ಉಡುಪಿ(ಜೂ.18): ಜಿಲ್ಲೆಯಲ್ಲಿ ಬುಧವಾರ 4 ಮಂದಿಗೆ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ. ಜಿಲ್ಲೆಯಲ್ಲೀಗ ಸೋಂಕಿತರ ಒಟ್ಟು ಸಂಖ್ಯೆ 1039 ಆಗಿದೆ. ಈ ನಾಲ್ಕು ಸೋಂಕಿತರಲ್ಲಿ 3 ಮಂದಿ ಮಹಾರಾಷ್ಟ್ರದಿಂದ ಬಂದವರು, ಅವರು 54 ವರ್ಷ ಮತ್ತು 16 ವರ್ಷದ ಪುರುಷರು ಹಾಗೂ 9 ವರ್ಷದ ಬಾಲಕನಾಗಿದ್ದಾರೆ.

ಅವರೆಲ್ಲರೂ ಕಳೆದ ವಾರ ಮುಂಬೈಯಿಂದ ಬಂದವರು. ಹಾಟ್‌ಸ್ಪಾಟ್‌ನಿಂದ ಬಂದವರಾದ್ದರಿಂದ ಅವರನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಈಗ ಅವರ ಪ್ರಾಥಮಿಕ ಸಂಪರ್ಕಿತರ ಮೇಲೂ ನಿಗಾ ಅರಿಸಲಾಗಿದೆ. ಇನ್ನೊಬ್ಬರು 22 ವರ್ಷದ ಮಹಿಳೆ, ಈಕೆ ಈ ಹಿಂದೆ ಕೊರೋನಾ ಸೋಂಕು ದೃಢಪಟ್ಟಮಣಿಪಾಲ ಆಸ್ಪತ್ರೆಯ ಲ್ಯಾಬ್‌ ಟೆಕ್ನಿಷಿಯನ್‌ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದವರಾಗಿದ್ದಾರೆ.

'ಹೊರ ರಾಜ್ಯಗಳಿಂದ ಬಂದವರಿಂದಲೇ ಕೊರೋನಾ ಸೋಂಕು ಹೆಚ್ಚಳ'

ಈ ಲ್ಯಾಬ್‌ ಟೆಕ್ನಿಷಿಯನ್‌ಗೆ ಸೋಂಕು ಹೇಗೆ ಬಂತು ಎನ್ನುವುದು ಇನ್ನೂ ಪತ್ತೆಯಾಗಿಲ್ಲ. ಆಸ್ಪತ್ರೆಯ ರಕ್ತ ಪರೀಕ್ಷೆ ಮಾಡುವ ಪ್ರಯೋಗಾಲಯದಲ್ಲಿ ಕೆಲಸ ಮಾಡುವ ಆಕೆಗೆ ಕೆಲಸದ ಸ್ಥಳದಲ್ಲಿಯೇ ಸೋಂಕು ತಗಲಿರುವ ಸಾಧ್ಯತೆ ಇದೆ. ಅವರ ಮನೆಯವರ ಮತ್ತು ಅವರ ಪ್ರಾಥಮಿಕ ಸಂಪರ್ಕದಲ್ಲಿರುವವರೆಲ್ಲರನ್ನೂ ಪರೀಕ್ಷೆಗೊಳಪಡಿಸಲಾಗಿದೆ. ಅವರಿಂದ ಈಗಾಗಲೇ ಅವರ 5 ವರ್ಷದ ಮಗುವೂ ಸೇರಿದಂತೆ ಒಟ್ಟು 4 ಮಂದಿಗೆ ಕೊರೋನಾ ಸೋಂಕು ಹರಡಿದೆ.

ಗುಣಮುಖರಾದವರೇ ಹೆಚ್ಚು; ಜಿಲ್ಲೆಯಲ್ಲೀಗ ಪತ್ತೆಯಾಗುತ್ತಿರುವ ಸೋಂಕಿತರಿಗಿಂತ ಬಿಡುಗಡೆಯಾಗುತ್ತಿರುವವ ಸಂಖ್ಯೆಯೇ ಹೆಚ್ಚಿರುವುದು ಸಮಾಧಾನಕರ ವಿಷಯವಾಗಿದೆ. ಬುಧವಾರ ಒಟ್ಟು 21 ಮಂದಿ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿ ಮನೆಗೆ ಹಿಂತೆರಳಿದ್ದಾರೆ. ಇದುವರೆಗೆ ಒಟ್ಟು 1039 ಸೋಂಕಿತರಲ್ಲಿ 906 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 130 ಮಂದಿ ಸಕ್ರಿಯ ಸೋಂಕಿತರು ಜಿಲ್ಲೆಯ 3 ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

5 ದಶಕ ತೆಪ್ಪಗಿದ್ದ ಚೀನಾ ಈಗ ಹಿಂಸೆ ನಡೆಸಿದ್ದೇಕೆ?: ಅಕ್ಸಾಯ್‌ಚಿನ್ ರಹಸ್ಯ!

ಜಿಲ್ಲೆಯಲ್ಲೀಗ 655 ಮಂದಿ ಹೋಂಕ್ವಾರಂಟೈನ್‌, ಒಬ್ಬರು ಆಸ್ಪತ್ರೆ ಕ್ವಾರಂಟೈನ್‌, 71 ಮಂದಿ ಐಸೋಲೇಷನ್‌ ವಾರ್ಡಿನಲ್ಲಿ ನಿಗಾದಲ್ಲಿದ್ದಾರೆ. ಬುಧವಾರ ಮತ್ತೆ 34 ಮಂದಿಯ ಗಂಟಲದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಅವರಲ್ಲಿ 21 ಮಂದಿ ಮುಂಬೈಯಿಂದ ಬಂದವರು, 4 ಮಂದಿ ಸೋಂಕಿತರ ಸಂಪರ್ಕದಲ್ಲಿದ್ದವರು, 6 ಮಂದಿ ಶೀತಜ್ವರ ಮತ್ತು 3 ಮಂದಿ ಉಸಿರಾಟದ ತೊಂದರೆಯಿಂದ ಬಳಲುತಿದ್ದವರಾಗಿದ್ದಾರೆ.