Asianet Suvarna News Asianet Suvarna News

ಬೆಂಗಳೂರು ಬಗ್ಗೆ ತೀವ್ರ ಆತಂಕಕಾರಿ ವಿಚಾರ : ತಜ್ಞರ ಕಳವಳ

ಬೆಂಗಳೂರಿನಲ್ಲಿ ಕೊರೋನಾ ಪಾಸಿಟಿವಿಟಿ ದರವು ಅತ್ಯಂತ ಹೆಚ್ಚಳವಾಗಿದೆ.  ಪಾಸಿಟಿವಿಟಿ ದರ ಶೇ.40ಕ್ಕೆ ಏರಿಕೆಯಾಗಿದೆ. ತಕ್ಷಣದಿಂದ ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ ಅಪಾಯ ಖಚಿತ ಎಂದು ತಜ್ಞರು ಎಚ್ಚರಿಸಿದ್ದಾರೆ. 

Covid positivity Rate Rises in Bengaluru snr
Author
Bengaluru, First Published May 6, 2021, 8:40 AM IST

ಬೆಂಗಳೂರು (ಮೇ.06):  ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್‌ ಸರಾಸರಿ ಶೇ. 40ರಷ್ಟುಪಾಸಿಟಿವಿಟಿ ದರ ದಾಖಲಿಸುತ್ತಿದ್ದು, ಇದೇ ಪ್ರಮಾಣ ಮುಂದುವರೆದರೆ ನಗರದ ಪರಿಸ್ಥಿತಿ ಅತ್ಯಂತ ವಿಕೋಪಕ್ಕೆ ಹೋಗುವ ಸಂಭವವಿದೆ. ಹೀಗಾಗಿ ಸರ್ಕಾರ ಸೋಂಕಿನ ಸರಪಳಿ ತುಂಡರಿಸುವ ನಿಟ್ಟಿನಲ್ಲಿ ತಕ್ಷಣದಿಂದ ಕಠಿಣ ಕ್ರಮ ಕೈಗೊಳ್ಳಬೇಕೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜನತಾ ಕಫä್ರ್ಯ ಜಾರಿ ಮಾಡಿದ್ದರೂ ಸೋಂಕಿನ ಪ್ರಕರಣಗಳು ಮಾತ್ರ ಕಡಿಮೆಯಾಗುತ್ತಿಲ್ಲ. ಸರ್ಕಾರದ ಕೆಲವು ನಿರ್ಧಾರಗಳು ಸೂಕ್ತವಾಗಿಲ್ಲ. ಹೀಗಾಗಿ ನಗರದಲ್ಲಿ ಇನ್ನೂ ಹೆಚ್ಚಿನ ಕಠಿಣ ನಿರ್ಬಂಧ ಅನಿವಾರ್ಯವಾಗಿದೆ ಎಂದು ಅವರು ಹೇಳುತ್ತಾರೆ.

ನಗರದಲ್ಲಿ ಪ್ರತಿದಿನ ಕೋವಿಡ್‌ ಸೋಂಕಿತರ ಸಂಖ್ಯೆ 20 ಸಾವಿರ ಮೀರಿ ವರದಿಯಾಗುತ್ತಿದ್ದರೂ ಪರೀಕ್ಷೆಯ ಪ್ರಮಾಣದಲ್ಲಿ 20-30 ಸಾವಿರದಷ್ಟುಇಳಿಕೆ ಮಾಡಿರುವುದಕ್ಕೆ ಅಸಮಧಾನ ವ್ಯಕ್ತಪಡಿಸಿರುವ ಆರೋಗ್ಯ ತಜ್ಞರು, ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟುಹದಗೆಡುವ ಸಾಧ್ಯತೆಯಿದೆ ಎಂದು ಸರ್ಕಾರವನ್ನು ಎಚ್ಚರಿಸಿದ್ದಾರೆ.

ಬೆಂಗಳೂರಿನಲ್ಲಿ ಮೇ 1ರಂದು 55,709, ಮೇ 2ರಂದು 40,125 ಮತ್ತು ಮೇ 3ರಂದು 63,506 ಕೊವೀಡ್‌ ಪರೀಕ್ಷೆ ನಡೆದಿದ್ದು ಪಾಸಿಟಿವಿಟಿ ದರ ಕ್ರಮವಾಗಿ ಶೇ.38.05, ಶೇ. 45.19 ಮತ್ತು ಶೇ. 40.28ರಷ್ಟುದಾಖಲಾಗಿದೆ. ಈ ಮೂರು ದಿನದಲ್ಲಿ ಒಟ್ಟು 1,59,340 ಪರೀಕ್ಷೆ ನಡೆದಿದ್ದು ಈ ಪೈಕಿ 62,864 ಮಂದಿಯಲ್ಲಿ ಕೊರೋನಾ ದೃಢ ಪಟ್ಟಿದೆ. ಈ ಮೂರು ದಿನಗಳ ಪಾಸಿಟಿವಿಟಿ ದರ ಶೇ. 41.33ರಷ್ಟಿದೆ.

ಬೆಂಗ್ಳೂರಿಗಿಂತ ಜಿಲ್ಲೆಗಳಲ್ಲೇ ಅಧಿಕ ಸಾವು! ...

ಏಪ್ರಿಲ್‌ 26ರಂದು 89,870, ಏ.27ಕ್ಕೆ 81,734 ಪರೀಕ್ಷೆ ನಡೆದಿತ್ತು. ಏಪ್ರಿಲ್‌ ಕೊನೆಯ ವಾರದಲ್ಲಿ ಪಾಸಿಟಿವಿಟಿ ದರ ಸರಾಸರಿ ಶೇ.12 ರಷ್ಟಿತ್ತು. ಇದೀಗ ಇದರ ಮೂರೂವರೆ ಪಟ್ಟು ಪಾಸಿಟಿವಿಟಿ ದರ ಹೆಚ್ಚಳವಾಗಿದೆ.

ಇಷ್ಟೊಂದು ಪ್ರಮಾಣದಲ್ಲಿ ಪಾಸಿಟಿವಿಟಿ ದರ ಹೆಚ್ಚಾಗಲು ರೋಗ ಲಕ್ಷಣ ಇರುವವರನ್ನು ಮಾತ್ರ ಪರೀಕ್ಷೆಗೆ ಒಳಪಡಿಸಬೇಕು ಎಂದು ಸರ್ಕಾರ ಹೊರಡಿಸಿದ್ದ ಆದೇಶ ಪ್ರಮುಖ ಕಾರಣವಾಗಿದೆ. ಲಕ್ಷಣ ರಹಿತರನ್ನು ಪರೀಕ್ಷೆ ಮಾಡದೇ ಇದ್ದ ಕಾರಣ ಇವರಿಂದ ಸುಲಭವಾಗಿ ಇನ್ನಷ್ಟುಜನರಿಗೆ ಹರಡಲು ಅವಕಾಶ ಮಾಡಿಕೊಟ್ಟಂತಾಯಿತು. ಇದರೊಂದಿಗೆ ಪರೀಕ್ಷೆ ಪ್ರಮಾಣ ಕೂಡ 30 ರಿಂದ 40 ಸಾವಿರದಷ್ಟುಕಡಿಮೆ ಆಗಿರುವುದು ಸಹ ಮತ್ತೊಂದು ಪ್ರಮುಖ ಕಾರಣವಾಗಿದೆ ಎಂದು ತಜ್ಞರು ಹೇಳುತ್ತಾರೆ.

ರಾಜ್ಯ ಸರ್ಕಾರವು ಒಂದು ಸೋಂಕು ಪ್ರಕರಣಕ್ಕೆ 15 ರಿಂದ 20 ಸಂಪರ್ಕಿತರನ್ನು ಪರೀಕ್ಷೆ ಮಾಡಬೇಕು ಎಂದು ಗುರಿ ಹಾಕಿಕೊಂಡಿತ್ತು. ತಜ್ಞರು ಕೂಡ ಇಂತಹದ್ದೆ ಸಲಹೆ ನೀಡಿದ್ದರು. ಆದರೆ ಸರ್ಕಾರ ಪ್ರಾಥಮಿಕ, ದ್ವಿತೀಯ ಸಂಪರ್ಕಿತರನ್ನು ಆದ್ಯತೆಯ ಮೇರೆಗೆ ಪರೀಕ್ಷೆಗೆ ಒಳಪಡಿಸದೇ ಸೋಂಕು ಲಕ್ಷಣ ಇರುವವರನ್ನು ಮಾತ್ರ ಪರೀಕ್ಷಿಸುತ್ತಿದೆ.

ಸೋಂಕು ಪರೀಕ್ಷೆಗೆ ಬರುವ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಬೇಕು. ಒಂದು ವೇಳೆ ಸೋಂಕು ಲಕ್ಷಣ ಉಲ್ಬಣಿಸಿದಾಗ ಪರೀಕ್ಷೆಗೆ ಒಳಗಾಗುವುದು ಆ ಬಳಿಕ ಪರೀಕ್ಷಾ ವರದಿಗೆ ಕನಿಷ್ಠ ಪಕ್ಷ ನಾಲ್ಕೈದು ದಿನ ಕಾಯುವುದರಿಂದ ಸೋಂಕಿತನ ಜೀವಕ್ಕೆ ಕುತ್ತಾಗುವ ಸಂಭವವೇ ಹೆಚ್ಚು. ಇದರಿಂದ ಮರಣದರ ಹೆಚ್ಚಾಗುತ್ತದೆ. ಸರ್ಕಾರ ಯಾಕೆ ಈ ರೀತಿ ಮಾಡುತ್ತಿದೆ ಎಂದು ಗೊತ್ತಾಗುತ್ತಿಲ್ಲ ಎಂದು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios