ಮಂಡ್ಯ(ಜು.21): ಕೊರೋನಾ ಏನೂ ಮಾಡಲ್ರೀ.. ಅದೊಂಥರಾ ನೆಗಡಿ- ತಲೆನೋವು ಇದ್ಹಂಗ..! ನಾವು ಭಯಪಟ್ಟಷ್ಟುಅದು ನಮ್ಮನ್ನ ಹೆದರಿಸಿತ್ತೆ.. ಹೆದರಿದವರ ಮೇಲೆ ಹಾವು ಬಿಟ್ಟಂತೆ ಈ ಕೊರೋನಾ ಭಯ ಕಣ್ರೀ...

-ಕೊರೋನಾ ಸೋಂಕಿಗೆ ಒಳಗಾಗಿ ಮಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ವಾಪಸ್‌ ಬಂದ ಮಂಡ್ಯ ಸೆಂಟ್ರಲ್‌ ಪೊಲೀಸ್‌ ಠಾಣೆಯ ಪೇದೆ ಹೂವಣ್ಣ ಬಿರಾದಾರ್‌ ಅವರ ಅನುಭವದ ಮಾತುಗಳು.

ಸಂಡೇ ಲಾಕ್‌ಡೌನ್, ರಾತ್ರಿ ಕರ್ಫ್ಯೂ: ಇಂದು ಹೊಸ ಮಾರ್ಗಸೂಚಿ ಪ್ರಕಟ

ಇವರು ಮೂಲತಃ ಬಿಜಾಪುರ ಜಿಲ್ಲೆ ಸಿಂಧಗಿ ತಾಲೂಕಿನ ಬಿಸುನಾಳ ಗ್ರಾಮದವರು. ಮೂರು ವರ್ಷದ ಹಿಂದೆ ಪೊಲೀಸ್‌ ಇಲಾಖೆಯಲ್ಲಿ ಕೆಲಸ ಸಿಕ್ಕಿತ್ತು. ಮಂಡ್ಯಕ್ಕೆ ನೇಮಕವಾಗಿ ಬಂದು ಸೆಂಟ್ರಲ್‌ ಪೊಲೀಸ್‌ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಜು.4ರಂದು ಅವರಿಗೆ ಗಂಟಲು ನೋವು ಕಾಣಿಸಿಕೊಂಡಿತ್ತು. ಆನಂತರದಲ್ಲಿ ನಡೆದ ಸಂಗತಿಗಳನ್ನೆಲ್ಲಾ ಅವರೇ ಬಿಚ್ಚಿಟ್ಟರು.

ಗಂಟಲು ಕೆರೆತ ಶುರು:

ನನಗೆ ಗಂಟಲು ಕೆರೆತ ಶುರುವಾಗಿತ್ತು. ಅನುಮಾನಗೊಂಡು ಜು.4ರಂದು ಕೋವಿಡ್‌-19 ಪರೀಕ್ಷೆ ಮಾಡಿಸಿಕೊಂಡೆ. ನನ್ನ ತಾಯಿ ಹಾಗೂ ಸಹೋದರರು ಊರಿನಲ್ಲಿರುವ ಕಾರಣ ಪೊಲೀಸ್‌ ಕ್ವಾಟ್ರಸ್‌ನ ಮನೆಯಲ್ಲಿ ಒಬ್ಬನೇ ಇದ್ದೇನೆ. ಆದ ಕಾರಣ ನಂತರದ ನಾಲ್ಕು ದಿನ ಮನೆಯಲ್ಲಿ ಸ್ವಯಂ ಗೃಹಬಂಧನಕ್ಕೆ ಒಳಗಾಗಿದ್ದೆ. ಜು.8ರಂದು ಪರೀಕ್ಷಾ ವರದಿ ಪಾಸಿಟಿವ್‌ ಎಂದು ಬಂದ ಬಳಿಕ ಡಿಎಚ್‌ಒ ಕಚೇರಿಯಿಂದ ಕರೆ ಬಂತು. ನಿಮ್ಮನ್ನು ಕೋವಿಡ್‌ ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್‌ ಕಳುಹಿಸುತ್ತಿದ್ದೇವೆ. ರೆಡಿಯಾಗಿರಿ ಎಂದರು.

ಪಿಪಿ ಕಿಟ್‌ ಧರಿಸಿದ್ದವರನ್ನು ಕಂಡು ಭಯ:

ನನ್ನನ್ನು ಆಸ್ಪತ್ರೆಗೆ ಕರೆದೊಯ್ಯಲು ಮನೆ ಹತ್ತಿರ ಆ್ಯಂಬುಲೆನ್ಸ್‌ ಬಂತು. ಪಿಪಿ ಕಿಟ್‌ ಧರಿಸಿದ್ದ ವೈದ್ಯ ಸಿಬ್ಬಂದಿ ಅಕ್ಷರಶಃ ನನ್ನ ಕಣ್ಣಿಗೆ ಯಮದೂತರಂತೆಯೇ ಕಂಡರು. ಅವರನ್ನು ಕಂಡೊನೆಯೇ ಭಯ, ಆತಂಕ, ತಳಮಳ ಶುರುವಾಯಿತು. ಅರ್ಧ ಜೀವವೇ ಹೋದ್ಹಂಗೆ ಆಯಿತು. ಇನ್ನು ಅವರು ಅಂಗ ರಕ್ಷಕರಂತೆ ನನ್ನ ಸುತ್ತ ನಡೆದು ಬಂದು ಆಸ್ಪತ್ರೆ ವಾರ್ಡ್‌ಗೆ ಕರೆತರುತ್ತಲೇ ನನ್ನ ಕಥೆ ಇಲ್ಲಿಗೆ ಮುಗಿದೇಹೋಯಿತು ಎಂಬ ಭಾವನೆ ನಮ್ಮಲ್ಲಿ ಮೂಡಿತ್ತು.

ವಾರ್ಡ್‌ ನೋಡಿ ಬೆಚ್ಚಿಬಿದ್ದೆ:

ಆ ವಾರ್ಡ್‌ನ್ನೊಮ್ಮೆ ನೋಡುತ್ತಲೇ ನನ್ನ ಎದೆಬಡಿತ ಜೋರಾಯಿತು. ಗಾಬರಿಗೊಳಗಾದೆ. ಮುಂದೇನು ಎಂಬ ಬಗ್ಗೆ ಚಿಂತೆ ಕಾಡಿತು. ಮಾನಸಿಕವಾಗಿ ಕುಸಿದುಹೋದೆ. ಭವಿಷ್ಯಕ್ಕೆ ಕತ್ತಲು ಕವಿದಂತಾಯಿತು. ಕೋವಿಡ್‌ ವಾರ್ಡ್‌ನಲ್ಲಿದ್ದವರೆಲ್ಲರೂ ಸೋಂಕಿತರು. ಅವರಲ್ಲಿ ರೋಗ ಲಕ್ಷಣಗಳು ಇಲ್ಲದವರು ಹಾಡಿಕೊಂಡು, ನರ್ತಿಸುತ್ತಾ ಇದ್ದರು. ಇನ್‌ಫä್ಲಯೆಂಜಾ, ಹೈಫೋಥೈರಾಯಿಡ್‌, ಮಧುಮೇಹ, ರಕ್ತದ ಒತ್ತಡದಿಂದ ಬಳಲುತ್ತಿದ್ದವರು ಮೌನವಾಗಿ ಮಲಗಿದ್ದರು.

ತಲೆಯಿಂದ ಅಡಿಯವರೆಗೂ ಪಿಪಿ ಕಿಟ್‌ ಧರಿಸಿದ ವೈದ್ಯರು ವಾರ್ಡ್‌ ಒಳಗೆ ಬಂದು ನಿಮಗೇನೂ ಆಗುವುದಿಲ್ಲ, ನೆಮ್ಮದಿಯಿಂದ ಇರುವಂತೆ ಧೈರ್ಯ ಹೇಳುತ್ತಿದ್ದರು. ಆದರೂ, ಏನೋ ಒಂಥರಾ ಭಯ ನಮ್ಮನ್ನು ಆವರಿಸಿತ್ತು. ನ್ಯೂಸ್‌ ಚಾನೆಲ್‌ಗಳಲ್ಲಿ ಬರುತ್ತಿದ್ದ ಕೊರೋನಾಗೆ ಬಲಿ ಎನ್ನುವ ಸುದ್ದಿಗಳು ನನ್ನ ಕಿವಿಯೊಳಗೆ ಮಾರ್ದನಿಸುತ್ತಿದ್ದವು. ಮಾನಸಿಕ ಆಘಾತಕ್ಕೆ ಒಳಗಾದವನಂತೆ ಕುಸಿದುಹೋದೆ.

ಊಟ-ತಿಂಡಿ ರುಚಿಸಲಿಲ್ಲ:

ಇದೇ ಭಯದಲ್ಲಿ ಇದ್ದ ನನಗೆ ಒಂದು ದಿನದವರೆಗೆ ಊಟ-ತಿಂಡಿಯ ರುಚಿ, ವಾಸನೆಯ ಅರಿವೇ ಇರಲಿಲ್ಲ. ಮರುದಿನದಿಂದಲೇ ನನಗೆ ನಾನೇ ಧೈರ್ಯ ತಂದುಕೊಂಡೆ. ವಾರ್ಡ್‌ನಲ್ಲಿದ್ದವರ ಜೊತೆ ಮಾತನಾಡಿದೆವು, ವಿಚಾರಗಳನ್ನು ವಿನಿಮಯ ಮಾಡಿಕೊಂಡೆವು. ಸೋಂಕಿಗೆ ಒಳಗಾಗಿ ನಿತ್ಯ ಆಸ್ಪತ್ರೆ ವಾರ್ಡ್‌ಗೆ ದಾಖಲಾಗುವವರಿಗೆ ಧೈರ್ಯ ಹೆಳುವುದು ನಮ್ಮ ದಿನಚರಿಯಾಗಿತ್ತು.

ಕೊರೋನಾ ಸೋಲಿಸಿದ 85ರ ಕ್ಯಾನ್ಸರ್‌ ರೋಗಿ, 78ರ ಪತ್ನಿ!

ಸೋಂಕಿಗೆ ಒಳಗಾದವರನ್ನು ನೋಡಲು ಕುಟುಂಬದವರ ಯಾತನೆಯನ್ನಂತೂ ಕೇಳುವಂತೆಯೇ ಇಲ್ಲ. ಅವರನ್ನು ಆಸ್ಪತ್ರೆಯ ಗೇಟ್‌ನಿಂದ ಒಳಗೆ ಬಿಡುತ್ತಿರಲಿಲ್ಲ. ಅವರು ದೂರದಲ್ಲಿಯೇ ನಿಂತು ಒಳಗಿರುವ ತಮ್ಮವರನ್ನು ಮೊಬೈಲ್‌ ಮೂಲಕ ಕರೆ ಮಾಡಿ ಆರೋಗ್ಯ ವಿಚಾರಿಸಿಕೊಂಡು ಕಣ್ಣೀರುಡುತ್ತಿದ್ದರು. ಅದೊಂದು ಕರುಣಾಜನಕ ದೃಶ್ಯವಾಗಿತ್ತು.

ಅರ್ಧಜೀವವಾಗುತ್ತಿದ್ದ ಸೂಕ್ಷ್ಮ ಮನಸ್ಸಿನವರು:

ಸೋಂಕಿತರಲ್ಲಿ ಸೂಕ್ಷ್ಮ ಮನಸ್ಸಿನವರೂ ಇದ್ದರು. ಆ್ಯಂಬುಲೆನ್ಸ್‌ ಬಂದಾಗಲೇ ಅರ್ಧ ಜೀವವಾಗಿಬಿಡುತ್ತಿದ್ದರು. ವಾರ್ಡ್‌ನ ಒಳಗೆ ಬರುತ್ತಲೇ ಕುಸಿದುಹೋಗುತ್ತಿದ್ದರು. ಮನಸ್ಸಿನಲ್ಲೇ ಆತ್ಮಹತ್ಯೆ ಮಾಡಿಕೊಂಡವರಂತೆ ಖಿನ್ನತೆಗೆ ಒಳಗಾಗಿ ಬಿಡುತ್ತಿದ್ದರು. ಇದೆಲ್ಲವೂ ವ್ಯವಸ್ಥೆ ಸೃಷ್ಟಿಸಿರುವ ಭಯದ ವಾತಾವರಣವಲ್ಲದೆ ಬೇರೇನೂ ಅಲ್ಲ. ಆಸ್ಪತ್ರೆಯಲ್ಲಿ ದಿನಕ್ಕೆ ಮೂರು ಹೊತ್ತು ಮಾತ್ರೆ, ಊಟವನ್ನು ಸಮಯಕ್ಕೆ ಸರಿಯಾಗಿ ನೀಡುತ್ತಾರೆ. ದಿನವೂ ದೇಹದ ಉಷ್ಣತೆ, ರಕ್ತದ ಒತ್ತಡ, ಮಧುಮೇಹ ತಪಾಸಣೆ ಮಾಡುವುದು ನಡೆಯುತ್ತದೆ. ಚಿಕಿತ್ಸೆ ಮತ್ತು ಸೋಂಕಿತರ ಆರೈಕೆ ಮಿಮ್ಸ್‌ನಲ್ಲಿ ಅಚ್ಚುಕಟ್ಟಾಗಿ ನಡೆಯುತ್ತಿರುವುದು ಸಂತೋಷದ ವಿಚಾರ.

ಭಯ ಪಟ್ಟಿದ್ದಕ್ಕೆ ನಾಚಿಕೆ

ಜನ ಕೊರೋನಾ ಎಂದ ಕೂಡಲೇ ಗಾಬರಿ ಪಡಬೇಕಿಲ್ಲ. ಅದೊಂದು ರೀತಿಯ ಸಾಮಾನ್ಯ ಜ್ವರ, ನೆಗಡಿ, ಗಂಟಲು ನೋವಷ್ಟೇ ಬೇರೇನೂ ಅಲ್ಲ. ಉಸಿರಾಟದ ಸಮಸ್ಯೆ ಇದ್ದವರನ್ನು ಮಾತ್ರ ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಾರೆ. ಸೋಂಕಿತರು ಮಾನಸಿಕ ಖಿನ್ನತೆಗೆ ಒಳಗಾಗಬಾರದು. ಕೊರೋನಾ ಕ್ಷೋಭೆಯಿಂದ ಹೊರಬಂದು ಶಾಂತವಾದ ಮೇಲೆ ನಾವು ಪಟ್ಟ ಭಯಕ್ಕೆ ನಮಗೇ ನಾಚಿಕೆ ಅನ್ನಿಸುತ್ತೆ. ಕೊರೋನಾ ನಿಮ್ಮನ್ನು ತೀವ್ರವಾಗಿ ಕಾಡುವುದೂ ಇಲ್ಲ, ಕೊಲ್ಲುವುದೂ ಇಲ್ಲ. ಇದಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿ.

ತಪ್ಪಾದ ಐಡಿ ಸಂಖ್ಯೆ: ಸೋಂಕಿಲ್ಲದಿದ್ದದೂ ಹೆದರಿದ ಕುಟುಂಬ, ಮನೆಯೇ ಸೀಲ್ಡೌನ್

ಕೊರೋನಾ ಸೋಂಕಿಗೆ ಒಳಗಾದ 12 ದಿನದ ಬಳಿಕ ರಕ್ತ ಪರೀಕ್ಷೆ ಮಾಡಿಸಿದೆ. ನೆಗೆಟಿವ್‌ ಬಂದ ಕಾರಣ ಆಸ್ಪತ್ರೆಯಿಂದ ಬಿಡುಗಡೆ ಮಾಡಿದರು. ನಮ್ಮ ಇಲಾಖೆಯ ಮೇಲಧಿಕಾರಿಗಳೇ ಬಂದು ನನ್ನನ್ನು ಸ್ವಾಗತಿಸಿದ್ದು, ನನ್ನ ಜೀವನದಲ್ಲಿ ಮರೆಯಲಾಗದ ಸಂದರ್ಭ. ಮತ್ತೆ 12 ದಿನದ ಹೋಂ ಕ್ವಾರೆಂಟೈನ್‌ನಲ್ಲಿ ಇರಬೇಕಂತೆ. ವೈದ್ಯರು ಹೇಳಿದಂತೆ ಇದ್ದೇನೆ. ಏನೂ ತೊಂದರೆಯಿಲ್ಲ ಎಂದು ಸೋಂಕಿನಿಂದ ಗುಣಮುಖನಾದ ಪೇದೆ ಹೂವಣ್ಣ ಬಿರಾದಾರ್‌ ತಿಳಿಸಿದ್ದಾರೆ.

-ಮಂಡ್ಯ ಮಂಜುನಾಥ