ಬೆಂಗಳೂರು(ಮಾ.13): ನಗರದಲ್ಲಿ ಕೊರೋನಾ ಸೋಂಕಿತರ ಪತ್ತೆ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಕಳೆದ 71 ದಿನಗಳಲ್ಲಿ ಇದೇ ಮೊದಲ ಬಾರಿಗೆ 500ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ನಗರದ ಕೆಲವೆಡೆ ಕ್ಲಸ್ಟರ್‌ ಮಾದರಿಯ ಸೋಂಕು ಪ್ರಕರಣಗಳು ಪತ್ತೆಯಾಗುವುದರ ಜತೆಗೆ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದು ನಗರದಲ್ಲಿ ಕೊರೋನಾ ಎರಡನೇ ಅಲೆಯ ಆತಂಕ ಸೃಷ್ಟಿಗೆ ಕಾರಣವಾಗಿದೆ. ಈ ಹಿಂದೆ ಜನವರಿ 1ರಂದು 554 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದವು. ಬಳಿಕ ಈವರೆಗೂ ದಿನಕ್ಕೆ 500ಕ್ಕೂ ಅಧಿಕ ಸೋಂಕು ಇದ್ದ ಪ್ರಕರಣಗಳು ಕಂಡುಬಂದಿರಲಿಲ್ಲ.

2ನೇ ಅಲೆ ಆತಂಕ: ಮತ್ತೊಮ್ಮೆ ಲಾಕ್‌ಡೌನ್‌, ಸುಧಾಕರ್‌ ಪ್ರತಿಕ್ರಿಯೆ

ಇದೀಗ ನಗರದಲ್ಲಿ ಶುಕ್ರವಾರ 526 ಜನರಲ್ಲಿ ಹೊಸದಾಗಿ ಕೊರೋನಾ ಸೋಂಕು ಪತ್ತೆಯಾಗಿದ್ದು, 341 ಮಂದಿ ಗುಣಮುಖರಾಗಿದ್ದಾರೆ. ಸೋಂಕಿನಿಂದ ಇಬ್ಬರು ಮೃತಪಟ್ಟಿರುವ ವರದಿಯಾಗಿದೆ. ಈ ಮೂಲಕ ನಗರದಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 4,10,181ಕ್ಕೆ ಏರಿಕೆಯಾಗಿದ್ದು, ಗುಣಮುಖರ ಸಂಖ್ಯೆ 3,99,656ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 6008ಕ್ಕೆ ಏರಿಕೆಯಾಗಿದೆ. ಈ ಪೈಕಿ 49 ರೋಗಿಗಳ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದು, ಈವರೆಗೆ ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ 4516ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

29,212 ಮಂದಿಗೆ ಲಸಿಕೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಶುಕ್ರವಾರ 379 ಲಸಿಕಾ ಕೇಂದ್ರಗಳಲ್ಲಿ ಒಟ್ಟು 29,212 ಮಂದಿ ಕೋವಿಡ್‌ ಲಸಿಕೆ ಹಾಕಿಸಿಕೊಂಡಿದ್ದಾರೆ. ಈ ಪೈಕಿ 60 ವರ್ಷ ಮೇಲ್ಪಟ್ಟ 19845 ಮಂದಿ ಲಸಿಕೆಯ ಮೊದಲ ಡೋಸ್‌ ಹಾಕಿಸಿಕೊಂಡಿದ್ದಾರೆ. 45 ವರ್ಷದಿಂದ 60 ವರ್ಷದೊಳಗಿನ 3548 ಮಂದಿ ಮೊದಲ ಡೋಸ್‌ ಪಡೆದುಕೊಂಡಿದ್ದಾರೆ. ಆರೋಗ್ಯ ಕಾರ್ಯಕರ್ತರಲ್ಲಿ 2091 ಮಂದಿ ಮೊದಲ ಮತ್ತು 2653 ಮಂದಿ ಎರಡನೇ ಡೋಸ್‌ ಲಸಿಕೆ ಹಾಕಿಸಿಕೊಂಡಿದ್ದಾರೆ. ಕೋವಿಡ್‌-19 ಮುಂಚೂಣಿ ಕಾರ್ಯಕರ್ತರಲ್ಲಿ 409 ಮಂದಿ ಮೊದಲ ಡೋಸ್‌ ಹಾಗೂ 666 ಮಂದಿ ಎರಡನೇ ಡೋಸ್‌ ಪಡೆದುಕೊಂಡಿದ್ದಾರೆ ಎಂದು ಬಿಬಿಎಂಪಿ ತಿಳಿಸಿದೆ.