ಬೆಂಗಳೂರು [ಆ.22]:  ತಮಗೆ ಗುಂಡು ಹಾರಿಸಿ ಬೆದರಿಸಿದರೂ ಜಗ್ಗದೆ ಚಿನ್ನದ ವ್ಯಾಪಾರಿಯೊಬ್ಬರ ಪತ್ನಿ ಮೂವರು ದರೋಡೆಕೋರರನ್ನು ದಿಟ್ಟತನದಿಂದ ಎದುರಿಸಿ ಓಡಿಸಿರುವ ರೋಚಕ ಘಟನೆ ರಾಜಧಾನಿ ಬೆಂಗಳೂರಿನ ಪ್ಯಾಲೆಸ್‌ ಗುಟ್ಟಹಳ್ಳಿಯ ವಿನಾಯಕ ದೇವಾಲಯ ಸರ್ಕಲ್‌ ಬಳಿ ಬುಧವಾರ ಹಾಡಹಗಲೇ ನಡೆದಿದೆ.

ಪ್ಯಾಲೆಸ್‌ ಗುಟ್ಟಹಳ್ಳಿ ಮುಖ್ಯರಸ್ತೆಯ ಸಾಮ್ರಾಟ್‌ ಜುವೆಲ​ರ್ಸ್ ಮಳಿಗೆ ಮಾಲಿಕ ಆಶೀಶ್‌ ಅವರ ಪತ್ನಿ ರಾಕಿ ಈ ಶೌರ್ಯ ತೋರಿದ್ದು, ಅವರ ಧೈರ್ಯಕ್ಕೆ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಳಿಗೆಯಲ್ಲಿ ಮಧ್ಯಾಹ್ನ 2.40ರ ಸುಮಾರಿಗೆ ಆಶೀಶ್‌ ದಂಪತಿ ಇದ್ದರು. ಆಗ ಮೂವರು ಆಗಂತುಕರು ಚಿನ್ನ ಖರೀದಿಸುವ ಸೋಗಿನಲ್ಲಿ ದರೋಡೆಗೆ ಮುಂದಾಗಿದ್ದಾರೆ. ಈ ಹಂತದಲ್ಲಿ ಒಂದು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಚಿನ್ನದ ವ್ಯಾಪಾರಿ ದಂಪತಿಯನ್ನು ಬೆದರಿಸಲು ಆರೋಪಿಗಳು ಪ್ರಯತ್ನಿಸಿದ್ದಾರೆ. ಈ ವೇಳೆ ಸಮಯ ಪ್ರಜ್ಞೆ ತೋರಿದ ರಾಕಿ, ತಕ್ಷಣವೇ ಗುಂಡು ಹಾರಿಸಿದವನ ಕಡೆಗೆ ಚೇರ್‌ ಎಸೆದು ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

ವ್ಯಾಪಾರಿಗಳ ಕೆಚ್ಚೆದೆಯ ಹೋರಾಟಕ್ಕೆ ಹೆದರಿದ ದರೋಡೆಕೋರರು, ಕೂಡಲೇ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇತ್ತ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಹಿಡಿಯಲು ಆಶೀಶ್‌ ಬೆನ್ನಹತ್ತಿದ್ದರೂ ಸಹ ಶರವೇಗದಲ್ಲಿ ಮಾಯವಾಗಿದ್ದಾರೆ. ಈ ಘಟನೆ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸರು ಹಾಗೂ ಸಿಸಿಬಿ ಅಧಿಕಾರಿಗಳು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಜಂಟಿ ಕಾರ್ಯಾಚರಣೆ ಆರಂಭಿಸಿದ್ದಾರೆ.

ಸಚಿನ್‌ ಚೈನ್‌ ಕೇಳಿ ಬಂದಿದ್ದ ದುಷ್ಕರ್ಮಿಗಳು!

ಚಿನ್ನದ ವ್ಯಾಪಾರಿ ಆಶೀಶ್‌ ಅವರು, ತಮ್ಮ ಕುಟುಂಬದ ಜತೆ ವೈಯಾಲಿಕಾವಲ್‌ನಲ್ಲಿ ನೆಲೆಸಿದ್ದಾರೆ. ನಾಲ್ಕು ವರ್ಷಗಳಿಂದ ಅವರು, ವಿನಾಯಕ ದೇವಾಲಯ ಸರ್ಕಲ್‌ ಸಮೀಪ ‘ಸಾಮ್ರಾಟ್‌ ಜುವೆಲ​ರ್‍ಸ್’ ಹೆಸರಿನ ಚಿನ್ನಾಭರಣ ಮಾರಾಟ ಮಳಿಗೆ ನಡೆಸುತ್ತಿದ್ದಾರೆ. ಪ್ರತಿದಿನ 10 ಗಂಟೆಗೆ ವಹಿವಾಟು ಆರಂಭಿಸಿ ರಾತ್ರಿ ಸುಮಾರು 8ಕ್ಕೆ ಅವರು ಬಂದ್‌ ಮಾಡುತ್ತಾರೆ. ತಮ್ಮ ಮಳಿಗೆ ವ್ಯವಹಾರವನ್ನು ಆಶೀಶ್‌ ಮತ್ತು ಅವರ ಪತ್ನಿ ರಾಕಿ ನಿರ್ವಹಿಸುತ್ತಾರೆ.

ಎಂದಿನಂತೆ ದಂಪತಿ ಬುಧವಾರ ಮಧ್ಯಾಹ್ನ 2.40ರಲ್ಲಿ ವ್ಯಾಪಾರದಲ್ಲಿ ತೊಡಗಿದ್ದರು. ಆ ವೇಳೆ ಮಳಿಗೆಗೆ ಮೂವರು ದುಷ್ಕರ್ಮಿಗಳು ಬಂದಿದ್ದಾರೆ. ಈ ಪೈಕಿ ಹೆಲ್ಮಟ್‌ ಧರಿಸಿದ್ದ ಒಬ್ಬಾತ, ಮಳಿಗೆಯೊಳಗೆ ಬಂದು ಆಶೀಶ್‌ ಅವರಿಗೆ ಸಚಿನ್‌ ತೊಡುವ ವಿನ್ಯಾಸದ ಚೈನ್‌ ಕೊಡುವಂತೆ ಕೇಳಿದ್ದಾರೆ. ಆದರೆ ಆ ಗ್ರಾಹಕನ ಮೇಲೆ ಆಶೀಶ್‌ ಅವರಿಗೆ ಅನುಮಾನ ಮೂಡಿದೆ. ಇತ್ತ ಕ್ಷಣಾರ್ಧದಲ್ಲಿ ಆತ, ತನ್ನ ಪಿಸ್ತೂಲ್‌ ತೆಗೆದು ಒಂದು ಸುತ್ತು ದಾಳಿಯಲ್ಲಿ ಗುಂಡು ಹಾರಿಸಿ ಬೆದರಿಸಿದ್ದಾನೆ. ಆ ವೇಳೆ ಪತಿ ಪಕ್ಕದಲ್ಲೇ ಇದ್ದ ರಾಕಿ, ಕೂಡಲೇ ಗುಂಡು ಹಾರಿಸಿದ ಕಿಡಿಗೇಡಿ ಮೇಲೆ ಚೇರ್‌ ಎಸೆದಿದ್ದಾರೆ. ಇದರಿಂದ ಭಯಗೊಂಡ ಆರೋಪಿಗಳು, ಕಾಲಿಗೆ ಬುದ್ಧಿ ಹೇಳಿದ್ದಾರೆ. ಆಗ ಕೌಂಟರ್‌ನಿಂದ ಹೊರಗೆ ಜಿಗಿದು ಆರೋಪಿಗಳನ್ನು ಆಶೀಶ್‌ ಬೆನ್ನಹಟ್ಟಿದ್ದಾರೆ. ಆದರೆ ಮಿಂಚಿನ ವೇಗದಲ್ಲಿ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ ಎಂದು ಆಯುಕ್ತ ಭಾಸ್ಕರ್‌ ರಾವ್‌ ತಿಳಿಸಿದ್ದಾರೆ.

ಈ ಘಟನಾ ಸ್ಥಳಕ್ಕೆ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌, ಕೇಂದ್ರ ವಿಭಾಗದ ಡಿಸಿಪಿ ಚೇತನ್‌ ಸಿಂಗ್‌ ರಾಥೋಡ್‌ ಹಾಗೂ ಸಿಸಿಬಿ ಡಿಸಿಪಿ-2 ಕೆ.ಪಿ.ರವಿಕುಮಾರ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ವೈಯಾಲಿಕಾವಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ವೃತ್ತಿಪರ ದರೋಡೆಕೋರರ ಕೃತ್ಯ: ಶಂಕೆ

ಕೃತ್ಯದಲ್ಲಿ ವೃತ್ತಿಪರ ದರೋಡೆಕೋರರು ಹಾಗೂ ಆಶೀಶ್‌ ಅವರ ವ್ಯವಹಾರದ ಬಗ್ಗೆ ತಿಳಿದಿರುವ ವ್ಯಕ್ತಿಗಳು ಪಾಲ್ಗೊಂಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಳೆ ಪ್ರಕರಣಗಳ ಆರೋಪಿಗಳ ಕುರಿತು ತನಿಖಾ ತಂಡಗಳು ಮಾಹಿತಿ ಕಲೆ ಹಾಕುತ್ತಿವೆ ಎಂದು ತಿಳಿದು ಬಂದಿದೆ.

ಈ ಕೃತ್ಯವು ಮಳಿಗೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಲ್ಲದೆ ವಿನಾಯಕ ದೇವಾಲಯ ಸರ್ಕಲ್‌ ಸುತ್ತಮುತ್ತಲ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿರುವ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಪರಿಶೀಲಿಸಲಾಗುತ್ತದೆ. ಹಾಗೆಯೇ ಶಂಕಿತರ ಮೊಬೈಲ್‌ ಕರೆಗಳನ್ನು ಸಹ ಪರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಾಡ ಪಿಸ್ತೂಲ್‌ ಬಳಕೆ

ದರೋಡೆ ಕೃತ್ಯದಲ್ಲಿ ನಾಡ ಪಿಸ್ತೂಲ್‌ ಬಳಕೆಯಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಘಟನಾ ಸ್ಥಳದಲ್ಲಿ ಲಭ್ಯವಾದ ಕಾಟ್ರೀಜ್‌ ಪರಿಶೀಲಿಸಿದಾಗ ನಾಡ ಪಿಸ್ತೂಲ್‌ ಮಾದರಿಯಲ್ಲಿದ್ದು, ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುಂಡಿನ ದಾಳಿ ನಡೆಸಿದರೂ ಹೆದರದೆ ದರೋಡೆಕೋರರನ್ನು ಹಿಮ್ಮೆಟ್ಟಿಸಿದ ರಾಕಿ ಅವರ ಧೈರ್ಯ ಪ್ರಶಂಸನೀಯ. ಇದರಿಂದ ಮಾರಣಾಂತಿಕ ಹಲ್ಲೆ ತಪ್ಪಿದೆ. ಆರೋಪಿಗಳ ಕುರಿತು ಮಾಹಿತಿ ಸಿಕ್ಕಿದ್ದು, ಶೀಘ್ರದಲ್ಲೇ ಬಂಧಿಸುತ್ತೇವೆ.

-ಭಾಸ್ಕರ್‌ ರಾವ್‌, ನಗರ ಪೊಲೀಸ್‌ ಆಯುಕ್ತ.