ನಾಗಮಂಗಲ (ಮೇ.31): ದಯವಿಟ್ಟು ನಮ್ಮನ್ನ ಮನೆಗೆ ಕಳಿಸಿ, ಈ ನರಕದಿಂದ ದೂರಮಾಡಿ. ಮಗು 3 ದಿನಗಳಿಂದ ಕೆಮ್ಮಿನಿಂದ ಬಳಲುತ್ತಿದೆ. ಕೆಮ್ಮಿನ ಔಷಧ ಕೇಳಿದರೆ ಕೊಡುತ್ತಿಲ್ಲ. ಶೌಚಾಲಯ ಗಬ್ಬೆದ್ದು ನಾಡುತ್ತಿದೆ. ಎಲ್ಲಾ ಸವಲತ್ತು ಕೊಡುತ್ತೇವೆ ಎಂದು ಹೇಳಿ ಕರೆತಂದು ನರಕದಲ್ಲಿ ಕೂಡಿಹಾಕಿದ್ದಾರೆ...

ಇದು ಬದರಿಕೊಪ್ಪಲು ಗ್ರಾಮದ ಕೋವಿಡ್ ಕೆರ್ ಸೆಂಟರ್‌ನಲ್ಲಿರುವ ಸೋಂಕಿತರ ಗೋಳಾಟದ ಪರಿಯಾಗಿದೆ. ಕೋವಿಡ್ ಕೇರ್ ಸೆಂಟರ್‌ಗಿಂತ ನಾವು ಮನೆಯಲ್ಲಿಯೇ ಬಿಸಿಯೂಟ ಮಾಡಿಕೊಂಡು ಗುಣಮುಖರಾಗುತ್ತೇವೆ.  ಕುಡಿಯುವ ನೀರು ಮುಗಿದು ಎರಡು ದಿನಗಳು ಕಳೆದಿದೆ. ನಮ್ಮನ್ನ ದಯವಿಟ್ಟು ಬಿಟ್ಟು ಬಿಡಿ ಮನೆಗೆ ಹೋಗುತ್ತೆವೆ ಎಂದು ಮಹಿಳೆಯೊಬ್ಬರು ಗೋಳಾಡುತ್ತಿರುವುದು ಕಂಡು ಬಂತು. 

ಕರ್ನಾಟಕದಲ್ಲಿ ಕೊರೋನಾ: ಇಲ್ಲಿದೆ ಮೇ.30ರ ಅಂಕಿ-ಸಂಖ್ಯೆ ...

ತಾಲೂಕು ಆಡಳಿತ ತೆರೆದಿರುವ ಪಟ್ಟಣದ ಬದರಿಕೊಪ್ಪಲಿನ ಬಿಸಿಎಂ ಮತ್ತು ಅಲ್ಪಸಂಖ್ಯಾತ  ಇಲಾಖೆಗೆ ಸೇರಿದ ಎರಡು ವಿದ್ಯಾರ್ಥಿ ನಿಲಯ ಹಾಗೂ ಕೋಟೆಬೆಟ್ಟದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ  ಇಲ್ಲಿ 90 ಕ್ಕೂ ಹೆಚ್ಚು ಸೋಂಕಿತರನ್ನು ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಮೂಲ ಸೌಕರ್ಯದ ಕೊರತೆ : ಸೋಂಕಿತರನ್ನು ಕ್ವಾರಂಟೈನ್ ಕೇಂದ್ರಗಳಿಗೆ ದಾಖಲು ಮಾಡುವ ಮುನ್ನ ಆ ಕೇಂದ್ರಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಬೇಕಿರುವುದು ತಾಲೂಕು ಆಡಳಿತದ ಕರ್ತವ್ಯ. ಆದರೆ ಕೆಲ ಅಧಿಕಾರಿಗಳ ಬೇಜಾವಾಬ್ದಾರಿತನ ಮತ್ತು ನಿರ್ಲಕ್ಷ್ಯದಿಂದ ಈ ಕೇಂದ್ರಗಳಲ್ಲಿ  ಮೂಲ ಸೌಕರ್ಯದ ಕೊರತೆ ಹೇಳತೀರದಾಗಿದೆ. 

ಸ್ವಚ್ಛತೆ ಇಲ್ಲ. ಸಮರ್ಪಕ ಬೆಡ್ ಇಲ್ಲ. ಶೌಚಾಲಯ ಇಲ್ಲ. ಸಂಜೆ ಆದರೆ ಸೊಳ್ಳೆಗಳ ಹಿಂಡಿನ ಕಾಟ ಜೋರಾಗಿದೆ. ಇಲ್ಲಿ ಯಾವ ಮೂಲಸೌಕರ್ಯವೂ ಸಿಗುತ್ತಿಲ್ಲ. ಜ್ವರ, ಕೆಮ್ಮಿಗೆ ಔಷಧವನ್ನು ನೀಡುತ್ತಿಲ್ಲ. ಇದರ ಬದಲು ಮನೆಯಲ್ಲಿದ್ದರೆ ಸೂಕ್ತ ವ್ಯವಸ್ಥೆಯೊಂದಿಗೆ ಸೋಂಕಿನಿಂದ ಗುಣಮುಖರಾಗುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona