ಬೆಂಗಳೂರು(ನ.05): ಉಪ ಚುನಾವಣೆ ನಡೆದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ನ.6 ರಿಂದ 9 ಹಾಗೂ ನ.11ರಿಂದ 14 ರವರೆಗೆ ಕೊರೋನಾ ಸೋಂಕು ಪರೀಕ್ಷೆ ನಡೆಯಲಿದೆ. ಚುನಾವಣಾ ಪ್ರಚಾರದ ವೇಳೆ ಮಾಸ್ಕ್‌ ಧರಿಸದೇ ಇರುವ, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಕಾರಣ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿರುವುದರಿಂದ ಸೋಂಕು ಪರೀಕ್ಷೆ ನಡೆಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಜ್ಞರು ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ಸೋಂಕು ಪರೀಕ್ಷೆಗೆ ಸಲಹೆ ನೀಡಿರುವ ಕಾರಣ ಎರಡು ಹಂತದಲ್ಲಿ ಕೊರೋನಾ ಸೋಂಕು ಪರೀಕ್ಷೆ ನಡೆಸಲು ಯೋಜನೆ ರೂಪಿಸುವಂತೆ ಜಂಟಿ ಆಯುಕ್ತರು ಹಾಗೂ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸೋಂಕು ಪರೀಕ್ಷೆಗೆ ಬೇಕಾದ ಹೆಚ್ಚುವರಿ ತಂಡ, ಪರೀಕ್ಷಾ ಸಾಮಗ್ರಿಗಳ ಬಗ್ಗೆ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ ಎಂದು ವಿವರಿಸಿದರು.

ಮೂರು ವರ್ಗದ ಆದ್ಯತೆ:

ಆರ್‌ಆರ್‌ ನಗರದಲ್ಲಿ ಮೂರು ವರ್ಗದವರನ್ನು ಗುರಿಯಾಗಿಸಿಕೊಂಡು ಕೊರೋನಾ ಸೋಂಕು ಪರೀಕ್ಷೆಗೆ ತಜ್ಞರು ಸಲಹೆ ನೀಡಿದ್ದಾರೆ. ಕಳೆದ ಒಂದು ತಿಂಗಳಿಂದ ಉಪ ಚುನಾವಣೆ ಕಾರ್ಯದಲ್ಲಿ ತೊಡಗಿಸಿಕೊಂಡ ಪೊಲೀಸ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿ, ಸೋಂಕಿನ ಲಕ್ಷಣ ಹೊಂದಿರುವವರು ಹಾಗೂ ಹಿರಿಯ ನಾಗರಿಕರಿಗೆ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ 2 ಕೋಟಿ ಜನರಿಗೆ ಈಗಾಗಲೇ ಕೊರೋನಾ, ಆ್ಯಂಟಿಬಾಡಿ ಪತ್ತೆ!

ಈಗಾಗಲೇ 80 ವರ್ಷ ಮೇಲ್ಪಟ್ಟ 5,560 ಹಿರಿಯ ನಾಗರಿಕರು ಹಾಗೂ ಚುನಾವಣೆಯಲ್ಲಿ ತೊಡಗಿಸಿಕೊಂಡ ಅಧಿಕಾರಿ ಸಿಬ್ಬಂದಿ ಮಾಹಿತಿ ಇದೆ. ಅದರೊಂದಿಗೆ 60 ವರ್ಷ ಮೇಲ್ಪಟ್ಟವರನ್ನು ಪಟ್ಟಿಮಾಡಲು ಹಾಗೂ ರೋಗ ಲಕ್ಷಣ ಇರುವವರ ಪತ್ತೆಗೆ ಖಾಸಗಿ ಆಸ್ಪತ್ರೆ, ಕ್ಲಿನಿಕ್ಸ್‌ ಹಾಗೂ ಆರ್‌ಆರ್‌ ನಗರ ವ್ಯಾಪ್ತಿಯಲ್ಲಿರುವ ಮೆಡಿಕಲ್‌ ಶಾಪ್‌ಗಳಿಂದ ಮಾಹಿತಿ ಸಂಗ್ರಹಿಸುವುದಕ್ಕೆ ಸೂಚಿಸಲಾಗಿದೆ ಎಂದು ವಿವರಿಸಿದರು.

ಒಟ್ಟು 20 ಕೇಸ್‌:

ಆರ್‌.ಆರ್‌ನಗರದ ಉಪಚುನಾವಣೆ ಸಂದರ್ಭದಲ್ಲಿ ಮಾಸ್ಕ್‌ ಧರಿಸದೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ನಿಯಮ ಉಲ್ಲಂಘನೆ ಮಾಡಿರುವ ಆರೋಪದ ಮೇಲೆ 20 ಕ್ರಿಮಿನಲ್‌ ಕೇಸ್‌ಗಳನ್ನು ದಾಖಲಿಸಲಾಗಿದೆ. ಪೊಲೀಸರು ತನಿಖೆ ನಡೆಸಿ ನಂತರ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ.

ನೋಟಿಸ್‌ ಪಡೆದ 7 ಆಸ್ಪತ್ರೆ ಉತ್ತರ

ಸರ್ಕಾರ ಕೋಟಾದಡಿ ಶೇ.50 ರಷ್ಟು ಹಾಸಿಗೆಗಳನ್ನು ಬಿಬಿಎಂಪಿ ಶಿಫಾರಸು ಮಾಡಿದ ಕೊರೋನಾ ಸೋಂಕಿತರಿಗೆ ನೀಡದ ಏಳು ಆಸ್ಪತ್ರೆಗಳಿಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ಏಳು ಆಸ್ಪತ್ರೆಗಳೂ ಸಹ ನೋಟಿಸ್‌ಗೆ ಉತ್ತರಿಸಿದ್ದು, ಶೇ.50 ರಷ್ಟು ಹಾಸಿಗೆ ನೀಡಿವೆ. ಇಷ್ಟು ದಿನ ಹಾಸಿಗೆ ನೀಡದಿರುವುದಕ್ಕೆ ಆಸ್ಪತ್ರೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ಪರಿಶೀಲಿಸಲಾಗುವುದು ಎಂದು ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.