Asianet Suvarna News Asianet Suvarna News

'ಹೋಟೆಲ್‌ ಸಿಬ್ಬಂದಿಗೆ 15 ದಿನಕ್ಕೊಮ್ಮೆ ಕೋವಿಡ್‌ ಟೆಸ್ಟ್‌ ಕಡ್ಡಾಯ'

ಬೆಂಗಳೂರಿನ ಹೋಟೆಲಲ್ಲಿ ಕೋವಿಡ್‌ ಮಾರ್ಗಸೂಚಿ ಪಾಲನೆ ಕಡ್ಡಾಯ| ಹೋಟೆಲ್‌ಗಳಲ್ಲಿ ಅಡುಗೆ ತಯಾರಕರು, ಊಟ ಬಡಿಸುವವರು ಕಡ್ಡಾಯವಾಗಿ ಕೈಗವಸು ಧರಿಸಬೇಕು| ಆರು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು| ಗ್ರಾಹಕರು ಮಾಸ್ಕ್‌ ಧರಿಸದಿದ್ದರೆ ಹೋಟೆಲ್ ಒಳಗೆ ಪ್ರವೇಶಿಸಲು ಅನುಮತಿ ನೀಡಬಾರದು| ಬಿಬಿಎಂಪಿ ಆಯುಕ್ತ ಖಡಕ್‌ ಸೂಚನೆ|

Covid Test Is Mandatory to Hotel Staff Every 15 days grg
Author
Bengaluru, First Published Mar 13, 2021, 9:24 AM IST

ಬೆಂಗಳೂರು(ಮಾ.13): ನಗರದಲ್ಲಿ ಕೊರೋನಾ ಸೋಂಕು ಹರಡುವುದನ್ನು ತಡೆಯಲು ಹೋಟೆಲ್‌ ಸಿಬ್ಬಂದಿ ಕಡ್ಡಾಯವಾಗಿ 15 ದಿನಕ್ಕೊಮ್ಮೆ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಿಕೊಳ್ಳುವುದು ಸೇರಿದಂತೆ ಸರ್ಕಾರ ಹೊರಡಿಸಿರುವ ಎಲ್ಲ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಹೊಟೇಲ್‌ ಮಾಲೀಕರಿಗೆ ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಸೂಚನೆ ನೀಡಿದ್ದಾರೆ.

ಶುಕ್ರವಾರ ಹೋಟೆಲ್‌ ಅಸೋಸಿಯೇಷನ್‌ ಪದಾಧಿಕಾರಿಗಳ ಜೊತೆಗೆ ವರ್ಚುಯಲ್‌ ಮೂಲಕ ನಡೆಸಿದ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಹೋಟೆಲ್‌ಗಳಲ್ಲಿ ಅಡುಗೆ ತಯಾರಕರು, ಊಟ ಬಡಿಸುವವರು ಕಡ್ಡಾಯವಾಗಿ ಕೈಗವಸು ಧರಿಸಬೇಕು. ಆರು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಗ್ರಾಹಕರು ಮಾಸ್ಕ್‌ ಧರಿಸದಿದ್ದರೆ ಹೋಟೆಲ್ ಒಳಗೆ ಪ್ರವೇಶಿಸಲು ಅನುಮತಿ ನೀಡಬಾರದು. ಊಟ ಮಾಡುವ ಅಥವಾ ಕಾಫಿ ಕುಡಿಯುವ ವೇಳೆ ಮಾತ್ರ ಮಾಸ್ಕ್‌ ತೆರೆಯಲು ಅನುಮತಿ ನೀಡಬೇಕು. ಪ್ರತಿಯೊಬ್ಬರಿಗೂ ಥರ್ಮಲ್‌ ಸ್ಕ್ಯಾ‌ನ್‌, ಹ್ಯಾಂಡ್‌ ಸ್ಯಾನಿಟೈಸರನ್ನು ಕಡ್ಡಾಯವಾಗಿಡಬೇಕು ಎಂದು ಸೂಚಿಸಿದರು.

71 ದಿನದ ಬಳಿಕ ಬೆಂಗ್ಳೂರಲ್ಲಿ 500ಕ್ಕೂ ಹೆಚ್ಚು ಕೊರೋನಾ ಕೇಸ್‌: ಆತಂಕದಲ್ಲಿ ಜನತೆ

ಪಾಲಿಕೆಯ ತಂಡ ಎಲ್ಲ ಹೋಟೆಲ್‌ಗಳ ಬಳಿ ಬಂದು ಉಚಿತವಾಗಿ ಕೋವಿಡ್‌ ಪರೀಕ್ಷೆ ಮಾಡಲಿದೆ. ಹೋಟೆಲ್‌ ಸಿಬ್ಬಂದಿ ಕಡ್ಡಾಯವಾಗಿ 15 ದಿನಕ್ಕೊಮ್ಮೆ ಆರ್‌ಟಿ-ಪಿಸಿಆರ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೋವಿಡ್‌ ಸೋಂಕು ಪತ್ತೆಯಾದಲ್ಲಿ ಸೋಂಕು ಪತ್ತೆಯಾದ ವ್ಯಕ್ತಿಯನ್ನು ಕೂಡಲೇ ಐಸೋಲೇಟ್‌ ಮಾಡಬೇಕು ಎಂದು ತಿಳಿಸಿದರು. ರಸ್ತೆ ಬದಿ ಹೋಟೆಲ್‌ ನಡೆಸುವವರ ಮೇಲೆ ಮಾರ್ಷಲ್‌ಗಳು ನಿಗಾ ವಹಿಸಲಿದ್ದು, ಕೋವಿಡ್‌ ನಿಯಮ ಪಾಲನೆ ಮಾಡದಿದ್ದರೆ ನಿಯಮಾನುಸಾರ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

ನಗರದ ಎಲ್ಲ ಹೋಟೆಲ್‌ಗಳಲ್ಲಿ 60 ವರ್ಷ ಮೇಲ್ಪಟ್ಟನೌಕರರು ಕೋವಿನ್‌ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಿಕೊಂಡು ಉಚಿತವಾಗಿ ಲಸಿಕೆ ಪಡೆಯಬೇಕು. 45 ವರ್ಷ ಮೇಲ್ಪಟ್ಟಅನ್ಯ ಕಾಯಿಲೆಗಳಿಂದ ಬಳಲುತ್ತಿರುವವರು ಸಹ ಲಸಿಕೆ ಪಡೆದು ಕೊಳ್ಳುವಂತೆ ತಿಳಿಸಿದರು. ಸಭೆಯಲ್ಲಿ ವಿಶೇಷ ಆಯುಕ್ತರಾದ ರಾಜೇಂದ್ರ ಚೋಳನ್‌, ಡಿ.ರಂದೀಪ್‌, ತುಳಸಿ ಮದ್ದಿನೇನಿ ಸೇರಿದಂತೆ ಹೋಟೆಲ್‌ ಅಸೋಸಿಯೇಷನ್‌ ಪದಾಧಿಕಾರಿಗಳು ಉಪಸ್ಥಿತರಿದ್ದರು.
 

Follow Us:
Download App:
  • android
  • ios