಲ ಎಂಬುದು ಬಾರ್‌ಗೆ ಭೇಟಿ ನೀಡಿದ ಗ್ರಾಹಕರ ಅಳಲಾಗಿದ್ದು, ಈ ಕ್ಯಾಷಿಯರ್‌ನಿಂದ ಎಷ್ಟುಮಂದಿಗೆ ಸೋಂಕು ಹಬ್ಬಿದೆ ಎಂಬ ಆತಂಕ ಕಾಡತೊಡಗಿದೆ.

ಇದು ಕೇವಲ ಉದಾಹರಣೆಯಾಗಿದ್ದು, ಇಂತಹ ಅನೇಕ ಪ್ರಕರಣಗಳು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಹಲವಾರು ಮಂದಿಗೆ ಆಗುತ್ತಿದೆ ಎನ್ನಲಾಗಿದೆ. ವರದಿ ತಡವಾಗುತ್ತಿರುವುದರಿಂದಲೇ ಸೋಂಕು ತೀವ್ರರೂಪದಲ್ಲಿ ಹಬ್ಬುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಕೋವಿಡ್‌ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆಯಾಗಿದ್ದರೂ ಇನ್ನೂ ಪರೀಕ್ಷೆ ಆರಂಭವಾಗದ ಕಾರಣ ವರದಿ ತಡವಾಗಲು ಕಾರಣವಾಗಿದೆ ಎಂಬುದು ಅಧಿಕಾರಿಗಳ ಸಮಜಾಯಿಷಿಯಾಗಿದೆ.

ತಪ್ಪದ ಬೆಂಗಳೂರು ಕಂಟಕ!

ಆರಂಭದಲ್ಲಿ ಮುಂಬೈನಿಂದ ನಂತರ ಆಂಧ್ರದಿಂದ ಆರಂಭವಾದ ಸೋಂಕು, ಇದೀಗ ಬೆಂಗಳೂರು ಕಂಟಕಕ್ಕೆ ಗುರಿಯಾಗುತ್ತಿದೆ. ಅತಿ ಸಮೀಪದಲ್ಲಿರುವ ಬೆಂಗಳೂರಿಗೆ ಜಿಲ್ಲೆಯ ಜನತೆ ನಾನಾ ಕಾರಣಗಳಿಗಾಗಿ ಪ್ರತಿನಿತ್ಯ ಹೋಗಿಬರುವುದು ಸಾಮಾನ್ಯವಾಗಿದ್ದು, ಹೀಗೆ ಹೋಗಿಬಂದವರೆಲ್ಲರಿಗೂ ಸೋಂಕು ಹರಡುತ್ತಿರುವುದು ವಿಶೇಷ. ಬುಧವಾರ ಪತ್ತೆಯಾದ ಒಟ್ಟು 32 ಪ್ರಕರಣಗಳಲ್ಲಿ 17 ಪ್ರಕರಣಗಳಿಗೆ ಬೆಂಗಳೂರಿನ ನಂಟಿದ್ದರೆ, ಉಳಿದ 15 ಪ್ರಕಣ ಸೋಂಕಿತರ ಸಂಪರ್ಕದಿಂದ ಹಬ್ಬಿರುವುದು ವಿಶೇಷ.

ಲಾಕ್‌ಡೌನ್‌ ಇದ್ದರೂ ಅಧಿಕಾರಿಗಳ ಸಂಚಾರ

ಜಿಲ್ಲಾಧಿಕಾರಿಗಳು ಎರಡು ಬಾರಿ ಮಾಡಿದ ಆದೇಶವನ್ನು ಗಾಳಿಗೆ ತೂರಿರುವ ಜಿಲ್ಲಾ ಮಟ್ಟದ ಅಧಿಕಾರಿಗಳು ಬೆಂಗಳೂರಿನಲ್ಲಿ ಲಾಕ್‌ಡೌನ್‌ ಇದ್ದರೂ ಯಾವುದೇ ಅಡ್ಡಿ ಇಲ್ಲದೆ ಬೆಂಗಳೂರಿನಿಂದ ಪ್ರಯಾಣಿಸುತ್ತಿದ್ದಾರೆ. ಲಾಕ್‌ಡೌನ್‌ ಆದ ಮೊದಲ ದಿನ ಸಂಚಾರಕ್ಕೆ ಕಠಿಣ ಪರಿಸ್ಥಿತಿ ಇರುತ್ತದೆ ಎಂಬ ಆತಂಕದಿಂದ ತಮ್ಮ ಅಪಾರ್ಟ್‌ಮೆಂಟ್‌ ಸೀಲ್‌ಡೌನ್‌ ಆಗಿದೆ ರಜೆ ಬೇಕು ಎಂದು ಮನವಿ ಮಾಡಿದ್ದ ಅಧಿಕಾರಿಗಳೂ ಗುರುವಾರ ಕಚೇರಿಗಳಿಗೆ ಹಾಜರಾಗಿದ್ದಾರೆ.

10 ದಿನ ಸೀಲ್‌ಡೌನ್‌ ಇದ್ದು, ಬರಲು ಸಾಧ್ಯವಿಲ್ಲ ಎಂದು ಹೇಳಿದ್ದವರು ಒಂದೇ ದಿನದಲ್ಲಿ ಸೀಲ್‌ಡೌನ್‌ ಹೇಗೆ ತೆರೆಯಲಾಯಿತು ಎಂಬ ಪ್ರಶ್ನೆಗೆ ಉತ್ತರಿಸುತ್ತಿಲ್ಲ. ಅಲ್ಲದೇ, ಅಧಿಕಾರಿಗಳು ಬರುವುದು ಮಾತ್ರವಲ್ಲದೇ, ತಮ್ಮ ಕಚೇರಿಯ ಸಿಬ್ಬಂದಿಯನ್ನೂ ತಮ್ಮದೇ ಕಾರಿನಲ್ಲಿ ಕರೆತರುತ್ತಿದ್ದು, ಸೋಂಕು ಹಬ್ಬುವ ಆತಂಕ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಸಿಬ್ಬಂದಿಗೆ ಕಾಡತೊಡಗಿದೆ. ಬರುವ ಅಧಿಕಾರಿಗಳು ಚೆಕ್‌ಪೋಸ್ಟ್‌ಗಳಲ್ಲಿ ತಡೆದು ವಾಪಸ್‌ ಕಳುಹಿಸಲಾಗುವುದು ಎಂದು ಹೇಳಿದ್ದ ಜಿಲ್ಲಾಧಿಕಾರಿಗಳು ಇತ್ತ ಗಮನಿಸದಿರುವುದೇ ಅಧಿಕಾರಿಗಳ ಓಡಾಟಕ್ಕೆ ಕಾರಣವಾಗಿದೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯಾದ್ಯಂತ ಲಾಕ್‌ಡೌನ್‌ಗೆ ದೇವೇಗೌಡರ ಆಗ್ರಹ

ಪ್ರಯೋಗಾಲಯದಲ್ಲಿ ತೊಂದರೆಯಾದ ಕಾರಣ ಎರಡು ಲ್ಯಾಬ್‌ ಮುಚ್ಚಿದೆ. ಹಲವು ಕಾರಣಗಳಿಂದ ಕೋವಿಡ್‌ ವರದಿ ಬರುವುದು ತಡವಾಗುತ್ತಿತ್ತು. ಬಾಗೇಪಲ್ಲಿಯ ಬಾರ್‌ ಕ್ಯಾಷಿಯರ್‌ ಒಬ್ಬರ ವರದಿ ತಡವಾಗಲೂ ಇದೇ ಕಾರಣ. ಸೋಮವಾರದಿಂದ ಚಿಕ್ಕಬಳ್ಳಾಪುರದಲ್ಲಿ ಪ್ರಯೋಗಾಲಯ ಆರಂಭವಾಗಲಿದ್ದು, ಈ ಎಲ್ಲ ತೊಂದರೆಗಳಿಗೆ ಪರಿಹಾರ ಸಿಗಲಿದೆ ಎಂದು ಬಾಗೇಪಲ್ಲಿ ತಾಲೂಕು ಆರೋಗ್ಯಾಧಿಕಾರಿ ಸತ್ಯನಾರಾಯಣರೆಡ್ಡಿ ತಿಳಿಸಿದ್ದಾರೆ.

-ಅಶ್ವತ್ಥನಾರಾಯಣ ಎಲ್‌.