ಬೆಂಗಳೂರು [ನ.16]:  ಸಂಬಂಧಿಕ ನೀಡುತ್ತಿದ್ದ ಕಿರುಕುಳ ತಾಳಲಾರದೇ ವೃದ್ಧ ದಂಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಸವೇಶ್ವರ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಂಜುನಾಥ ನಗರದ ನಿವಾಸಿಗಳಾದ ಮೋಹನ್‌ (62), ಇವರ ಪತ್ನಿ ನಿರ್ಮಲಾ (57) ಮೃತರು. ಸಂಬಂಧಿ ಮನೋಹರ್‌ ಎಂಬಾತನ ವಿರುದ್ಧ ಡೆತ್‌ನೋಟ್‌ ಬರೆದಿಟ್ಟಿದ್ದು, ಆತನ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೋಹನ್‌ ಅವರು ಬೆಮೆಲ್‌ನ ನಿವೃತ್ತ ಉದ್ಯೋಗಿಯಾಗಿದ್ದು, ಪತ್ನಿ ಜತೆ ನೆಲೆಸಿದ್ದರು. ಇವರ ಮನೆ ಸಮೀಪವೇ ಪುತ್ರನ ಕುಟುಂಬ ಪ್ರತ್ಯೇಕವಾಗಿ ವಾಸವಿದೆ. ಕೆಲವು ವರ್ಷಗಳಿಂದ ನಿರ್ಮಲಾ ತನ್ನ ದೂರದ ಸಂಬಂಧಿ ಮನೋಹರ್‌ ಎಂಬಾತನ ಜತೆ ಆತ್ಮೀಯತೆ ಹೊಂದಿದ್ದರು. ಮನೋಹರ್‌ ಆಗಾಗ್ಗೆ ಮನೆ ಬಂದು ಹೋಗುತ್ತಿದ್ದ. ನಿರ್ಮಲಾ ಅವರು ಮನೋಹರ್‌ ಜತೆ ಆತ್ಮೀಯತೆ ಹೊಂದಿದ್ದ ಬಗ್ಗೆ ಕುಟುಂಬದಲ್ಲಿ ಜಗಳ ಕೂಡ ನಡೆದಿತ್ತು. ಆದರೂ ಕೂಡ ಇಬ್ಬರ ಗೆಳೆತನ ಮುಂದುವರೆದಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೋಹನ್‌ ಅವರ ಸೊಸೆ ಮೇಲೆ ಮನೋಹರ್‌ ಕಣ್ಣು ಹಾಕಿದ್ದ. ಸೊಸೆಯನ್ನು ಪರಿಚಯಿಸುವಂತೆ ನಿರ್ಮಲಾ ಅವರಿಗೆ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ನಿರ್ಮಲಾ ಪತಿ ಬಳಿ ಹೇಳಿಕೊಂಡಿದ್ದರು. ಮೋಹನ್‌ ಅವರು ಮನೋಹರ್‌ನನ್ನು ಪ್ರಶ್ನಿಸಿ ಎಚ್ಚರಿಕೆ ನೀಡಿದ್ದರು. ಆದರೂ ಬಿಡದ ಆರೋಪಿ ನಿಮ್ಮ ಸೊಸೆ ನನ್ನೊಂದಿಗೆ ಸಲುಗೆಯಿಂದ ಇರಲು ಸೂಚಿಸಿ ಎಂದು ನಿರ್ಮಲಾ ಅವರಿಗೆ ಬೆದರಿಸುತ್ತಿದ್ದ. 

ಈ ನಡುವೆ ಮನೋಹರ್‌ ಜತೆ ನಿರ್ಮಲಾ ಆತ್ಮೀಯತೆ ಹೊಂದಿದ್ದ ವಿಚಾರಕ್ಕೆ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಇದರಿಂದ ನೊಂದ ದಂಪತಿ ಶೌಚಾಲಯ ಶುಚಿಗೊಳಿಸುವ ರಾಸಾಯನಿಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಡೆತ್‌ನೋಟ್‌ ಪತ್ತೆಯಾಗಿದ್ದು, ತಮಿಳು ಭಾಷೆಯಲ್ಲಿ ಮನೋಹರ್‌ ನೀಡುತ್ತಿದ್ದ ಕಿರುಕುಳದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.