ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಬ್ಬರ ಮಿತಿ ಮೀರಿದೆ. ಚಾಮರಾಜನಗರದಲ್ಲಿ ಭೀಕರ ದುರಂತ ಸಂಭವಿಸಿದೆ. ಸರ್ಕಾರ ಇನ್ನಾದ್ರೂ ಎಚ್ಚೆತ್ತುಕೊಂಡು ತೀವ್ರಗತಿಯಲ್ಲಿ ಕೆಲಸ ಮಾಡಲಿ ಎಂದು ಶಾಸಕ ಪುಟ್ಟರಾಜು ಅಸಮಾಧಾನ ಹೊರಹಾಕಿದ್ದಾರೆ. 

ಮಂಡ್ಯ (ಮೇ.03):  ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಒಂದೇ ದಿನ 24 ಮಂದಿ ಮೃತಪಟ್ಟಿದ್ದು, ಮಂಡ್ಯದಲ್ಲಿಯೂ ಈ ದುಸ್ಥಿತಿ ಎದುರಾಗಬಹುದಾದ ಆತಂಕ ವ್ಯಕ್ತವಾಗಿದೆ. 

ಚಾಮರಾಜನಗರ ಘಟನೆ ಬಗ್ಗೆ ಇಂದು ಮಂಡ್ಯದಲ್ಲಿ ಪ್ರತಿಕ್ರಿಯಿಸಿದ ಮೇಲುಕೋಟೆ ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು ಅಂಕಿ ಅಂಶ ಪಡೆದ ಮೇಲೆ ನಮ್ಮ‌ ಜಿಲ್ಲೆಯಲ್ಲೂ ಇಂದು ಸಂಜೆಯಿಂದ ಆ ರೀತಿ ಆಗಬಹುದೆಂಬ ಆತಂಕ ಕಾಡುತ್ತಿದೆ. ನಿನ್ನೆಯಷ್ಟೇ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಅವರು ಆಕ್ಸಿಜನ್ ತರಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ ಎಂದರು. 

ಸರ್ಕಾರ ಆಕ್ಸಿಜನ್ ಪೂರೈಸುವಲ್ಲಿ ವಿಫಲವಾಗಿದೆ. ಇಂದು ಸಂಜೆಯೊಳಗೆ ಆಕ್ಸಿಜನ್ ನೀಡುವುದಾಗಿ ತಿಳಿಸಿದ್ದ ಮುಖ್ಯ ಕಾರ್ಯದರ್ಶಿ ತಕ್ಷಣ ಪೂರೈಕೆ ಮಾಡಬೇಕು. ನಾವೆಲ್ಲರೂ ಇಂದು ಕೆಟ್ಟ ಪರಿಸ್ಥಿತಿ ತಲುಪಿದ್ದೇವೆ ಎಂದರು. 

ಚಾಮರಾಜನಗರ ಆಸ್ಪತ್ರೆ ದುರಂತ: ಸಿದ್ದರಾಮಯ್ಯ ಕೆಂಡಾಮಂಡಲ ..

ಸರ್ಕಾರದ ವಿರುದ್ಧ ಆಕ್ರೋಶ : ಸರ್ಕಾರ ನಂಬಿದರೆ ನಮ್ಮೆಲ್ಲರ ತಿಥಿ ಆಗುತ್ತದೆ ಎಂದು ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ. ಅಲ್ಲದೇ ಸರ್ಕಾರ ಹೆಚ್ಚಿನ ರೀತಿ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕು ಎಂದ ಪುಟ್ಟರಾಜು ಸಿಎಂ ಹಾಗೂ ಸಚಿವರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. 

ಅವನ್ಯಾವನೋ ಆರೋಗ್ಯ ಮಂತ್ರಿ ಒಂದೇಳುತ್ತಾನೆ. ಮುಖ್ಯ ಮಂತ್ರಿ ಒಂದೇಳುತ್ತಾನೆ. ಇವರಾರೂ ಸರಿಯಾದ ಮಾಹಿತಿಯನ್ನ ಜನರಿಗೆ ನೀಡುತ್ತಿಲ್ಲ ಎಂದು ಗರಂ ಆದರು. 

ಚಾಮರಾಜನಗರದಲ್ಲಿ 24 ಸಾವುಗಳು ಆಕ್ಸಿಜನ್ ಕೊರತೆಯಿಂದಲ್ಲ: ಸುರೇಶ್ ಕುಮಾರ್ ...

ಮೂರು ಜಿಲ್ಲೆ ಪರವಾಗಿ ನಾನು ಮನವಿ ಮಾಡುತ್ತೇನೆ. ಮೈಸೂರು ಜಿಲ್ಲೆಗೆ ಬೇಕಾದಷ್ಟು ಆಕ್ಸಿಜನ್ ಇಟ್ಟುಕೊಂಡು ಬಾಕಿ ಇರುವುದನ್ನ ಮಂಡ್ಯ, ಚಾಮರಾಜನಗರಕ್ಕೆ ನೀಡಿ ಎಂದು ಮೈಸೂರು ಜಿಲ್ಲಾಧಿಕಾರಿಗೆ ಪುಟ್ಟರಾಜು ಆಗ್ರಹಿಸಿದ್ದಾರೆ.

ಅಲ್ಲದೇ ಮಂಡ್ಯ ಸಂಸದೆ ಸುಮಲತಾಗೂ ಈ ವೇಳೆ ಮನವಿ ಮಾಡಿದ ಪುಟ್ಟರಾಜು. ಸಂಸದರು ಪ್ರಭಾವಿಗಳು. ತಕ್ಷಣ ತಮ್ಮ ಪ್ರಭಾವ ಬಳಸಿ ಸರ್ಕಾರದಿಂದ ಆಕ್ಸಿಜನ್ ಕೊಡಿಸುವ ವ್ಯವಸ್ಥೆ ಮಾಡಲಿ ಎಂದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona