ಚಿಕ್ಕಬಳ್ಳಾಪುರ(ಏ.25): ಕಳೆದ ಐದು ದಿನಗಳಿಂದ ಸೋಂಕಿನ ಪ್ರಸ್ತಾಪವೇ ಇಲ್ಲದೆ ನೆಮ್ಮದಿಯಾಗಿದ್ದ ನಗರದಲ್ಲಿ ಮತ್ತೊಂದು ಕೊರೋನ ಸೋಂಕು ಶುಕ್ರವಾರ ಪತ್ತೆಯಾಗಿದ್ದು, ಇದರಿಂದ ನಗರದಲ್ಲಿ ಮತ್ತೆ ಆತಂಕದ ಕಾರ್ಮೋಡ ಕವಿಯತೊಡಗಿದೆ.

ನಗರದ 17ನೇ ವಾರ್ಡಿನ 39 ವರ್ಷ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿದ್ದು, ಇದರಿಂದ ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಕಳೆದ ಮಾ.5 ರಂದು ಪ್ರಸ್ತುತ ಸೋಂಕು ಪತ್ತೆಯಾಗಿರುವ ವ್ಯಕ್ತಿ ಸೋಂಕಿನಿಂದ ಬಲಿಯಾದ ಪಿ-250ರ ಮನೆಗೆ ತೆರಳಿ, ದಿನಸಿ ಕಿಟ್‌ ಪಡೆದಿದ್ದರು. ದಿನಸಿ ಕಿಟ್‌ ಪಡೆದಿರುವ ಇವರಿಗೆ ಸೋಂಕು ದೃಢವಾಗಿರುವುದು ದಿನಸಿ ಕಿಟ್‌ ಪಡೆದ ಸುಮಾರು 300ಕ್ಕೂ ಹೆಚ್ಚು ಮಂದಿಗೆ ಈಗ ಆತಂಕ ಆರಂಭವಾಗಿದೆ.

ಬಿಚ್ಚಣಿಕೆ ಕೆಲಸ ಮಾಡುತ್ತಿದ್ದ ವ್ಯಕ್ತಿ

ಪ್ರಸ್ತುತ ಸೋಂಕು ಪತ್ತೆಯಾಗಿರುವ ವ್ಯಕ್ತಿ ರೇಷ್ಮೆ ನೂಲಿನ ಕಾರ್ಖಾನೆಯಲ್ಲಿ ರೇಷ್ಮೆ ನೂಲು ಬಿಚ್ಚಣಿಕೆ ಕೆಲಸ ಮಾಡುತ್ತಿದ್ದು, ರೇಷ್ಮೆ ನೂಲು ಬಿಚ್ಚುವ ಕಾರ್ಖಾನೆ ಮಾಲೀಕ, ಆತನ ಪತ್ನಿ, ಮಕ್ಕಳು ಸೇರಿದಂತೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 6 ಮಂದಿ ಕಾರ್ಮಿಕರು ಸೇರಿದಂತೆ ಹಲವರನ್ನು ಕ್ವಾರಂಟೈನ್‌ ಮಾಡಲಾಗಿದೆ. ಅಲ್ಲದೆ ಸೋಂಕಿತ ವ್ಯಕ್ತಿಯ ಅಕ್ಕ, ಭಾವ, ಅವರ ಮಕ್ಕಳು ಸೇರಿದಂತೆ ಒಟ್ಟು 22 ಮಂದಿಯನ್ನು ಪ್ರಥಮ ಸಂಪರ್ಕಿತರೆಂದು ಗುರುತಿಸಲಾಗಿದೆ.

KSRTC ಬಸ್‌ ಸೇವೆ ಆರಂಭ, ಆದ್ರೆ ಶರತ್ತುಗಳು ಅನ್ವಯ!

ಪ್ರಥಮ ಸಂಪ್ರಕಿಗಳೆಲ್ಲರನ್ನೂ ಕ್ವಾರಂಟೈನ್‌ ಮಾಡಲಾಗಿದ್ದು, ಇವರೆಲ್ಲರ ಗಂಟಲು ದ್ರವ, ರಕ್ತದ ಮಾದರಿಗಳನ್ನು ಪರೀಕ್ಷೆ ಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್‌. ಲತಾ ತಿಳಿಸಿದ್ದಾರೆ. ನಗರದ 17ನೇ ವಾರ್ಡಿನ ವೃದ್ಧರೊಬ್ಬರು ಮಾ.5ರಂದು 300ಕ್ಕೂ ಹೆಚ್ಚು ಆಹಾರದ ಕಿಟ್‌ಗಳನ್ನು ವಿತರಿಸಿದ್ದು, ಇವುಗಳನ್ನು ಪ್ಯಾಕ್‌ ಮಾಡಿರುವ ವ್ಯಕ್ತಿಗಳಿಗೂ ಈಗಾಗಲೇ ಸೋಂಕು ಪತ್ತೆಯಾಗಿತ್ತು. ಅಲ್ಲದೆ ಹಂಚಿದ ವೃದ್ಧರಿಗೂ ಸೋಂಕು ಪತ್ತೆಯಾಗಿ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದರು.

171 ಮನೆ ಕ್ವಾರಂಟೈನ್‌

ಇವರಿಂದ ಕಿಟ್‌ ಪಡೆದ 171 ಮನೆಗಳನ್ನು ಗುರ್ತಿಸಿ ಈಗಾಗಲೇ ಅಧಿಕಾರಿಗಳು ಹೋಂ ಕ್ವಾರಂಟೈನ್‌ ಮಾಡಿದ್ದಾರೆ. ಇನ್ನೂ 100ಕ್ಕೂ ಹೆಚ್ಚು ಮಂದಿ ಕಿಟ್‌ ಪಡೆದವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಹೋಂ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಗೆ ಇದೀಗ ಸೋಂಕು ಪತ್ತೆಯಾಗಿದ್ದು, ಇವರೊಂದಿಗೆ ಪ್ರಥಮ ಸಂಪರ್ಕಿಗಳನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ.

ವಿಜಯಪುರ: ಏಷ್ಯಾದ ಅತ್ಯಂತ ಉದ್ದದ ಜಲ ಸೇತುವೆಗೆ ವಿಧ್ಯುಕ್ತ ಚಾಲನೆ

ಗೌರಿಬಿದನೂರು ತಾಲೂಕಿನಲ್ಲಿ 12 ಮತ್ತು ಚಿಕ್ಕಬಳ್ಳಾಪುರ ನಗರದಲ್ಲಿ 5 ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು 17 ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 11 ಮಂದಿ ಈಗಾಗಲೇ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಉಳಿದ ನಾಲ್ವರು ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.