ದಕ್ಷಿಣ ಕನ್ನಡದಲ್ಲಿ ಮತ್ತೆ 17 ಪಾಸಿಟಿವ್, ನಾಲ್ವರು ಡಿಸ್ಚಾರ್ಜ್
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ನಿತ್ಯವೂ ಏರಿಕೆ ಹಾದಿಯಲ್ಲಿದ್ದು, ಶುಕ್ರವಾರ ಒಂದೇ ದಿನ 17 ಮಂದಿಗೆ ಪಾಸಿಟಿವ್ ವರದಿ ಬಂದಿದೆ.
ಮಂಗಳೂರು(ಜೂ.13): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ನಿತ್ಯವೂ ಏರಿಕೆ ಹಾದಿಯಲ್ಲಿದ್ದು, ಶುಕ್ರವಾರ ಒಂದೇ ದಿನ 17 ಮಂದಿಗೆ ಪಾಸಿಟಿವ್ ವರದಿ ಬಂದಿದೆ.
ಇವರಲ್ಲಿ 14 ಮಂದಿ ಸೌದಿ ಅರೇಬಿಯಾದಿಂದ ಬಂದವರಾಗಿದ್ದರೆ, ಮುಂಬೈನಿಂದ ಬಂದ ಇಬ್ಬರು, ಬೆಂಗಳೂರಿನಿಂದ ಆಗಮಿಸಿದ ಒಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ಸಭೆ: ಮತ್ತೆ ಲಾಕ್‌ಡೌನ್ ಆಗುತ್ತಾ?
ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗಿನ ಸೋಂಕಿತರ ಸಂಖ್ಯೆ 241ಕ್ಕೆ ಏರಿದೆ. ಒಟ್ಟು ನಾಲ್ಕು ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಈ 17 ಪ್ರಕರಣಗಳ ಪೈಕಿ 16 ಮಂದಿ ಪುರುಷರು, ಒಬ್ಬ ಮಹಿಳೆ. ಇವರೆಲ್ಲರನ್ನೂ ಜಿಲ್ಲಾ ಕೋವಿಡ್ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಬೆಂಗಳೂರಿನಿಂದ ಜೂ.7ರಂದು ಆಗಮಿಸಿದ 70 ವರ್ಷದ ವೃದ್ಧರೊಬ್ಬರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಈಗ ಅವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಮುಂಬೈನಿಂದ ಜೂ.8ರಂದು ಮಂಗಳೂರಿಗೆ ಆಗಮಿಸಿದ 38 ವರ್ಷದ ಮಹಿಳೆ, ಜೂ.9ರಂದು ಮುಂಬೈನಿಂದ ಆಗಮಿಸಿದ 52 ವರ್ಷದ ಪುರುಷ ಕ್ವಾರಂಟೈನ್‌ನಲ್ಲಿ ಇದ್ದು ವರದಿ ಪಾಸಿಟಿವ್ ಬಂದಿದೆ. ಉಳಿದಂತೆ ಸೌದಿ ಅರೇಬಿಯಾದಿಂದ ಆಗಮಿಸಿದ 43, 36, 43, 26, 25, 30, 37, 45, 28, 29, 27, 45, 52, 32 ವರ್ಷದ ಪುರುಷರಿಗೆ ಸೋಂಕು ತಗುಲಿದೆ.
ನಾಲ್ವರು ಸೋಂಕು ಮುಕ್ತ:
ಶುಕ್ರವಾರ ಜಿಲ್ಲೆಯಲ್ಲಿ ನಾಲ್ವರು ಕೊರೋನಾ ಸೋಂಕು ಮುಕ್ತರಾಗಿದ್ದಾರೆ. 40 ಮತ್ತು 52 ವರ್ಷದ ಇಬ್ಬರು ಗಂಡಸರು, 42 ಮತ್ತು 59 ವರ್ಷದ ಇಬ್ಬರು ಮಹಿಳೆಯರು ಗುಣಮುಖಗೊಂಡು ವೆನ್ಲಾಕ್ ಆಸ್ಪತ್ರೆಯಿಂದ ಡಿಸ್ಚಾಜ್‌ರ್ ಆಗಿದ್ದಾರೆ. ಇದುವರೆಗೆ ಒಟ್ಟು 129 ಮಂದಿ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇದೀಗ ಕೋವಿಡ್ ಆಸ್ಪತ್ರೆಯಲ್ಲಿ 105 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ ಬಹುತೇಕರ ಆರೋಗ್ಯ ಸ್ಥಿರವಾಗಿದೆ. 50 ವರ್ಷದ ಪುರುಷ ರೋಗಿಯೊಬ್ಬರು ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ತಿಳಿಸಿದ್ದಾರೆ.
236 ಹೊಸ ಸ್ಯಾಂಪಲ್ ರವಾನೆ
ಪ್ರಯೋಗಾಲಯದಿಂದ ಶುಕ್ರವಾರ ದೊರೆತ 47 ಮಂದಿಯ ಪರೀಕ್ಷಾ ವರದಿಯಲ್ಲಿ 17 ಪಾಸಿಟಿವ್ ಆಗಿದ್ದರೆ ಉಳಿದ 30 ನೆಗೆಟಿವ್ ಆಗಿವೆ. 188 ಮಂದಿಯ ವರದಿಯನ್ನು ನಿರೀಕ್ಷಿಸಲಾಗಿದೆ. 236 ಮಂದಿಯನ್ನು ಹೊಸದಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ. ಉಸಿರಾಟದ ಸಮಸ್ಯೆಯ 27 ಪ್ರಕರಣ ವರದಿಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.