ರಾಜ್ಯದಲ್ಲಿ ಈಗಾಗಲೇ ಕೆಲ ತರಗತಿಗಳಿಗೆ ಶಾಲೆಗಳು ತೆರೆಯಲಾಗಿದೆ. ಆದರೆ 1ರಿಂದ 5ನೇ ತರಗತಿವರೆಗಿನ ಮಕ್ಕಳಿಗೆ ಕೋವಿಡ್ ಮಾರ್ಗಸೂಚಿ ಹಿನ್ನೆಲೆ ಶಾಲೆಗಳನ್ನು ತೆರೆಯಲಾಗಿಲ್ಲ. ಈ ಬಗ್ಗೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ನೀಡಲಾಗಿದೆ.
ಕೋಲಾರ (ಜ.01): ಕೋವಿಡ್ ಮಾರ್ಗಸೂಚಿ ಮತ್ತು ಸರ್ಕಾರದ ಆದೇಶಕ್ಕೆ ವಿರುದ್ದವಾಗಿ 1ರಿಂದ 5ನೇ ತರಗತಿ ವರೆಗಿನ ಮಕ್ಕಳಿಗೆ ಶಾಲೆ ನಡೆಸುವುದು ಕಂಡು ಬಂದರೆ ಶಿಸ್ತುಕ್ರಮದ ಜತೆಗೆ ಅಂತಹ ಖಾಸಗಿ ಶಾಲೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಎಚ್ಚರಿಕೆ ನೀಡಿದರು.
ನಗರದ ಸ್ಕೌಟ್ಸ್‌ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಮುಳಬಾಗಿಲು ತಾಲೂಕಿನಲ್ಲಿ ಶಾಲಾ ವಾಹನ ಪಲ್ಟಿಹೊಡೆದು 10 ಮಕ್ಕಳು ಗಾಯಗೊಂಡ ಪ್ರಕರಣದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರ ಸೂಚನೆಯಂತೆ ಡಿಡಿಪಿಐ ಕೃಷ್ಣಮೂರ್ತಿ ಅವರು ಈ ಆದೇಶ ಹೊರಡಿಸಿದ್ದಾರೆ ಎಂದರು.
ಶಾಲಾ ಆರಂಭದ ಬಗ್ಗೆ ಮಹತ್ವದ ಮಾಹಿತಿ .
ಸಿಆರ್‌ಪಿಗಳು ಸೋಮವಾರ ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿ ಎಲ್ಲಾದರೂ 5ನೇ ತರಗತಿಯೊಳಗಿನ ಮಕ್ಕಳನ್ನು ಶಾಲೆಗೆ ಕರೆಸಿಕೊಂಡಿದ್ದರೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು. ಈ ಸಭೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಎ.ಬಿ.ರಾಮಕೃಷ್ಣಪ್ಪ, ಬಿಆರ್‌ಪಿ ಪ್ರವೀಣ್, ಇಸಿಒಗಳಾದ ವೆಂಕಟಾಚಲಪತಿ, ರಾಘವೇಂದ್ರ, ನಾಗರಾಜ್ ಮತ್ತಿತರರಿದ್ದರು.
