ಅಥಣಿ ಪಟ್ಟಣದಲ್ಲಿ ಪದೇ ಪದೇ ಉಂಟಾಗುತ್ತಿರುವ ವಿದ್ಯುತ್ ಅವಘಡಗಳನ್ನು ತಪ್ಪಿಸಲು ಮತ್ತು ನಿರಂತರ ವಿದ್ಯುತ್ ಪೂರೈಸಲು ಹೆಸ್ಕಾಂ ಹೊಸ ಮಾಸ್ಟರ್ ಪ್ಲಾನ್ ರೂಪಿಸಿದೆ. ಶಾಸಕ ಲಕ್ಷ್ಮಣ ಸವದಿ ಅವರ ಪ್ರಯತ್ನದಿಂದ, ಹಳೆಯ ವಿದ್ಯುತ್ ತಂತಿಗಳನ್ನು ತೆಗೆದು, ಸುರಕ್ಷಿತವಾದ ಕವರ್ಡ್ ಕಂಡಕ್ಟರ್ ಕೇಬಲ್‌ಗಳನ್ನು ಅಳವಡಿಸುವ ಮಹತ್ವದ ಯೋಜನೆಗೆ ಶೀಘ್ರದಲ್ಲೇ ಚಾಲನೆ ಸಿಗಲಿದೆ.
ಅಣ್ಣಾಸಾಬ ತೆಲಸಂಗ
ಬೆಳಗಾವಿ: ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿ ಅತ್ಯಂತ ದೊಡ್ಡ ತಾಲೂಕು ಅಥಣಿ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ. ಪಟ್ಟಣದ ಪುರಸಭೆ ಕೂಡ ಇತ್ತೀಚಿಗೆ ನಗರಸಭೆಯಾಗಿ ಘೋಷಣೆಯಾಗಿದೆ. ಪಟ್ಟಣದಲ್ಲಿ ಹೆಚ್ಚಾಗುತ್ತಿರುವ ಬಡಾವಣೆ ಹಾಗೂ ಜನದಟ್ಟಣೆಗೆ ತಕ್ಕಂತೆ ವಿದ್ಯುತ್ ಬೆಳಕಿನ ವ್ಯವಸ್ಥೆ ಹಾಗೂ ಮೇಲಿಂದ ಮೇಲೆ ಉಂಟಾಗುತ್ತಿರುವ ವಿದ್ಯುತ್ ಅವಘಡ ಹಾಗೂ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಹೆಸ್ಕಾಂ ಇಲಾಖೆಯಿಂದ ಮಾಸ್ಟರ್ ಪ್ಲಾನ್ ಮಾಡಲಾಗಿದೆ.
ಪಟ್ಟಣದ ಜನನಿಬಿಡ ಪ್ರದೇಶಗಳಲ್ಲಿ ಪದೇ ಪದೇ ಉಂಟಾಗುತ್ತಿದ್ದ ವಿದ್ಯುತ್ ಅವಘಡಗಳಿಗೆ ಬ್ರೇಕ್ ಹಾಕಲು ಹಾಗೂ ನಾಗರಿಕರಿಗೆ ಗುಣಮಟ್ಟದ ವಿದ್ಯುತ್ ಒದಗಿಸಲು ಶಾಸಕ ಲಕ್ಷ್ಮಣ ಸವದಿ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ಅಥಣಿ ಪಟ್ಟಣಕ್ಕೆ ಮಂಜೂರು ಮಾಡಿಸಿದ್ದಾರೆ. ಅಥಣಿ ಪಟ್ಟಣದಾದ್ಯಂತ ಇರುವ ಹಳೆಯ ವಿದ್ಯುತ್ ವೈರ್‌ಗಳನ್ನು ತೆರವುಗೊಳಿಸಿ, ಅವುಗಳ ಬದಲಿಗೆ ಅತ್ಯಾಧುನಿಕ ತಾಂತ್ರಿಕ ಗುಣಮಟ್ಟದ ಕವರ್ಡ್ ಕಂಡಕ್ಟರ್ ಕೇಬಲ್ (Covered Conductor Cables) ಅಳವಡಿಸುವ ಕಾರ್ಯಕ್ಕೆ ಶೀಘ್ರದಲ್ಲೇ ಚಾಲನೆ ದೊರಕಲಿದೆ.
ಏನಿದು ಮಹತ್ವದ ಯೋಜನೆ?
ಅಥಣಿಯ ಸಾರ್ವಜನಿಕ ಆಸ್ಪತ್ರೆಗೆ ಹಾಗೂ ಮಿನಿ ವಿಧಾನಸೌಧಕ್ಕೆ ಈಗಾಗಲೇ ಸುರಕ್ಷತಾ ಕೇಬಲ್ ಅಳವಡಿಸಿ ದಿನದ 24 ಗಂಟೆ ವಿದ್ಯುತ್ ವ್ಯವಸ್ಥೆ ಒದಗಿಸಲಾಗುತ್ತಿದೆ. ಅದೇ ನಿಟ್ಟಿನಲ್ಲಿ ಪಟ್ಟಣದ 27 ವಾರ್ಡ್‌ಗಳಲ್ಲಿ, ಪಟ್ಟಣದ ಪ್ರಮುಖ ಮಾರುಕಟ್ಟೆಯಲ್ಲಿ, ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರ ಸುರಕ್ಷತಾ ದೃಷ್ಟಿಯಿಂದ ಮತ್ತು ಯಾವುದೇ ಅವಗಡ ಸಂಭವಿಸದಂತೆ ಹೊಸ ತಂತ್ರಜ್ಞಾನದ ಈ ಕೇಬಲ್‌ಗಳನ್ನು ಅಳವಡಿಸಲಾಗುವುದು. ಇವುಗಳು ಸಂಪೂರ್ಣವಾಗಿ ಕವಚವನ್ನು ಹೊಂದಿರುವುದರಿಂದ ಮಳೆ-ಗಾಳಿಯ ಸಮಯದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗುವುದನ್ನು ತಡೆಯುತ್ತವೆ. ಇದರಿಂದ ಸಾರ್ವಜನಿಕರ ಪ್ರಾಣಾಪಾಯದ ಭೀತಿ ದೂರವಾಗಲಿದೆ.
ದಿನವಿಡಿ ನಿರಂತರ ವಿದ್ಯುತ್
ಹಳೆಯ ವೈರ್‌ಗಳಿಂದಾಗಿ ವೋಲ್ಟೇಜ್ ಏರುಪೇರಾಗುವ ಸಮಸ್ಯೆ ಇತ್ತು. ಆದರೆ ಹೊಸ ತಂತ್ರಜ್ಞಾನದ ಕೇಬಲ್‌ಗಳಿಂದಾಗಿ ಗ್ರಾಹಕರಿಗೆ ನಿರಂತರವಾಗಿ ಹಾಗೂ ಉತ್ತಮ ವೋಲ್ಟೇಜ್‌ನೊಂದಿಗೆ ವಿದ್ಯುತ್ ಸರಬರಾಜು ಮಾಡಲು ಸಾಧ್ಯವಾಗಲಿದೆ.
ಪಟ್ಟಣದ ಕಿರಿದಾದ ಗಲ್ಲಿಗಳಲ್ಲಿ ಹಾಗೂ ಜನನಿಬಿಡ ಸ್ಥಳಗಳಲ್ಲಿ ಸ್ಫನ್ ಪೋಲ್ (Spun Poles) ಗಳನ್ನು ಅಳವಡಿಸಿ, ಅಲ್ಲಿಯೇ ವಿದ್ಯುತ್ ಪರಿವರ್ತಕಗಳನ್ನು (TC) ಸ್ಥಾಪಿಸುವ ಮೂಲಕ ಸ್ಥಳಾವಕಾಶದ ಸಮಸ್ಯೆಯನ್ನು ನೀಗಿಸಲಾಗುವುದು. ಈಗಾಗಲೇ ಈ ಯೋಜನೆಗೆ ಅಗತ್ಯವಿರುವ ಕೇಬಲ್‌ಗಳ ದೊಡ್ಡ ಸಂಗ್ರಹವೇ ಅಥಣಿಗೆ ಪೂರೈಕೆಯಾಗಿದ್ದು, ಕಾಮಗಾರಿ ಕಾರ್ಯ ತ್ವರಿತಗತಿಯಲ್ಲಿ ನಡೆಯಲು ಸಜ್ಜಾಗಿದೆ. ಎಲ್ಲ ಪರಿಕರಗಳ ಪೂರೈಕೆಯ ನಂತರ ಶೀಘ್ರದಲ್ಲಿಯೇ ಕಾಮಗಾರಿ ಆರಂಭಗೊಳ್ಳಲಿದೆ.
ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿ
ಹಳೆಯ ಮತ್ತು ಅಪಾಯಕಾರಿ ವಿದ್ಯುತ್ ಲೈನ್‌ಗಳನ್ನು ಬದಲಾಯಿಸುವುದು ಪಟ್ಟಣದ ನಿವಾಸಿಗಳು ಮತ್ತು ವ್ಯಾಪಾರಸ್ಥರ ಬಹುದಿನಗಳ ಬೇಡಿಕೆಯಾಗಿತ್ತು. ಈ ಯೋಜನೆಯು ಪಟ್ಟಣದ ಅಭಿವೃದ್ಧಿ ಮತ್ತು ಸೌಂದರ್ಯೀಕರಣಕ್ಕೆ ಪೂರಕವಾಗಲಿದ್ದು, ತಾಂತ್ರಿಕ ದೋಷಗಳಿಂದ ಉಂಟಾಗುವ ವಿದ್ಯುತ್ ಕಡಿತಕ್ಕೆ ಶಾಶ್ವತ ಪರಿಹಾರ ಸಿಗಲಿದೆ. ಈ ವಿನೂತನ ಯೋಜನೆಯಿಂದಾಗಿ ಅಥಣಿ ಪಟ್ಟಣದ ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿ ಆದಂತಾಗಲಿದೆ ಎಂಬುವುದು ಸಾರ್ವಜನಿಕರ ಹರ್ಷ.
ಅಥಣಿ ನಗರವನ್ನು ಸುಂದರ ಹಾಗೂ ಅಭಿವೃದ್ಧಿ ಮಾಡುವುದೇ ನನ್ನ ಮೊದಲ ಆದ್ಯತೆ. ಪುರಸಭೆ ಆಡಳಿತದ ಸಹಕಾರದೊಂದಿಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಪಟ್ಟಣದ ಜನರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ ನೀಡಲಾಗಿದ್ದು, ಹಳೆಯ ವಿದ್ಯುತ್ ತಂತಿಗಳಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗಬಾರದೆಂಬ ಉದ್ದೇಶದಿಂದ ಈ ಆಧುನಿಕ ಕೇಬಲ್ ಅಳವಡಿಕೆ ಯೋಜನೆ ಜಾರಿಗೆ ತರಲಾಗುತ್ತಿದೆ. ಇದರಿಂದ ಪಟ್ಟಣದ ವ್ಯಾಪಾರಸ್ಥರಿಗೆ ಮತ್ತು ನಿವಾಸಿಗಳಿಗೆ ಸುರಕ್ಷತೆಯೊಂದಿಗೆ ನಿರಂತರ ವಿದ್ಯುತ್ ಸೌಲಭ್ಯ ದೊರೆಯಲಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳುತ್ತಾರೆ.
ಜಿ.ವಿ.ಸಂಪಣ್ಣವರ, ಕಾರ್ಯಪಾಲಕ ಅಭಿಯಂತರ, ಹೆಸ್ಕಾಂ ಉಪ ವಿಭಾಗ ಅಥಣಿ.
ಅಥಣಿ ಪಟ್ಟಣದ ಸು.200 ಕಿ.ಮೀ ವ್ಯಾಪ್ತಿಯಲ್ಲಿ ಸು.70 ಪರಿವರ್ತಕಗಳಿಗೆ ಸಂಪರ್ಕ ಹೊಂದಿಸುವ ಆಧುನಿಕ ತಂತ್ರಜ್ಞಾನದ ಕವಚ ಹೊಂದಿರುವ ಕೇಬಲ್‌ಗಳನ್ನು ಅಳವಡಿಸಲಾಗುವುದು. ಶಾಸಕರ ಪ್ರಯತ್ನದಿಂದ ನಮ್ಮ ಹೆಸ್ಕಾಂ ಇಲಾಖೆಯ ಮೇಲಾಧಿಕಾರಿಗಳು ಸುಮಾರು ₹6 ಕೋಟಿ ಮೌಲ್ಯದ ಕೇಬಲ್ ಮತ್ತು ಇನ್ನಿತರ ಪರಿಕರಗಳನ್ನು ಪೂರೈಸಿದ್ದಾರೆ. ಶೀಘ್ರದಲ್ಲಿಯೇ ಹಳೆಯ ತಂತಿಯನ್ನು ಬದಲಿಸಿ ಕೇಬಲ್ ಅಳವಡಿಸಲಾಗುವುದು. ಇದರಿಂದ ಪಟ್ಟಣದ ನಾಗರಿಕರಿಗೆ, ವ್ಯಾಪಾರಸ್ಥರಿಗೆ ಸುರಕ್ಷತೆಯ ಜೊತೆಗೆ ನಿರಂತರ ವಿದ್ಯುತ್ ದೊರಕಲಿದೆ.


