ಕಾರವಾರ(ಜೂ.13): ಕುಮಟಾದ 56 ವರ್ಷದ ಪುರುಷನಿಗೆ ಕೋವಿಡ್‌ -19 ಸೋಂಕು ಶುಕ್ರವಾರ ಖಚಿತ ಪಡುವುದರೊಂದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಶತಕ ಬಾರಿಸಿದೆ.

ಮಹಾರಾಷ್ಟ್ರದಿಂದ ಕಾರಿನಲ್ಲಿ ಬಂದಿದ್ದ ವ್ಯಕ್ತಿ ನೇರವಾಗಿ ಕ್ವಾರೆಂಟೈನ್‌ಗೆ ಒಳಪಟ್ಟಿದ್ದ. ಈತನ ಗಂಟಲ ದ್ರವ ಪರೀಕ್ಷೆ ಮಾಡಲಾಗಿದ್ದು, ಶುಕ್ರವಾರ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಈತನ ಕುಟುಂಬ ಅಥವಾ ಸ್ಥಳೀಯರೊಂದಿಗೆ ಯಾವುದೆ ಸಂಪರ್ಕ ಹೊಂದದೆ ನೇರವಾಗಿ ಕ್ವಾರೆಂಟೈನ್‌ಗೆ ಒಳಪಟ್ಟಿರುವುದರಿಂದ ಸ್ಥಳೀಯರಲ್ಲಿ ಆತಂಕ ನಿವಾರಣೆಯಾದಂತಾಗಿದೆ.

ಡೆಡ್‌ಲೈನ್‌ಗಿಂತ 8 ತಿಂಗಳ ಮೊದಲೇ ಸೇತುವೆ ಉದ್ಘಾಟಿಸಿದ ಸಂಸದ

ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೀಗ ಕೋವಿಡ್‌ -19 ಸೋಂಕಿತರ ಸಂಖ್ಯೆ 100ಕ್ಕೇರಿದೆ. ಇವುಗಳಲ್ಲಿ 85 ಸೋಂಕಿತರು ಗುಣಮುಖರಾಗಿ ಇಲ್ಲಿನ ಮೆಡಿಕಲ್‌ ಕಾಲೇಜು ಕೋವಿಡ್‌ ವಾರ್ಡಿನಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಕುಮಟಾದ ವ್ಯಕ್ತಿಯೂ ಸೇರಿ 15 ಜನರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರಂಭದಲ್ಲಿ ದುಬೈಯಿಂದ ಭಟ್ಕಳಕ್ಕೆ ಬಂದವರು ಕೊರೋನಾ ಸೋಂಕನ್ನು ಹೊತ್ತು ತಂದರು. ಇದರಿಂದ ಅವರ ಕುಟುಂಬದವರಿಗೂ ಸೋಂಕು ವ್ಯಾಪಿಸಿತು. ಆದರೆ, ಜಿಲ್ಲೆಯಲ್ಲಿ ಸೋಂಕು ಕೇವಲ ಭಟ್ಕಳದಲ್ಲಿ ಮಾತ್ರ ಸೀಮಿತವಾಗಿತ್ತು. ನಂತರ ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸುತ್ತಿದ್ದಂತೆ ಜಿಲ್ಲೆಯ ಇತರೆಡೆಗಳಲ್ಲೂ ಕೋವಿಡ್‌ -19 ಸೋಂಕು ಕಾಣಿಸಿಕೊಂಡಿತು. ಜಿಲ್ಲೆಯ 12 ತಾಲೂಕುಗಳಲ್ಲಿ ಕೇವಲ ಅಂಕೋಲಾ ತಾಲೂಕನ್ನು ಹೊರತುಪಡಿಸಿದರೆ ಉಳಿದ ಎಲ್ಲ ತಾಲೂಕಿನಲ್ಲೂ ಕೊರೋನಾ ಸೋಂಕಿತರು ಕಂಡುಬಂದರು. ಅವರಲ್ಲಿ ಬಹುತೇಕ ಜನರು ಗುಣಮುಖರಾಗಿದ್ದಾರೆ.

ಉತ್ತರ ಕನ್ನಡದ ಬಹುತೇಕ ಸೋಂಕಿತರಲ್ಲಿ ನೆಗಡಿ, ಕೆಮ್ಮು, ಜ್ವರ, ಗಂಟಲು ನೋವು ಉಸಿರಾಟ ತೊಂದರೆ ಹೀಗೆ ಯಾವುದೆ ಲಕ್ಷಣಗಳು ಕಾಣಿಸಿಲ್ಲ. ಭಟ್ಕಳದ 84 ವರ್ಷದ ವೃದ್ಧನಲ್ಲಿ ಮಾತ್ರ ಉಸಿರಾಟ ತೊಂದರೆ ಕಾಣಿಸಿದರೂ ನಂತರ ಗುಣಮುಖರಾದರು. ಗರ್ಭಿಣಿಯರೂ ಗುಣಮುಖರಾಗಿದ್ದಾರೆ. ಇದುವರೆಗೆ ಯಾವುದೆ ಸಾವು ಉಂಟಾಗದಂತೆ ಸೋಂಕಿತರನ್ನು ಗುಣಮುಖ ಮಾಡುತ್ತಿರುವುದು ಜಿಲ್ಲೆಯ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಹೆಗ್ಗಳಿಕೆಯಾಗಿದೆ.

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ರೋಷನ್‌, ಜಿಲ್ಲಾ ಪೊಲೀಸ್‌ ವರಿಷ್ಠ ಡಾ. ಶಿವಪ್ರಸಾದ್‌ ದೇವರಾಜು, ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ನಿರಂತರ ಶ್ರಮದಿಂದ ಜಿಲ್ಲೆಯಲ್ಲಿ ಕೋವಿಡ್‌ -19 ನಿಯಂತ್ರಿಸುವಲ್ಲಿ ಸಫಲರಾಗಿದ್ದಾರೆ.

ಈಗ ಮಹಾರಾಷ್ಟ್ರದಿಂದ ಜನತೆ ಇನ್ನಷ್ಟುಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ದುಬೈನಿಂದಲೂ ಭಟ್ಕಳಕ್ಕೆ 184 ಜನರು ಆಗಮಿಸಲಿದ್ದಾರೆ. ಇವರೆಲ್ಲ ಕ್ವಾರೆಂಟೈನ್‌ ಅವಧಿಯನ್ನು ಸಮರ್ಪಕವಾಗಿ ಪೂರೈಸುವಂತಾಗಬೇಕು.

ಆರಂಭವಾದ ಮಳೆಗಾಲ, ಆತಂಕ

ಮಳೆಗಾಲ ಶುರುವಾಗಿದೆ. ಸಹಜವಾಗಿ ಜನತೆ ನೆಗಡಿ, ಕೆಮ್ಮು, ಜ್ವರ ಆರಂಭವಾಗಿದೆ. ಈಗ ಯಾವುದು ಪರೀಕ್ಷೆ ನಡೆಸುವ ಸವಾಲು ಎದುರಾಗಿದೆ. ಯಾವುದೆ ಸಹಜ ನೆಗಡಿ, ಕೆಮ್ಮು, ಯಾವುದು ಕೊರೋನಾ ಸೋಂಕಿನಿಂದ ಉಂಟಾಗಿದ್ದು ಎಂದು ತಿಳಿಯದೆ ಎಲ್ಲವನ್ನೂ ಪರೀಕ್ಷೆಯ ಮೂಲಕವೇ ತಿಳಿಯಬೇಕಿದೆ.

ವಿದೇಶ ಹಾಗೂ ಮಹಾರಾಷ್ಟ್ರದಿಂದ ಬರುವವರನ್ನು ಕ್ವಾರೆಂಟೈನ್‌ಗೆ ಒಳಪಡಿಸಲಾಗುವುದು. ಜಿಲ್ಲೆಯಲ್ಲಿ ಕೋವಿಡ್‌ -19 ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರದ್‌ ನಾಯಕ ತಿಳಿಸಿದ್ದಾರೆ.