ಉಡುಪಿ (ಜೂ. 15):  ಜಿಲ್ಲೆಗೆ ಮಹಾರಾಷ್ಟ್ರದಿಂದ ಉಡುಪಿಗರು ವಾಪಸ್ಸಾಗುವುದು ಮುಂದುವರಿದಿದೆ, ಅದರಂತೆ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿಯ ನಾಗಾಲೋಟ ಮುಂದುವರಿದಿದೆ. ಭಾನುವಾರ ಜಿಲ್ಲೆಯಲ್ಲಿ ಮತ್ತೆ 21 ಮಂದಿಗೆ ಕೊರೋನಾ ಸೋಂಕಿರುವುದು ದೃಢವಾಗಿದೆ.

ಜಿಲ್ಲೆಗೆ ನಿತ್ಯ ಮುಂಬೈಯಿಂದ 50- 60 ಮಂದಿ ವಾಪಸ್‌ ಬರುತ್ತಲೇ ಇದ್ದಾರೆ. ಅವರನ್ನೆಲ್ಲ ಗಡಿಗಳಲ್ಲಿಯೇ ಗುರುತಿಸಿ ಹೋಮ್‌ ಕ್ವಾರಂಟೈನ್‌ಗೆ ಕಳುಹಿಸಲಾಗುತ್ತಿದೆ. ಈ ಹಿಂದಿನಂತೆ ಅವರೆಲ್ಲರನ್ನು ಪರೀಕ್ಷೆಗೊಳಪಡಿಸದೆ ಕೇವಲ ಕೊರೋನಾ ಸೋಂಕಿನ ಲಕ್ಷಣ ಇರುವವರನ್ನು ಗುರುತಿಸಿ ಪರೀಕ್ಷೆಗೊಳಪಡಿಸಲಾಗುತ್ತಿದೆ. ಆದ್ದರಿಂದ ಕೊರೋನಾ ಸೋಂಕಿರುವವರ ಪತ್ತೆ ಕಡಿಮೆಯಾಗಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಕೊರೋನಾ: ಮನೆಯಿಂದ ಹೊರ ಬರಲು ಜನರ ಹಿಂದೇಟು

ಭಾನುವಾರ ಪತ್ತೆಯಾದ ಸೋಂಕಿತರಲ್ಲಿ 15 ಪುರುಷರು, 5 ಮಹಿಳೆಯರು ಮತ್ತು 4 ವರ್ಷದ ಗಂಡುಮಗು ಇದೆ. ಅವರಲ್ಲಿ 18 ಮಂದಿ ಮಹಾರಾಷ್ಟ್ರಂದಿದಲೇ ಬಂದವರಾಗಿದ್ದರೆ, ಉತ್ತರಪ್ರದೇಶ ಮತ್ತು ತಮಿಳುನಾಡಿನಿಂದ ಇಬ್ಬರು ಬಂದಿದ್ದಾರೆ. ಇನ್ನು 53 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರಿಗೆ ಜೂ. 8ರಂದು ಸೋಂಕು ಪತ್ತೆಯಾಗಿದ್ದ ಮುಂಬೈಯಿಂದ ಬಂದಿದ್ದ 51 ವಯಸ್ಸಿನ ವ್ಯಕ್ತಿಯಿಂದ ಸೋಂಕು ಹರಡಿರುವುದು ಪತ್ತೆಯಾಗಿದೆ.

ಜಿಲ್ಲೆಯಲ್ಲಿ ಮತ್ತೆ 77 ಮಂದಿಯ ಗಂಟಲದ್ರವದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಅವರಲ್ಲಿ 56 ಮಂದಿ ಹಾಟ್‌ಸ್ಪಾಟ್‌ ಮುಂಬೈ ಮತ್ತಿತರ ಕಡೆಯಿಂದ ಬಂದವರಾಗಿದ್ದರೆ, 4 ಮಂದಿ ಕೊರೋನಾ ಲಕ್ಷಣ ಉಳ್ಳವರು, 5 ಮಂದಿ ಕೊರೋನಾ ಶಂಕಿತರು, 9 ಮಂದಿ ಶೀತಜ್ವರದಿಂದ ಬಳಲುತ್ತಿರುವವರು ಮತ್ತು 3 ಮಂದಿ ಉಸಿರಾಟದ ತೊಂದರೆ ಇರುವವರಾಗಿದ್ದಾರೆ.

ಭಾನುವಾರ 44 ವರದಿಗಳು ಬಂದಿವೆ, ಅವುಗಳಲ್ಲಿ 21 ಪಾಸಿಟಿವ್‌ ಬಂದಿವೆ. ಇನ್ನೂ 103 ವರದಿಗಳು ಕೋವಿಡ್‌ ಪರೀಕ್ಷಾ ಕೇಂದ್ರದಿಂದ ಬರಬೇಕಾಗಿವೆ.

ಬಿಡುಗಡೆಯಾಗುತ್ತಿರುವವರೇ ಹೆಚ್ಚು

ಖುಷಿಯ ವಿಷಯ ಎಂದರೆ ಉಡುಪಿ ಜಿಲ್ಲೆಯಲ್ಲಿ ಪ್ರತಿದಿನ ಪತ್ತೆಯಾಗುವ ಕೊರೋನಾ ಸೋಂಕಿತರ ಸಂಖ್ಯೆಗಿಂತ, ಗುಣಮುಖರಾಗಿ ಬಿಡುಗಡೆಯಾಗುವವರ ಸಂಖ್ಯೆಯೇ ಜಾಸ್ತಿ ಇದೆ. ಭಾನುವಾರ 69 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೆ 1026 ಮಂದಿಯಲ್ಲಿ 789 ಮಂದಿ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 237 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.