ಭುವನೇಶ್ವರ(ಜು.21): ಹಿರಿಯ ನಾಗರಿಕರು, ಹೃದಯ ಮತ್ತು ಕಿಡ್ನಿ ಸಮಸ್ಯೆಯ ರೋಗಿಗಳಿಗೆ ಕೊರೋನಾ ತೀವ್ರವಾಗಿ ಬಾಧಿಸುತ್ತದೆ ಅವರ ಚೇತರಿಕೆ ಕಷ್ಟಎಂಬ ವರದಿಗಳ ನಡುವೆಯೇ, 85 ವರ್ಷದ ಕ್ಯಾನ್ಸರ್‌ ರೋಗಿಯೊಬ್ಬರು ಕೊರೋನಾ ಗೆದ್ದುಬಂದಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಅಲ್ಲದೆ, ಅವರ 78 ವರ್ಷದ ಪತ್ನಿಯೂ ಕೊರೋನಾ ಜಯಿಸಿದ್ದಾರೆ. ತನ್ಮೂಲಕ ಬದುಕುವ ಆತ್ಮವಿಶ್ವಾಸದೊಂದಿಗೆ ಕೊರೋನಾವನ್ನು ಮಣಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಈ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿದ ಕೇಂದ್ರಪಾರಾ ಜಿಲ್ಲಾಧಿಕಾರಿ ಸಮರ್ಥ್ ವರ್ಮಾ, ಕ್ಯಾನ್ಸರ್‌ ರೋಗಿ ಸುರೇಂದ್ರ ಪಾಟಿ(85) ಹಾಗೂ ಅವರ ಪತ್ನಿ ಸಾಬಿತ್ರಿ ಪಾಟಿ(78) ಜೂನ್‌ 29ರಂದು ಕೊರೋನಾಕ್ಕೆ ತುತ್ತಾಗಿದ್ದರು. ಅವರನ್ನು ಕೊರೋನಾ ಆಸ್ಪತ್ರೆಯಲ್ಲಿ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಯಿತು. ಇದರ ಪರಿಣಾಮ ಕೇವಲ 10 ದಿನಗಳಲ್ಲೇ ಈ ವೃದ್ಧ ದಂಪತಿ ಗುಣಮುಖರಾಗಿದ್ದಾರೆ. ಅದರಲ್ಲೂ ವೃದ್ಧರು ಮತ್ತು ಕ್ಯಾನ್ಸರ್‌ ರೋಗಿಗಳಲ್ಲಿ ರೋಗ ನಿರೋಧಕ ಸಾಮರ್ಥ್ಯ ಕಡಿಮೆಯಿರುತ್ತದೆ. ಆದಾಗ್ಯೂ ಆತ್ಮವಿಶ್ವಾಸವೊಂದಿದ್ದರೆ ಎಲ್ಲವೂ ಸಾಧ್ಯವಾಗಲಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕೊರೋನಾ ಗೆದ್ದಿರುವ ಈ ವೃದ್ಧರು ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯರ ತಂಡ ಹಾಗೂ ಜನ ಸಾಮಾನ್ಯರಲ್ಲಿ ಆತ್ಮವಿಶ್ವಾಸವಾಗಿ ಸೆಲೆಯಾಗಿ ಹೊರಹೊಮ್ಮಿದ್ದಾರೆ ಎಂದಿದ್ದಾರೆ.

ಈ ನಡುವೆ ಕೊರೋನಾ ವೈರಸ್‌ ಅನ್ನು ಮೆಟ್ಟಿನಿಂತ ವೃದ್ಧ ದಂಪತಿಗೆ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರು ಅಭಿನಂದನೆ ಸಲ್ಲಿಸಿದ್ದಾರೆ.