ಮಂಗಳೂರು(ಜೂ.13): ಮಹಾರಾಷ್ಟ್ರದಿಂದ ಆಗಮಿಸಿದ ಕೊರೋನಾ ಸೋಂಕಿತೆ ತುಂಬು ಗರ್ಭಿಣಿಗೆ ನಗರದ ಜಿಲ್ಲಾ ಕೋವಿಡ್‌ ವೆನ್ಲಾಕ್‌ ಆಸ್ಪತ್ರೆಯಲ್ಲಿ ಸೂಸೂತ್ರ ಹೆರಿಗೆಯಾಗಿದ್ದು, ತಾಯಿ- ಮಗು ಆರೋಗ್ಯವಾಗಿದ್ದಾರೆ.

ಕಿನ್ನಿಗೋಳಿ ಮೂಲದ 30 ವರ್ಷದೊಳಗಿನ ಈ ಮಹಿಳೆ ಮಹಾರಾಷ್ಟ್ರದಿಂದ ಸೋಮವಾರವಷ್ಟೇ ಮಂಗಳೂರಿಗೆ ಬಂದಿದ್ದರು. ವೀಕ್‌ನೆಸ್‌ ಆದ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಲೇಡಿಗೋಶನ್‌ ಆಸ್ಪತ್ರೆಗೆ ಆಗಮಿಸಿದ್ದರು. ಅವರನ್ನು ತಪಾಸಣೆ ಮಾಡಿ ವಿಚಾರಿಸಿದಾಗ ಮುಂಬೈನಿಂದ ಆಗಮಿಸಿದ್ದಾಗಿ ಹೇಳಿದ್ದರಿಂದ ಆಕೆಯ ಆರೋಗ್ಯ ಕಾಳಜಿ ವಹಿಸಿ ವೆನ್ಲಾಕ್‌ ಆಸ್ಪತ್ರೆಯಲ್ಲಿ ಪ್ರತ್ಯೇಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು.

ದಕ್ಷಿಣ ಕನ್ನಡದಲ್ಲಿ ಮತ್ತೆ 17 ಪಾಸಿಟಿವ್‌, ನಾಲ್ವರು ಡಿಸ್ಚಾರ್ಜ್

ಬುಧವಾರ ತಡರಾತ್ರಿ ಅವರ ಗಂಟಲ ದ್ರವದ ಮಾದರಿ ವರದಿ ಪಾಸಿಟಿವ್‌ ಬಂದಿದ್ದು, ಪ್ರತ್ಯೇಕ ವಾರ್ಡ್‌ಗೆ ಸ್ಥಳಾಂತರ ಮಾಡಲಾಗಿತ್ತು. ಗುರುವಾರ ಬೆಳಗ್ಗೆ ಹೆರಿಗೆ ನೋವು ಕಂಡುಬಂದ ಹಿನ್ನೆಲೆಯಲ್ಲಿ ನುರಿತ ವೈದ್ಯರ ತಂಡ ಸಿಸೇರಿಯನ್‌ ಮೂಲಕ ಸುಸೂತ್ರ ಹೆರಿಗೆ ಮಾಡಿಸಿದ್ದಾರೆ.

ಹುಟ್ಟಿದ ಮಗು 2.9 ಕೆ.ಜಿ. ತೂಕ ಇದ್ದು ಸಹಜವಾಗಿ ಆರೋಗ್ಯವಾಗಿಯೇ ಇದೆ. ತಾಯಿಗೆ ಬಿಪಿ, ದೇಹದಲ್ಲಿ ನೀರು ಕಡಿಮೆ ಇದ್ದುದರಿಂದ ಸಿಸೇರಿಯನ್‌ ಹೆರಿಗೆ ಮಾಡಿಸಲಾಗಿದೆ. ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಗುವಿಗೆ ಬರಲ್ಲ: ‘‘ಕೊರೋನಾ ಸೋಂಕಿತೆ ತಾಯಿಯಿಂದ ಹುಟ್ಟಿದ ಮಗುವಿಗೆ ಸಾಮಾನ್ಯವಾಗಿ ಸೋಂಕು ತಗುಲುವುದಿಲ್ಲ. ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸುವ ಮೂಲಕ ತಾಯಿ ಹಾಲನ್ನು ಮಗುವಿಗೆ ಉಣಿಸಲಾಗುತ್ತಿದೆ. ಹುಟ್ಟಿದ ಮಗುವಿನಲ್ಲಿ ಸಹಜವಾಗಿ ರೋಗನಿರೋಧಕ ಶಕ್ತಿ ಇರುತ್ತದೆ. ಈಗಲೇ ಪರೀಕ್ಷೆ ಮಾಡಿಸಿದರೆ ನೆಗೆಟಿವ್‌ ಬರುವ ಸಾಧ್ಯತೆ ಇರುವುದರಿಂದ ಇನ್ನು ಕೆಲ ದಿನಗಳು ಬಿಟ್ಟು ಕೊರೋನಾ ಪರೀಕ್ಷೆ ಮಾಡಲಾಗುತ್ತದೆ’’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.