5 ದಶಕ ತೆಪ್ಪಗಿದ್ದ ಚೀನಾ ಈಗ ಹಿಂಸೆ ನಡೆಸಿದ್ದೇಕೆ?: ಅಕ್ಸಾಯ್‌ಚಿನ್ ರಹಸ್ಯ!
6 ದಶಕ ತೆಪ್ಪಗಿದ್ದ ಚೀನಾ ಈಗ ಜಗಳ ತೆಗೆದಿದ್ದೇಕೆ?| ಆರ್ಟಿಕಲ್ 370 ರದ್ದು ಬಳಿಕ ಎಚ್ಚೆತ್ತ ನೆರೆ ದೇಶ| ಅಕ್ಸಾಯ್‌ಚಿನ್ ಕೈತಪ್ಪುವ ಭೀತಿಯಿಂದ ಕುಕೃತ್ಯ
ನವದೆಹಲಿ(ಜೂ.18): ಭಾರತದೊಂದಿಗೆ ಹಂಚಿಕೊಂಡಿರುವ 3800 ಕಿ.ಮೀ ಉದ್ದದ ಗಡಿಭಾಗದಲ್ಲಿ ಚೀನಾ ಕ್ಯಾತೆ ಹೊಸತಲ್ಲವಾದರೂ, 6 ದಶಕಗಳ ಬಳಿಕ ಇದ್ದಕ್ಕಿದ್ದಂತೆ ಲಡಾಖ್ ವಲಯದಲ್ಲಿ ಚೀನಾ ಸೇನೆಯ ತೀವ್ರ ಚಟುವಟಿಕೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಅದರ ಬೆನ್ನಲ್ಲೇ ಚೀನಾದ ಈ ಕಳವಳದ ಹಿಂದೆ ಲಡಾಖ್ ಅನ್ನು ಜಮ್ಮು ಮತ್ತು ಕಾಶ್ಮೀದಿಂದ ಬೇರ್ಪಡಿಸಿದ ಭಾರತದ ನಿರ್ಧಾರ ಮತ್ತು ಭಾರತದಿಂದ ತಾನು ಹಿಂದೆ ವಶಪಡಿಸಿಕೊಂಡಿದ್ದ ಅಕ್ಸಾಯ್‌ಚಿನ್ ಕೈತಪ್ಪುವ ಭೀತಿ ಇರುವ ವಿಷಯ ಬೆಳಕಿಗೆ ಬಂದಿದೆ.
2019ರ ಆ.5ರಂದು ಭಾರತ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡುವುದರ ಜೊತೆಗೆ ಲಡಾಖ್‌ಗೆ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ನೀಡಿತ್ತು. ಇದಕ್ಕೆ ಪಾಕ್ ವ್ಯಕ್ತಪಡಿಸಿದ್ದ ಆಕ್ಷೇಪಕ್ಕೆ ಚೀನಾ ಕೂಡ ಧ್ವನಿಗೂಡಿಸಿತ್ತು. ಚೀನಾದ ಈ ಕ್ರಮ ತನ್ನ ಮಿತ್ರ ಪಾಕ್‌ಗೆ ಬೆಂಬಲ ಸೂಚಿಸುವುದರ ಜೊತೆಜೊತೆಗೇ, ಭಾರತದ ಜೊತೆ ತಾನು ಹೊಂದಿರುವ ಗಡಿ ವಿವಾದದ ಮೇಲೂ ಪರಿಣಾಮ ಬೀರುವ ಕಳವಳವನ್ನೂ ವ್ಯಕ್ತಪಡಿಸುವ ಉದ್ದೇಶ ಹೊಂದಿತ್ತು.
'ಗಡಿಯಲ್ಲಿ ಏನಾಗ್ತಿದೆ, ಶಸ್ತ್ರಾಸ್ತ್ರ ಇದ್ದರೂ ಕಲ್ಲುಗಳಿಂದೇಕೆ ಹೊಡೆದಾಡಿದ್ರು?'
ಕಾಶ್ಮೀರದಿಂದ ಲಡಾಖ್ ಬೇರ್ಪಡಿಸುವ ಭಾರತದ ಉದ್ದೇಶದ ಹಿಂದೆ, ಲಡಾಖ್‌ಗೆ ಸೇರಿದ ಭಾಗವಾದ ಅಕ್ಸಾಯ್‌ಚಿನ್ ಮೇಲೆ ಮರಳಿ ಹಕ್ಕು ಸಾಧಿಸುವ ಯತ್ನ ಇದೆ ಎಂಬುದು ಚೀನಾ ಗುಮಾನಿ. ಹೀಗಾಗಿಯೇ ಭಾರತದ ಈ ನಿರ್ಧಾರ ಏಕಪಕ್ಷೀಯವಾಗಿದ್ದು, ಚೀನಾದ ಸಾರ್ವಭೌಮತೆಗೆ ಧಕ್ಕೆ ತರುವಂತಿದೆ ಎಂದು ಚೀನಾ ಆರೋಪಿಸಿತ್ತು. ಇಷ್ಟಾದ ಮೇಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆ.6ರಂದು ಲೋಕಸಭೆಯಲ್ಲಿ ಮಾಡಿದ ಭಾಷಣದಲ್ಲಿ ಹಾಲಿ ಭಾರತದ ಭಾಗವಾಗಿರುವ ಜಮ್ಮು ಮತ್ತು ಕಾಶ್ಮೀರ ಮಾತ್ರವಲ್ಲದೇ, ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಕಾಶ್ಮೀರ ಭಾಗವೂ ಭಾರತಕ್ಕೆ ಸೇರಿದ್ದು, ಜೊತೆಗೆ 1963ರಲ್ಲಿ ಪಾಕಿಸ್ತಾನವು ಚೀನಾಕ್ಕೆ ನೀಡಿರುವ ಭೂಭಾಗ ಹಾಗೂ ಲಡಾಖ್‌ನ ಭಾಗವಾಗಿರುವ ಅಕ್ಸಾಯ್‌ಚಿನ್ ಕೂಡ ಭಾರತಕ್ಕೆ ಸೇರಿದ್ದು ಎಂದು ಪುನರುಚ್ಚರಿಸಿದ್ದರು.
ಬಳಿಕ ಆ.12ರಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಜೊತೆಗಿನ ಸಭೆ ವೇಳೆ ಭಾರತದ ವಿದೇಶಾಂಗ ಸಚಿವ ಜೈಶಂಕರ್, ಭಾರತ ತಾನು ಹೊಸದಾಗಿ ಯಾವುದೇ ಭೂಭಾಗದ ಮೇಲೆ ಹಕ್ಕು ಪ್ರತಿಪಾದಿಸುವ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದರೂ ಚೀನಾದ ಅನುಮಾನ ಕಡಿಮೆಯಾಗಿರಲಿಲ್ಲ.
ನಮ್ಮ ಯೋಧರ ಬಲಿದಾನ ವ್ಯರ್ಥವಾಗುವುದಿಲ್ಲ: ಹುತಾತ್ಮ ಯೋಧರಿಗೆ ಮೋದಿ ಶ್ರದ್ಧಾಂಜಲಿ!
ಇದರ ನಡುವೆಯೇ ಭಾರತ ಲಡಾಖ್ ವಲಯದಲ್ಲಿ ರಸ್ತೆ ನಿರ್ಮಾಣದ ಕಾಮಗಾರಿಗೆ ಚುರುಕು ನೀಡಿದ್ದು ಚೀನಾದ ಅನುಮಾನ ಹೆಚ್ಚಲು ಕಾರಣವಾಯ್ತು. ಭಾರತ ರಸ್ತೆ ನಿರ್ಮಾಣ ಮಾಡುತ್ತಿದ್ದ ಗಲ್ವಾನ್ ಪ್ರದೇಶ ಉಭಯ ದೇಶಗಳಿಗೂ ಅತ್ಯಂತ ಪ್ರಮುಖವಾದುದು. ಹೀಗಾಗಿಯೇ ಕ್ಸಿನ್‌ಜಿಯಾಂಗ್- ಟಿಬೆಟ್ ರಸ್ತೆ ಮತ್ತು ಅಕ್ಸಾಯ್‌ಚಿನ್ ಅನ್ನು ಭವಿಷ್ಯದಲ್ಲಿ ಕಾಪಾಡಿಕೊಳ್ಳಲು ಭಾರತದ ವಶದಲ್ಲಿರುವ ಗಲ್ವಾನ್ ಕಣಿವೆ ಪ್ರದೇಶವನ್ನು ಕೈವಶ ಮಾಡಿಕೊಳ್ಳುವುದು ಅಗತ್ಯ ಎಂದು ಮನಗಂಡ ಚೀನಾ ಈ ನಿಟ್ಟಿನಲ್ಲಿ ಹಲವು ತಿಂಗಳಿನಿಂದಲೇ ಯೋಜನೆ ರೂಪಿಸಿ ಅಲ್ಲಿ ಹಂತಹಂತವಾಗಿ ಸೇನೆ ನಿಯೋಜನೆ ಮಾಡಿತು. ಬಳಿಕ ಭಾರತದ ರಸ್ತೆ ಯೋಜನೆಗೆ ಅಡ್ಡಿ ಮಾಡುವ ಮೂಲಕ ಗಲ್ವಾನ್ ಕಣಿವೆ ಪ್ರದೇಶದ ಮೇಲಿನ ಭಾರತದ ಹಕ್ಕನ್ನು ಪ್ರಶ್ನಿಸುವ ಮತ್ತು ಬಲವಂತವಾಗಿ ಆ ಭಾಗದ ಮೇಲೆ ನಿಯಂತ್ರಣ ಸಾಧಿಸುವ ಯತ್ನ ಆರಂಭಿಸಿತು ಎಂದು ಮೂಲಗಳು ತಿಳಿಸಿವೆ.
ಇದಲ್ಲದೆ ಟಿಬೆಟ್‌ನಿಂದ ಹೊರದಬ್ಬಲ್ಪಟ ದಲೈಲಾಮಾ ಅವರಿಗೆ ಭಾರತ ಆಶ್ರಯ ನೀಡಿರುವುದು, ಟಿಬೆಟಿಯನ್ ಹೋರಾಟಕ್ಕೆ ಜಾಗತಿಕ ಮಟ್ಟದಲ್ಲಿ ಅಮೆರಿಕದ ಬೆಂಬಲ ಹೆಚ್ಚುತ್ತಿರುವ ವಿಷಯಗಳ ಕೂಡಾ ಭಾರತದ ಮೇಲೆ ಚೀನಾ ಹಲ್ಲು ಮಸೆಯಲು ಕಾರಣವಾಯ್ತು ಎನ್ನಲಾಗಿದೆ.