ಮುಧೋಳ: ಆಕ್ಸಿಜನ್ ಬೆಡ್ ಸಿಗದೆ ನರಳಿ ನರಳಿ ಪ್ರಾಣಬಿಟ್ಟ ಯುವಕ
* ಸರ್ಕಾರಿ ಆಸ್ಪತ್ರೆ ಎದುರು ಸಾವು
* ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣ
* ಇಡೀ ದಿನ ಜಿಲ್ಲಾಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಕಾಯ್ದರೂ ಸಿಗದ ಆಕ್ಸಿಜನ್ ಬೆಡ್
ಮುಧೋಳ(ಮೇ.13): ಆಕ್ಸಿಜನ್ ಬೆಡ್ ಸಿಗದೇ ಕೊರೋನಾ ಸೋಂಕಿತ ಯುವಕನೋರ್ವ ಮುಧೋಳ ಸರ್ಕಾರಿ ಕೋವಿಡ್ ಆಸ್ಪತ್ರೆಯ ಮುಂಭಾಗದಲ್ಲೇ ಪ್ರಾಣ ಕಳೆದುಕೊಂಡಿರುವ ಅಮಾನವಿಯ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿದೆ.
ಮೂಲತಃ ರಾಮದುರ್ಗ ತಾಲೂಕಿನ ಕುನ್ನಾಳ ಗ್ರಾಮದ ನಿವಾಸಿ, ಮಹಾಲಿಂಗಪುರದ ಬಾರವೊಂದರಲ್ಲಿ ಮ್ಯಾನೇಜರ್ ಕೆಲಸ ಮಾಡುತ್ತಿದ್ದ ತಿಮ್ಮಣ್ಣ ಫಕೀರಪ್ಪ ಬಂಡಿವಡ್ಡರ (19) ಆಕ್ಸಿಜನ್ ಸಿಗದೇ ಮೃತಪಟ್ಟ ಯುವಕ. ಕಳೆದ ನಾಲ್ಕೈದು ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಈ ಯುವಕನನ್ನು ಚಿಕಿತ್ಸೆಗಾಗಿ ಮೃತ ತಿಮ್ಮಣ್ಣನ ಸಹೋದರ ಮಂಗಳವಾರ ಬೆಳಗ್ಗೆ ಮುಧೋಳ ಸರ್ಕಾರಿ ಕೋವಿಡ್ ಆಸ್ಪತ್ರೆಗೆ ಕರೆ ತಂದಿದ್ದಾರೆ. ಈ ವೇಳೆ ಅಲ್ಲಿ ಆಸ್ಪತ್ರೆಯ ಸಿಬ್ಬಂದಿ ಆಕ್ಸಿಜನ್ ಬೆಡ್ ಕೊರತೆ ಇದೆ. ನೀವು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ತೆರಳುವಂತೆ ವೈದ್ಯರು ಸೂಚಿಸಿದ್ದಾರೆ.
"
ಮುದ್ದೇಬಿಹಾಳ: ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವತಿ ಕೊರೋನಾಗೆ ಬಲಿ
ಈ ಹಿನ್ನೆಲೆಯಲ್ಲಿ ಅವರು ಕೋವಿಡ್ ಸೋಂಕಿತನನ್ನು ಕರೆದುಕೊಂಡು ಇಡೀ ದಿನ ಜಿಲ್ಲಾಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಕಾಯ್ದರೂ ಆಕ್ಸಿಜನ್ ಬೆಡ್ ಸಿಗಲಿಲ್ಲ. ಕೊನೆಗೆ ಮತ್ತೆ ಮುಧೋಳ ಸರ್ಕಾರಿ ಕೋವಿಡ್ ಆಸ್ಪತ್ರೆಗೆ ಕರೆತಂದರು. ಆದರೆ, ಆಸ್ಪತ್ರೆಯ ಒಳಗಡೆ ಹೋಗುವ ಮುನ್ನವೇ ನರಳಿ ನರಳಿ ಬಾಗಿಲಲ್ಲೇ ತಿಮ್ಮಣ್ಣ ಪ್ರಾಣ ಬಿಟ್ಟಿರುವುದಾಗಿ ಮೃತನ ಸಹೋದರ ತಿಳಿಸಿದ್ದಾನೆ.
ಕೊರೋನಾ ಸೋಂಕಿತ ತಿಮ್ಮಣ್ಣ ಆಸ್ಪತ್ರೆಗೆ ಬಂದಾಗ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ಇಲ್ಲದ ಕಾರಣ ಸೂಕ್ತ ಚಿಕಿತ್ಸೆ ನೀಡಿ ಆಕ್ಸಿಜನ್ ಬೆಡ್ ಇರುವ 108 ವಾಹನದಲ್ಲಿ ನಾವು ಜಿಲ್ಲಾಸ್ಪತ್ರೆಗೆ ಕಳಿಸಿದೆವು. ಅಲ್ಲಿಯೂ ಆಕ್ಸಿಜನ್ ಬೆಡ್ ಇಲ್ಲದೆ ಇರುವುದರಿಂದ ಮತ್ತೆ ಇಲ್ಲಿಗೆ ಬಂದಿದ್ದಾರೆ. ಕೊನೆಗಳಿಗೆಯಲ್ಲಿ ದುರಾದೃಷ್ಟವಶಾತ್ ಮೃತಪಟ್ಟಿದ್ದಾನೆ ಎಂದು ಮುಧೋಳ ಸರ್ಕಾರಿ ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ ಡಾ.ಬಸವರಾಜ ಬಿ.ಪಾಟೀಲ ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona