ಕೊರೋನಾ ಅಟ್ಟಹಾಸ: ರೋಣ, ಗಜೇಂದ್ರಗಡದಲ್ಲಿ ಕೋವಿಡ್ ಕೇರ್ ಸೆಂಟರ್
ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ರೋಣ ಮತ್ತು ಗಜೇಂದ್ರಗಡ ಪಟ್ಟಣದಲ್ಲಿ 2 ಕೋವಿಡ್ ಕೇರ್ ಸೆಂಟರ್ ಆರಂಭ| ಪ್ರತಿ ಸೆಂಟರ್ ಮೂಲಕ 100 ಜನರಿಗೆ ಚಿಕಿತ್ಸೆ| ಕೋರೋನಾದ ಬಗ್ಗೆ ಭಯಬೇಡ ಎಚ್ಚರವಿರಲಿ. ಎಲ್ಲರು ವೈಯಕ್ತಿಕ ರಕ್ಷಣಾ ಕ್ರಮಗಳ ಬಗ್ಗೆ ಜಾಗೃತಿವಹಿಸಿಕೊಂಡು, ಮಾಸ್ಕ್ ಧರಿಸಿ, ಕೋವಿಡ್‌ನಿಂದ ದೂರವಿಬೇಕು|
ರೋಣ(ಜು.23): ತಾಲೂಕಿನ ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಪತ್ತೆಯಾದ ಕೋವಿಡ್ ಪ್ರಕರಣಗಳಲ್ಲಿ ಕಾಣಿಸಿಕೊಂಡ ಸೋಂಕಿತರಿಗೆ ಚಿಕಿತ್ಸೆ ನೀಡಲು ರೋಣ ಮತ್ತು ಗಜೇಂದ್ರಗಡ ಪಟ್ಟಣದಲ್ಲಿ ಪ್ರತ್ಯೇಕವಾಗಿ 2 ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದ್ದು, ಪ್ರತಿ ಸೆಂಟರ್ ಮೂಲಕ 100 ಜನರಿಗೆ ಚಿಕಿತ್ಸೆ ನೀಡಲಾಗುವದು ಎಂದು ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ ಹೇಳಿದ್ದಾರೆ.
ಅವರು ಬುಧವಾರ ಸಂಜೆ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಜರುಗಿದ ತಾಲೂಕು ಮಟ್ಟದ ಟಾಸ್ಕ್‌ಫೋರ್ಸ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ರೋಣ ತಾಲೂಕಿನ ಪ್ರತಿ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಖಚಿತ ಪಟ್ಟ ಕೋವಿಡ್ -19 ಪ್ರಕರಣಗಳು ವರದಿಯಾಗುತ್ತಿದ್ದು, ಖಚಿತ ಪಟ್ಟ ಕೊರೋನಾದ ಲಕ್ಷಣ ಹೊಂದಿದ ರೋಗಿಗಳನ್ನು ರೋಣ ಮತ್ತು ಗಜೇಂದ್ರಗಡ ನಗರಗಳಲ್ಲಿ ಎರಡು ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್‌ಗಳನ್ನು ಸಿದ್ಧಗೊಳಿಸಿಕೊಂಡು 100 ರೋಗಿಗಳನ್ನು ಚಿಕಿತ್ಸೆ ಮಾಡುವಷ್ಟು ವ್ಯವಸ್ಥೆ ಕಲ್ಪಿಸಿಕೊಳ್ಳಲಾಗಿದೆ. ಬರುವ ದಿನಮಾನದಲ್ಲಿ ಖಚಿತ ಪಟ್ಟ ಕೊರೋನಾದ ಲಕ್ಷಣ ಹೊಂದಿದ 200 ಜನರನ್ನು ಚಿಕಿತ್ಸೆ ಮಾಡುವಷ್ಟು ಸಾಮರ್ಥ್ಯ ಹೆಚ್ಚಿಸಿಕೊಳ್ಳಲಾಗುವದು ಆ ದಿಸೆಯಲ್ಲಿ ತಾಲೂಕು ಆಡಳಿತ ಸನ್ನದ ಸ್ಥಿತಿಯಲ್ಲಿದೆ ಎಂದರು.
ಗದಗನಲ್ಲಿ ಕೋವಿಡ್ ಸೋಂಕಿನ ವರದಿಗೆ ಮೂರುದಿನ ಕಾಯಲೇಬೇಕು..!
ತಾಪಂ ಇಒ ಸಂತೋಷ ಪಾಟೀಲ ಮಾತನಾಡಿ, ರೋಣ ಮತ್ತು ಗಜೇಂದ್ರಗಡ ನಗರಗಳು ಸೇರಿ ರೋಣ ತಾಲೂಕಿನ ಒಟ್ಟು 52 ಖಚಿತ ಪಟ್ಟ ಲಕ್ಷಣ ಹೊಂದಿದ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಅದರಲ್ಲಿ 8 ಜನ ರೋಗಿಗಳನ್ನು ಚಿಕಿತ್ಸೆ ನೀಡಿ ಗುಣಮುಖಗೊಳಿಸಿ, ಸರ್ಕಾರದ ಮಾರ್ಗದರ್ಶನದಂತೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮನೆಗೆ ಕಳುಹಿಸಲಾಗಿದೆ ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ. ಹಾದಿಮನಿ ಮಾತನಾಡಿ, ಕೋರೋನಾದ ಬಗ್ಗೆ ಭಯಬೇಡ ಎಚ್ಚರವಿರಲಿ. ಎಲ್ಲರು ವೈಯಕ್ತಿಕ ರಕ್ಷಣಾ ಕ್ರಮಗಳ ಬಗ್ಗೆ ಜಾಗೃತಿವಹಿಸಿಕೊಂಡು, ಮಾಸ್ಕ್ ಧರಿಸಿ, ಕೋವಿಡ್‌ನಿಂದ ದೂರವಿಬೇಕು. ಪರಸ್ಪರ ಮೂರು ಅಡಿಯಷ್ಟು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಕೈ ಗಳನ್ನು ಪದೇ ಪದೇ ಸೋಪಿನಿಂದ, ಇಲ್ಲವೇ ಸ್ಯಾನಿಟೈಸರ್ ಬಳಸಿ ಸ್ವಚ್ಛಗೊಳಿಸಬೇಕು. ಕೈಗಳ ಶುಚಿತ್ವದ ಬಗ್ಗೆ ಗಮನ ಹರಿಸುವಂತೆ ಎಲ್ಲಾ ಇಲಾಖೆಗಳ ಕ್ಷೇತ್ರ ಮಟ್ಟದ ಸಿಬ್ಬಂದಿ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಸಿಪಿಐ ಸುನೀಲ ಸವದಿ, ವೈದ್ಯಾಧಿಕಾರಿ ಡಾ. ಸುನೀಲ ಸಾರಂಗಮಠ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಸವರಾಜ ಅಂಗಡಿ, ಸಿಡಿಪಿಒ ಬೆಟ್ಟದೇಶ ಮಾಳೆಕೊಪ್ಪ, ಉಪ ತಹಸೀಲ್ದಾರ್ ಜೆ.ಟಿ. ಕೊಪ್ಪದ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.