ಬೆಂಗಳೂರು(ನ.05): ರಾಜ್ಯದಲ್ಲಿ ನಡೆಸಲಾದ ಸೆರೋಲಾಜಿಕಲ್‌ ಸಮೀಕ್ಷೆಯಲ್ಲಿ ಶೇ.16ರಷ್ಟುಜನರಲ್ಲಿ ಕೋವಿಡ್‌-19 ಐಜಿಜಿ ಪ್ರತಿಕಾಯ (ಇಮ್ಯುನೋಗ್ಲೋಬಿನ್‌-ಜಿ ಆ್ಯಂಟಿಬಾಡಿ) ಅಭಿವೃದ್ಧಿಯಾಗಿರುವುದು ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದ ಒಟ್ಟು 7 ಕೋಟಿ ಜನಸಂಖ್ಯೆಯಲ್ಲಿ 1.93 ಕೋಟಿ (ಶೇ.27.3ರಷ್ಟು) ಜನರು ಸೋಂಕಿಗೊಳಗಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಂದಾಜಿಸಿದೆ.

"

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ.ಸುಧಾಕರ್‌ ಮಂಗಳವಾರ ವಿಧಾನಸೌಧದಲ್ಲಿ ಸೆರೋಲಾಜಿಕಲ್‌ ಸಮೀಕ್ಷಾ ವರದಿ ಬಿಡುಗಡೆ ಮಾಡಿದರು. ರಾಜ್ಯದಲ್ಲಿ ಸೋಂಕಿನ ಹರಡುವಿಕೆಯ ಅಂದಾಜು ಮಾಡಲು ಸೆ.3ರಿಂದ 16ರವರೆಗೆ ರಾಜ್ಯದಲ್ಲಿ ಮೊದಲ ಹಂತದ ಸೆರೋಲಾಜಿಕಲ್‌ ಸಮೀಕ್ಷೆ ನಡೆಸಲಾಗಿದ್ದು, ಸಮೀಕ್ಷೆಯಲ್ಲಿ ಬಸ್‌ ಡ್ರೈವರ್‌, ಕಂಡಕ್ಟರ್‌, ವ್ಯಾಪಾರಿಗಳು, ಪಾದಚಾರಿಗಳು ಸೇರಿದಂತೆ ಒಟ್ಟು 16,585 ಜನರ ಮಾದರಿಗಳನ್ನು ಪಡೆದು ಪರೀಕ್ಷಿಸಲಾಗಿದೆ. ಇದರಲ್ಲಿ 15,624 ಜನರ ಫಲಿತಾಂಶ ಬಂದಿದ್ದು, ಈ ಪೈಕಿ ಶೇ.16ರಷ್ಟುಜನರಿಗೆ ಕೋವಿಡ್‌ ವೈರಸ್‌ ತಗುಲಿ ಐಜಿಜಿ ಪ್ರತಿಕಾಯ ಅಭಿವೃದ್ಧಿಯಾಗಿರುವುದು ಪತ್ತೆಯಾಗಿದೆ ಎಂದು ತಿಳಿಸಿದರು.

ಈ ಸಮೀಕ್ಷೆಯಲ್ಲಿ ಪತ್ತೆಯಾದ ಪ್ರಕರಣಗಳು ಹಾಗೂ ಸಮೀಕ್ಷೆಗೂ ಮುನ್ನ ಇಲಾಖೆ ನಡೆಸಿದ ದೈನಂದಿನ ಕೊರೋನಾ ಪರೀಕ್ಷೆಗಳ ಮೂಲಕ ಪತ್ತೆಯಾದ ಲಕ್ಷಾಂತರ ಕೋವಿಡ್‌ ಪ್ರಕರಣಗಳನ್ನೂ ಒಳಗೊಂಡಂತೆ ಇದುವರೆಗೆ (ಸೆ.16ರ ವರೆಗೆ) ರಾಜ್ಯದಲ್ಲಿ ಒಟ್ಟು ಜನಸಂಖ್ಯೆಯ ಶೇ.27.3ರಷ್ಟುಅಂದರೆ ಸುಮಾರು 1.93 ಕೋಟಿ ಜನರಿಗೆ ಸೋಂಕು ತಗಲಿರುವುದಾಗಿ ಅಂದಾಜಿಸಲಾಗಿದೆ. ಮುಂದಿನ ಡಿಸೆಂಬರ್‌ ಹಾಗೂ ಮಾಚ್‌ರ್‍ನಲ್ಲಿ ಮತ್ತೆ ಎರಡು ಹಾಗೂ ಮೂರನೇ ಹಂತದ ಸೆರೋಲಾಜಿಕಲ್‌ ಸರ್ವೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.

ಮುಂಬೈ, ಪುಣೆ, ದೆಹಲಿ ನಗರದ ಕೆಲವು ಪ್ರದೇಶಗಳಲ್ಲಿ ಮಾತ್ರ ಅಲ್ಲಿನ ಸರ್ಕಾರಗಳು ಸೆರೋಲಾಜಿಕಲ್‌ ಸಮೀಕ್ಷೆ ನಡೆಸಿವೆ. ಆದರೆ, ಕರ್ನಾಟಕದಲ್ಲಿ ಎಲ್ಲ 30 ಜಿಲ್ಲೆ ಮತ್ತು ಬೆಂಗಳೂರಿನ ಎಂಟು ಬಿಬಿಎಂಪಿ ವಲಯದಲ್ಲಿಯೂ ಪರೀಕ್ಷೆ ನಡೆಸಲಾಗಿದೆ. ಕಡಿಮೆ ಅಪಾಯದ ಗುಂಪು (ಕಡಿಮೆ ರಿಸ್ಕ್‌), ಮಧ್ಯಮ ಸ್ತರದ ಗುಂಪು (ಮಧ್ಯಮ ರಿಸ್ಕ್‌) ಮತ್ತು ಅತಿ ಹೆಚ್ಚು ಅಪಾಯದಲ್ಲಿರುವ ಗುಂಪು (ಹೆಚ್ಚು ರಿಸ್ಕ್‌) ಎಂದು ಮೂರೂ ವರ್ಗೀಕರಣ ಮಾಡಿ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವೇಳೆ ಒಟ್ಟಾರೆ ಶೇ.16ರಷ್ಟುಜನರಲ್ಲಿ ಆ್ಯಂಟಿಬಾಡಿ ಅಭಿವೃದ್ಧಿಯಾಗಿರುವುದು ಗೊತ್ತಾಗಿದೆ ಎಂದು ಹೇಳಿದರು.

ಜಿಲ್ಲಾವಾರು ವಿಜಯಪುರ ಹಾಗೂ ಬಳ್ಳಾರಿಯಲ್ಲಿ ಅತಿ ಹೆಚ್ಚು ಕ್ರಮವಾಗಿ ಶೇ.23.9 ಜನರಿಗೆ ಮತ್ತು ಶೇ.22.1ರಷ್ಟುಜನರಲ್ಲಿ ಕೋವಿಡ್‌ ವಿರುದ್ಧದ ಪ್ರತಿಕಾಯಗಳು ಅಭಿವೃದ್ಧಿಯಾಗಿವೆ. ಅದೇ ರೀತಿ ಜಿಲ್ಲಾವಾರು ಜನಸಂಖ್ಯೆಯಲ್ಲಿ ಹೆಚ್ಚು ಸೋಂಕಿಗೊಳಗಾಗಿರುವ ಜಿಲ್ಲೆಗಳಲ್ಲಿ ಬಳ್ಳಾರಿ ಶೇ.43.1ರಷ್ಟು, ದಾವಣಗೆರೆ ಶೇ.40.6ರಷ್ಟುಜನರಿಗೆ ಸೋಂಕು ತಗುಲಿದೆ ಎಂದು ಅಂದಾಜಿಸಲಾಗಿದೆ.

"

ಸೆರೋ ಸರ್ವೆಯಲ್ಲಿ ಅತಿ ಕಡಿಮೆ ಎಂದರೆ ಬಾಗಲಕೋಟೆಯಲ್ಲಿ ಶೇ.4.1ರಷ್ಟುಜನರಲ್ಲಿ, ಗದಗದ ಶೇ.6.3ರಷ್ಟುಜನರಲ್ಲಿ ಮಾತ್ರ ಕೋವಿಡ್‌ ಪ್ರತಿಕಾಯಗಳು ಪತ್ತೆಯಾಗಿವೆ. ಇದರ ಆಧಾರದಲ್ಲಿ ಜನಸಂಖ್ಯೆವಾರು ಈ ಜಿಲ್ಲೆಗಳಲ್ಲಿ ಕ್ರಮವಾಗಿ ಶೇ.12 ಮತ್ತು ಶೇ.9ರಷ್ಟುಜನರಿಗೆ ಸೋಂಕು ತಗುಲಿರಬಹುದೆಂದು ನಿರ್ಣಯಕ್ಕೆ ಬರಲಾಗಿದೆ. ಇನ್ನು ಉಡುಪಿಯಲ್ಲಿ ಶೇ.16.2 ಜನರಿಗೆ ಪ್ರತಿಕಾಯ ಪತ್ತೆಯಾಗಿದ್ದರೂ ಒಟ್ಟು ಶೇ.36.4ರಷ್ಟುಜನರು ಸಮೀಕ್ಷಾ ದಿನದವರೆಗೆ ಸೋಂಕಿತರಾಗಿದ್ದಾರೆ ಎಂದು ಅಂದಾಜಿಸಲಾಗಿದೆ.

ಪುನರ್ವಸತಿ ಕೇಂದ್ರ ಸ್ಥಾಪನೆ:

ಕೋವಿಡ್‌ ಸೋಂಕಿಗೊಳಗಾಗಿ ಗುಣಮುಖರಾದವರ ಆರೋಗ್ಯದ ಮೇಲೆ ನಿಗಾ ವಹಿಸಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಪುನರ್ವಸತಿ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಕೋವಿಡ್‌ ಸೋಂಕಿಗೊಳಗಾದವರಿಗೆ ಬೇರೆ ರೀತಿಯಲ್ಲಿ ಆರೋಗ್ಯದ ಸಮಸ್ಯೆ ಉಂಟಾಗಲಿದೆ ಎಂಬ ಮಾತುಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಅವರ ಆರೋಗ್ಯದ ಮೇಲೆ ನಿಗಾವಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇದೇ ವೇಳೆ ಸಚಿವ ಸುಧಾಕರ್‌ ಹೇಳಿದರು.