ಕೊರೋನಾ ನಡುವೆಯೂ ಜೆಡಿಎಸ್ ಪಕ್ಷ ಸಂಘಟಿಸಿ: ದೇವೇಗೌಡ

ಜನರ ಸಂಕಷ್ಟಕ್ಕೆ ಸ್ಪಂದಿಸಿ| ಜೆಡಿ​ಎಸ್‌ ಮುಖಂಡರಿಗೆ ಎಚ್‌ಡಿಡಿ ಪತ್ರ| ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಬಡವರ ವಿರೋಧಿಯಾಗಿ ಮತ್ತು ರೈತರ ವಿರೋಧಿಯಾಗಿ ತೆಗೆದುಕೊಂಡಿರುವ ನಿರ್ಧಾರಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು|

Former PM H D Devegowda Talks Over JDS Party

ಬೆಂಗಳೂರು(ಜು.17):  ಕೊರೋನಾ ನಡುವೆಯೂ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಪಕ್ಷ ಸಂಘಟನೆಗೆ ಚುರುಕು ನೀಡುವಂತೆ ಮಾಜಿ ಪ್ರಧಾನಿಯೂ ಆದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಪಕ್ಷದ ಮುಖಂಡರಿಗೆ ಪತ್ರ ಬರೆದಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ನಮ್ಮದೇ ಪಕ್ಷದ ಮುಖ್ಯಮಂತ್ರಿ ಇದ್ದರೂ ನಿಮ್ಮ ಹಿತ ರಕ್ಷಿಸುವಲ್ಲಿ ನಾವು ಎಡವಿದ್ದೇವೆ. ನಾವು ಈ ವಿಚಾರದಲ್ಲಿ ತಪ್ಪು ಮಾಡಿದ್ದೇವೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ’ ಎಂದೂ ಗೌಡರು ಈ ಪತ್ರದಲ್ಲಿ ತಪ್ಪೊಪ್ಪಿಗೆ ರೀತಿ ತಿಳಿಸಿದ್ದಾರೆ.

ವಿಧಾನಸಭೆ ಚುನಾವಣೆ ಮುಗಿದು ಎರಡೂವರೆ ವರ್ಷಗಳಾಗಿವೆ. ಇನ್ನು ಒಂದು ವರ್ಷದ ನಂತರ ಚುನಾವಣೆಯ ಬಿಸಿ ಆರಂಭವಾಗುತ್ತದೆ. ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಪಕ್ಷ ನಿಷ್ಠರಾಗಿ ಇಷ್ಟುವರ್ಷ ನಮ್ಮೊಂದಿಗೆ ಕೆಲಸ ಮಾಡುತ್ತಾ ಬಂದಿರುವ ನಿಮ್ಮ ಭವಿಷ್ಯ ಉಜ್ವಲವಾಗಿರಬೇಕು ಎಂಬುದು ನನ್ನ ಅಪೇಕ್ಷೆ. ನಿಮ್ಮ ಉತ್ಸಾಹ ಮತ್ತು ಸ್ಥೈರ್ಯ ಕಳೆದುಕೊಂಡಿರುವುದು ಪಕ್ಷಕ್ಕೆ ಅಷ್ಟರ ಮಟ್ಟಿಗೆ ದೊಡ್ಡ ಹಾನಿಯುಂಟು ಮಾಡಿದೆ. ಮಂಕಾಗಿರುವ ಮತ್ತು ನಿಸ್ತೇಜವಾಗಿರುವ ಪಕ್ಷವನ್ನು ಇನ್ನೂ ಒಂದು ವರ್ಷದ ಅವಧಿಯಲ್ಲಿ ಚುರುಕುಗೊಳಿಸಲೇಬೇಕಾಗಿದೆ. ಇದರ ಅನಿವಾರ್ಯತೆಯನ್ನು ಎಲ್ಲ ಅರ್ಥ ಮಾಡಿಕೊಳ್ಳುತ್ತೀರೆಂದು ನಂಬಿದ್ದೇನೆ ಎಂದಿ​ದ್ದಾರೆ.

ರಾಜ್ಯಾದ್ಯಂತ ಲಾಕ್‌ಡೌನ್‌ಗೆ ದೇವೇಗೌಡರ ಆಗ್ರಹ

ದುರದೃಷ್ಟವಶಾತ್‌ ಇಡೀ ಜಗತ್ತು ಕೊರೋನಾ ಸೋಂಕಿನಿಂದ ಕಂಗೆಟ್ಟಿದೆ. ಇದಕ್ಕೆ ಕರ್ನಾಟಕ ಕೂಡ ಹೊರತಾಗಿಲ್ಲ. ಕೊರೋನಾ ಪರಿಸ್ಥಿತಿ ಇನ್ನು ಎಷ್ಟುತಿಂಗಳು ಮುಂದುವರೆಯುತ್ತದೋ ಎಂಬುದು ಗೊತ್ತಿಲ್ಲ. ಹಾಗೆಂದು ನಾವು ಕೈಕಟ್ಟಿಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ. 2018ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಕ್ಷೇತ್ರದ ಮಟ್ಟಿಗಾದರೂ ಕ್ರಿಯಾಶೀಲರಾಗಿರಬೇಕು. ಕ್ಷೇತ್ರದಲ್ಲಿ ನಿರಂತರವಾಗಿ ಜನರ ಸಂಪರ್ಕ ಕಾಯ್ದುಕೊಳ್ಳಬೇಕು. ಗ್ರಾಮ, ಹೋಬಳಿ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಲಾಕ್‌ಡೌನ್‌ ವೇಳೆ ಸಾರ್ವಜನಿಕವಾಗಿ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗದಿದ್ದರೂ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಗೌಡರು ಸಲಹೆ ನೀಡಿದ್ದಾರೆ.

ಅಲ್ಲದೆ, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಬಡವರ ವಿರೋಧಿಯಾಗಿ ಮತ್ತು ರೈತರ ವಿರೋಧಿಯಾಗಿ ತೆಗೆದುಕೊಂಡಿರುವ ನಿರ್ಧಾರಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು. ಇತ್ತೀಚೆಗೆ ಕೇಂದ್ರ ಸರ್ಕಾರ ಶೈಕ್ಷಣಿಕ ಸಂಸ್ಥೆಗಳು ಮುಚ್ಚಿರುವ ಕಾರಣ ಪಠ್ಯ ವಿಷಯಗಳನ್ನು ಕಡಿಮೆಗೊಳಿಸುವ ನೆಪದಲ್ಲಿ ಸಂವಿಧಾನದ ಮೂಲಕ ಆಶಯಗಳಾದ ಜಾತ್ಯತೀತತೆ, ಸಾಮಾಜಿಕ ನ್ಯಾಯ, ಸಮಾನತೆ, ಜನತಂತ್ರ, ಮೊದಲಾದ ಮೂಲಭೂತ ಸಂಗತಿಗಳಿಗೆ ಕತ್ತರಿ ಹಾಕುವ ಪ್ರಯತ್ನಕ್ಕೆ ಮುಂದಾಗಿದೆ. ಇದು ಮುಂಬರುವ ದಿನಗಳಲ್ಲಿ ಸರ್ವಾಧಿಕಾರಿ ಆಡಳಿತಕ್ಕೆ ದಾರಿಯಾಗಬಹುದು. ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios