ಬೆಂಗಳೂರು(ಜು.31): ಪಾಸಿಟಿವ್‌ ವರದಿ ನೀಡದೇ ಆ್ಯಂಬುಲೆನ್ಸ್‌ ಹತ್ತುವುದಿಲ್ಲ ಎಂದು ಮೂವರು ಸೋಂಕಿತರು ಪಟ್ಟುಹಿಡಿದ ಪರಿಣಾಮ ಬಿಬಿಎಂಪಿ ಅಧಿಕಾರಿಗಳು ಪೊಲೀಸರ ನೆರವು ಪಡೆದು ಅವರನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ನಗರದಲ್ಲಿ ಗುರುವಾರ ನಡೆದಿದೆ.

ರಾಜಾಜಿನಗರದಲ್ಲಿ ಮೂವರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಬಿಬಿಎಂಪಿ ಸಿಬ್ಬಂದಿ ಆ್ಯಂಬುಲೆನ್ಸ್‌ ತೆಗೆದುಕೊಂಡು ಆಸ್ಪತ್ರೆಗೆ ಕರೆದೊಯ್ಯಲು ಬಂದಿದ್ದಾರೆ. ಈ ವೇಳೆ ಕೊರೋನಾ ಪಾಸಿಟಿವ್‌ ವರದಿ ಕೊಡುವಂತೆ ಪಟ್ಟು ಹಿಡಿದ ಸೊಂಕಿತರು ಆ್ಯಂಬುಲೆನ್ಸ್‌ ಏರಲು ಹಿಂದೇಟು ಹಾಕಿದ್ದಾರೆ.

ಕಂಟೈನ್‌ಮೆಂಟ್ ಪ್ರದೇಶದವರು ಕೆಲ್ಸಕ್ಕೆ ಹೋಗೋ ಹಾಗಿಲ್ಲ: BBMP

ನಮ್ಮ ಬಳಿ ವರದಿ ಇರುವುದಿಲ್ಲ. ನಿಮ್ಮ ಮೊಬೈಲ್‌ ಸಂಖ್ಯೆ ಹಾಗೂ ವಿಳಾಸ ಮಾತ್ರ ಕೊಡುತ್ತಾರೆ. ನಿಮ್ಮ ಮೊಬೈಲ್‌ಗೆ ಪಾಸಿಟವ್‌ ಇರುವ ಬಗ್ಗೆ ಸಂದೇಶ ಬಂದಿರುತ್ತದೆ ಪರಿಶೀಲಿಸಿ ಎಂದು ಸಿಬ್ಬಂದಿ ಹೇಳಿದ್ದಾರೆ.

ಇದ್ಯಾವುದಕ್ಕೂ ಸೊಪ್ಪು ಹಾಕದ ಸೋಂಕಿತರು, ಪಾಸಿಟಿವ್‌ ವರದಿ ತೋರಿಸಿದರೆ ಮಾತ್ರ ಆಸ್ಪತ್ರೆಗೆ ಬರುವುದು ಎಂದು ಗಲಾಟೆಗೆ ಮುಂದಾಗಿದ್ದಾರೆ. ಬಳಿಕ ಪೊಲೀಸರ ಸಹಾಯ ಪಡೆದು ಮೂವರು ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.