Asianet Suvarna News Asianet Suvarna News

ಕೋವಿಡ್‌ ಸೋಂಕಿತೆಯನ್ನು ಅನಾಥ ಶವ ಎಂದು ಸಂಸ್ಕಾರ ಮಾಡಿದ ಆಸ್ಪತ್ರೆ

ಕೋವಿಡ್ ಸೋಂಕಿತೆಯನ್ನು ಅನಾಥ ಶವ ಎಂದು ಮೈಸೂರಿನ ಆಸ್ಪತ್ರೆಯಲ್ಲಿ ಅಂತ್ಯ ಸಂಸ್ಕಾರ ಮಾಡಿದ ಘಟನೆ ನಡೆದಿದೆ. 

Covid 19 victim cremated by Hospital in Mysuru snr
Author
Bengaluru, First Published Dec 2, 2020, 9:32 AM IST

ಮೈಸೂರು (ಡಿ.02):  ಕೊರೋನಾ ಸೋಂಕಿಗೆ ಒಳಗಾಗಿದ್ದ ತಮ್ಮ ಅಕ್ಕನನ್ನು ಅನಾಥ ಶವ ಎಂದು ಸಂಸ್ಕಾರ ಮಾಡಿರುವುದು ಆರೋಗ್ಯ ಇಲಾಖೆಯ ಬೇಜವಾಬ್ದಾರಿಗೆ ಸ್ಪಷ್ಟನಿದರ್ಶನ ಎಂದು ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಹೋಬಳಿ ನಂದೀಪುರ ನಿವಾಸಿ ಭಾಸ್ಕರಾಚಾರ್‌ ಆರೋಪಿಸಿದರು.

ಕೊರೋನಾ ಸೋಂಕು ತಗುಲಿದೆ ಎಂದು ನಮ್ಮ ಕಣ್ಣೆದುರಿಗೆ ಕರೆದೊಯ್ದರು. ಆದರೆ 15 ದಿನ ಅಲೆದಾಡಿದ ಬಳಿಕ ಅನಾಥ ಶವ ಎಂದು ಅಂತ್ಯ ಸಂಸ್ಕಾರ ನೆರವೇರಿಸಿರುವುದಾಗಿ ಪೊಲೀಸರು ತಿಳಿಸಿದರು. ಅಂದ ಮೇಲೆ ಸೋಂಕಿತರ ಜವಾಬ್ದಾರಿ ಯಾರ ಹೊಣೆ ಎಂಬುದೇ ಅಸ್ಪಷ್ಟವಾಗಿದೆ. ಕೋವಿಡ್‌ ಆಸ್ಪತ್ರೆಯ ಸಿಬ್ಬಂದಿ ಮತ್ತು ಆಂಬ್ಯುಲೆನ್ಸ್‌ ಚಾಲಕನ ಬೇಜವಾಬ್ದಾರಿಗೆ ಇಲ್ಲೊಬ್ಬರು ಮೃತಪಟ್ಟಿದ್ದಾರೆ. ಅಂತಿಮ ಸಂಸ್ಕಾರಕ್ಕೆ ಶವವೂ ಸಿಗದೆ ಅನಾಥ ಶವಗಳಂತೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಕರ್ನಾಟಕದಲ್ಲಿ ಕೊಂಚ ಕೊರೋನಾ ಏರಿಕೆ: ಇರಲಿ ಎಚ್ಚರಿಕೆ..! .

45 ವರ್ಷದ ನನ್ನ ಸಹೋದರಿ ಪದ್ಮಮ್ಮ ಅವರಿಗೆ ಸೆ. 18 ರಂದು ಕೆಮ್ಮು, ಜ್ವರ ಕಾಣಿಸಿಕೊಂಡು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದೆವು. ಕೊರೋನಾ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿರುವುದಾಗಿ ನನಗ ದೂರವಾಣಿ ಮೂಲಕ ತಿಳಿಸಿದರು ಮತ್ತು ಸಂದೇಶ ಕೂಡ ಬಂದಿತು. ಇದಾದ ಬಳಿಕ ಜಯದೇವ ಆಸ್ಪತ್ರೆಗೆ ಆಕೆಯನ್ನು ಕರೆದೊಯ್ದರು. ನಮ್ಮನ್ನೂ ಪರೀಕ್ಷೆಗೆ ಒಳಪಡಿಸಿದರು. ಕೋವಿಡ್‌ ಭಯದಲ್ಲಿ ಹಾಸಿಗೆ ಹಿಡಿದ ನನ್ನ ತಾಯಿ ಅ. 12 ರಂದು ಮೃತಪಟ್ಟರು. ಆ ಮಧ್ಯೆ ಅಕ್ಕನಿಗಾಗಿ ಹುಡುಕಾಡಿದೆವು. ನಗರದ ಜಯದೇವ ಆಸ್ಪತ್ರೆ, ಕೆ.ಆರ್‌. ಆಸ್ಪತ್ರೆ, ಕಡಕೊಳ ಬಳಿಯ ಕೋವಿಡ್‌ ಆಸ್ಪತ್ರೆಯಲ್ಲಿಯೂ ವಿಚಾರಿಸಿದೆವು. ಆದರೆ ಸುಳಿವೇ ಸಿಗಲಿಲ್ಲ. ತಾಲೂಕು ಆರೋಗ್ಯ ಕೇಂದ್ರದವರು ಮಾಹಿತಿ ಇಲ್ಲ ಎಂದು ಕೈಚೆಲ್ಲಿದರು.

ಆರೋಗ್ಯ ಇಲಾಖೆ ಸಿಬ್ಬಂದಿಗಳೇ ನಾಪತ್ತೆ ದೂರು ದಾಖಲಿಸುವಂತೆ ಸಲಹೆ ನೀಡಿದ್ದರಿಂದ ನಾವು ಮೇಟಗಳ್ಳಿ ಪೊಲೀಸರಿಗೆ ದೂರು ನೀಡಿದೆವು. ಅದರಂತೆ ಅಪರಾಧ ವರದಿಗಳನ್ನು ಪರಿಶೀಲಿಸಿದ ಪೊಲೀಸರು ಕೆ.ಆರ್‌. ಆಸ್ಪತ್ರೆಯಲ್ಲಿ ಮೃತಪಟ್ಟಮಹಿಳೆಯನ್ನು ಅಪರಿಚಿತ ಶವ ಎಂದು ನಾವೇ ಅಂತ್ಯಕ್ರಿಯೆ ನೆರವೇರಿಸಿರುವುದಾಗಿ ತಿಳಿಸಿದರು. ಕಣ್ಣೆದುರೇ ಕರೆದೊಯ್ದ ಅಕ್ಕನ ಅಂತಿಮ ದರ್ಶನಕ್ಕೆ ಮತ್ತು ಸಂಸ್ಕಾರಕ್ಕೆ ಅವಕಾಶ ನೀಡದೆ ವಂಚಿಸಿದ್ದರಿಂದ ನ್ಯಾಯಕೊಡಿ ಎಂದು ಅಂಗಲಾಚಿದರು ಪ್ರಯೋಜನವಾಗಲಿಲ್ಲ. ಅಧಿಕಾರಿ ಮತ್ತು ಸಿಬ್ಬಂದಿ ಲೋಪದಿಂದಲೇ ಈ ಘಟನೆ ನಡೆದಿದೆ ಎಂದು ಅವರು ಆರೋಪಿಸಿದರು.

ನನಗಾದ ಸ್ಥಿತಿಯ ಯಾರಿಗೂ ಬರಬಾರದು. ಸದ್ಯಕ್ಕೆ ನನಗೆ ಆರ್ಥಿಕ ಸಂಕಷ್ಟವೂ ಎದುರಾಗಿದೆ. ವಿಶೇಷ ಚೇತನ ಇಲಾಖೆಯಿಂದ ಬರುವ ಹಣ ತಿಂಗಳ ನಿರ್ವಹಣೆಗೂ ಸಾಲುತ್ತಿಲ್ಲ. ಕುಟುಂಬ ನಿರ್ವಹಣೆಗೆ ಸರ್ಕಾರ ಸಹಕರಿಸಬೇಕು ಎಂದು ಕೋರಿದರು. ದಾನಿಗಳು ಅವರಿಗೆ ಸಹಕರಿಸಲು ಮೊ. 97433 99022 ಸಂಪರ್ಕಿಸಬಹುದು.

Follow Us:
Download App:
  • android
  • ios