ದೇಶದ ಮೊದಲ SCADA Gate ಗೆ ಇಂದು ಪ್ರಧಾನಿ ಮೋದಿ ಚಾಲನೆ
- ಕೋಹಿನೂರ್ ವಜ್ರದ ತವರು, ಯಾದಗಿರಿ ಜಿಲ್ಲೆಗೆ ಪ್ರಧಾನಿ ಮೋದಿ
- ಕಾಲಜ್ಞಾನಿ ಕೊಡೇಕಲ್ ಬಸವಣ್ಣನ ನೆಲದಲ್ಲಿಂದು ಮೋದಿ ಮೋಡಿ
- ಪ್ರಥಮ ಸ್ವಾತಂತ್ಯ್ರ ಸಂಗ್ರಾಮದಲ್ಲಿ ಬ್ರಿಟಿಷರ ರುಂಡ ಚೆಂಡಾಡಿದ ನಾಯಕರೂರು
- ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ, ಶಂಕುಸ್ಥಾಪನೆ
ಆನಂದ್ ಎಂ. ಸೌದಿ
ಯಾದಗಿರಿ (ಜ.19) : ಕೋಹಿನೂರ್ ವಜ್ರದ ತವರು ಜಿಲ್ಲೆ, ಭವಿಷ್ಯಕಾರ ನಾಸ್ಟ್ರಾಡಾಮಸ್‌ಗಿಂತಲೂ ಒಂದು ಹೆಜ್ಜೆ ಮುಂದಿನ ಕಾಲಜ್ಞಾನಿ ಕೊಡೇಕಲ್ ಬಸವಣ್ಣನ ಪಾದಸ್ಪರ್ಷಿ ನೆಲ, ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ರುಂಡ ಚೆಂಡಾಡಿದ ‘ಶೂರರ ಪುರ’, ಇಡೀ ಭರತಖಂಡ ಗೆಲ್ಲುವ ಉಮೇದಿಯಿಂದ ಬಂದ ಮೊಗಲ ಸಾಮ್ರಾಟ ಔರಂಗಜೇಬನನ್ನು ಹಿಮ್ಮೆಟ್ಟಿಸಿದ, ಪ್ರಾಗೈತಿಹಾಸಿಕ, ಪೌರಾಣಿಕ ಹಾಗೂ ಐತಿಹಾಸಿಕ ಸಾಕ್ಷಿಗಳೂರಿಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಗುರುವಾರ (ಜ.19) ರಂದು ಆಗಮಿಸಲಿದ್ದಾರೆ.
ಸುಮಾರು 4700 ಕೋಟಿ ರು.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ನಾರಾಯಣಪುರ(Narayanapur)ದ ಬಸವ ಸಾಗರ ಜಲಾಶಯ(Basava Sagar Reservoir)ದ ಎಡದಂಡೆ ಕಾಲುವೆಗಳ ವಿಸ್ತರಣೆ, ಪುನಶ್ಚೇತನ ಹಾಗೂ ನವೀಕರಣ ಯೋಜನೆ ಉದ್ಘಾಟನೆ, 2 ಸಾವಿರ ಕೋಟಿ ರು.ಗಳ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ 2 ಸಾವಿರ ಕೋಟಿ ರು.ಗಳ ವೆಚ್ಚದ ಸೂರತ್-ಚೆನ್ನೈ ಎಕ್ಸಪ್ರೆಸ್ ವೇ ನಿರ್ಮಾಣಕ್ಕೆ ಶಂಕುಸ್ಥಾಪನೆ ಸೇರಿದಂತೆ, ಇನ್ನಿತರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಗುರುವಾರ ಜಿಲ್ಲೆಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಈ ಭೇಟಿ ಐತಿಹಾಸಿಕ ಎಂದು ಪರಿಗಣಿಸಲಾಗುತ್ತಿದ್ದು, ಹಬ್ಬದ ವಾತಾವರಣ ಕಂಡುಬರುತ್ತಿದೆ. ಮೋದಿ ಸ್ವಾಗತಕ್ಕೆ ಗಿರಿ ಜಿಲ್ಲೆ ಕಾತುರದಿ ಕಾಯುತ್ತಿರುವಂತಿದೆ.
PM Narendra Modi: ಇಂದು ಕೊಡೇಕಲ್ ಗ್ರಾಮಕ್ಕೆ ಪ್ರಧಾನಿ ಮೋದಿ ಆಗಮನ; ಜಿಲ್ಲಾಧಿಕಾರಿ ಸ್ನೇಹಲ್ ಸುದ್ದಿಗೋಷ್ಠಿ
ಸುರಪುರ ಹಾಲಿ ಶಾಸಕ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ನರಸಿಂಹ ನಾಯಕ್ (ರಾಜೂಗೌಡ) (Raju gowda) ಅವರ ರಾಜಕೀಯ ಭವಿಷ್ಯಕ್ಕೆ ಪ್ರಧಾನಿ ಅವರ ಈ ಭೇಟಿ ಭಾರಿ ಮಹತ್ವ ಪಡೆದಿದೆ. ರಾಜಕೀಯವಾಗಿ ರಾಜೂಗೌಡರಿಗೆ ಇದು ಬಲ ತುಂಬಲಿದೆ ಅನ್ನೋದು ಇಲ್ಲಿನವರ ಮಾತುಗಳು.
ಪ್ರಧಾನಿ ನರೇಂದ್ರ ಮೋದಿ(PM Narendra Modi)ಯವರು ಭಾರತೀಯ ವಾಯಪಡೆಯ ವಿಶೇಷ ವಿಮಾನದ ಮೂಲಕ ಬೆಳಗ್ಗೆ 9 ಗಂಟೆಗೆ ದೆಹಲಿಯಿಂದ ನಿರ್ಗಮಿಸಿ, 11 ಗಂಟೆಗೆ ಕಲಬುರಗಿಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಭಾರತೀಯ ವಾಯುಪಡೆಯ ಎಂಐ 17 ವಿಶೇಷ ಹೆಲಿಕಾಪ್ಟರ್ ಮೂಲಕ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮಕ್ಕೆ ಬೆಳಗ್ಗೆ 11.50ಕ್ಕೆ ಆಗಮಿಸಲಿದ್ದಾರೆ.
ಶಾಲೆಗಳಿಗೆ ರಜೆ, ಮಾರ್ಗ ಬದಲಾವಣೆ :
ಕೊಡೇಕಲ್(Kodekal) ಹೊರವಲಯದ ಹುಣಸಗಿ-ನಾರಾಯಣಪುರ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಬೃಹತ್ ವೇದಿಕೆ ಸಜ್ಜುಗೊಳಿಸುವ ಅಂತಿಮ ಹಂತದ ಸಿದ್ಧತೆಗಳಿಗೆ ಬುಧವಾರ ಸಂಜೆ ಕೊನೆಕ್ಷಣದ ಟಚ್ ನೀಡಲಾಗುತ್ತಿತ್ತು. ಹುಣಸಗಿ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ಸುರಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳು ರಜೆ ಘೋಷಿಸಿದ್ದರೆ, ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಹಲವು ಮಾರ್ಗಗಳನ್ನು ಬದಲಾಯಿಸಲಾಗಿದೆ. ಧೂಮಪಾನ, ಮದ್ಯಪಾನ ಹಾಗೂ ತಂಬಾಕು ಸೇವನೆ ಯನ್ನು ಸಾರ್ವಜನಿಕ ಸ್ಥಳದಲ್ಲಿ ನಿಷೇಧಿಸಲಾಗಿದೆ. ಪ್ರತಿ ಹೆಜ್ಜೆ ಹೆಜ್ಜೆಗೂ ಎಸ್ಪಿಜಿ ಭದ್ರತೆ ಕಣ್ಗಾವಲು ಹಾಕಲಾಗಿದೆ. ಯಾದಗಿರಿ ಸೇರಿದಂತೆ, ರಾಯಚೂರು, ಕೊಪ್ಪಳ, ಬಳ್ಳಾರಿ, ದಾವಣಗೆರೆ ಮುಂತಾದ ಜಿಲ್ಲೆಗಳಿಂದ ಪೊಲೀಸ್ ಬಂದೋಬಸ್‌್ತ ಕಲ್ಪಿಸಲಾಗಿದೆ.
ಸುಮಾರು 500 ಎಕರೆ ಪ್ರದೇಶದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ವೇದಿಕೆಗಾಗಿ 100 ಎಕರೆ ಜಮೀನು ಬಳಸಿದ್ದರೆ, 400 ಎಕರೆ ಪ್ರದೇಶದಲ್ಲಿ ಪಾರ್ಕಿಂಗ್ ಹಾಗೂ ಇನ್ನಿತರ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಮೂರು ವಿಶೇಷ ತಾತ್ಕಾಲಿಕ ಹೆಲಿಪ್ಯಾಡುಗಳನ್ನು ನಿರ್ಮಿಸಲಾಗಿದೆ. ಪ್ರಧಾನಿ ಮೋದಿ ಅವರು ವೇದಿಕೆವರೆಗೆ ಆಗಮಿಸಲು ಹೆಲಿಪ್ಯಾಡಿನಿಂದ ನೇರವಾಗಿ ವೇದಿಕೆಯಡೆಗೆ ರಸ್ತೆ ನಿರ್ಮಿಸಲಾಗಿದೆ. ಮಧ್ಯಾಹ್ನ 12 ಗಂಟೆಗೆ ಕಾರ್ಯಕ್ರಮ ಆರಂಭಗೊಂಡು, 1 ಗಂಟೆವರೆಗೆ ಅಲ್ಲಿರಲಿದ್ದು, 1.05 ಗಂಟೆಗೆ ಹೆಲಿಪ್ಯಾಡಿನಿಂದ ನೇರವಾಗಿ 1.15 ಕ್ಕೆ ಕಲಬುರಗಿ ಮಳಖೇಡಕ್ಕೆ ತೆರಳಲಿದ್ದಾರೆ.
ಸ್ಕಾಡಾ ತಂತ್ರಜ್ಞಾನ ಮೂಲಕ ಗೇಟುಗಳ ನಿರ್ವಹಣೆ :
ಪ್ರಧಾನಮಂತ್ರಿ ಮೋದಿ ಅವರು ನಾರಾಯಣಪುರ ಎಡದಂಡೆ ಕಾಲುವೆಯ ವಿಸ್ತರಣಾ, ಪುನಶ್ಚೇತನ ಹಾಗೂ ನವೀಕರಣ ಮತ್ತು ಆಧುನೀಕರಣ ಯೋಜನೆ ಉದ್ಘಾಟಿಸಲಿದ್ದಾರೆ. ಇದು ದೇಶದಲ್ಲೇ ಮೊದಲ ಬಾರಿಗೆ ಸ್ಕಾಡಾ (ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಗೆ ಯಾಂತ್ರೀಕೃತಗೊಂಡ ವ್ಯವಸ್ಥೆ) ಸ್ವಯಂ ಚಾಲಿತ ಗೇಟುಗಳನ್ನು ಅಳವಡಿಸಲಾಗಿದೆ. ಕಾಲುವೆ ಮೂಲಕ 10,000 ಕ್ಯೂಸೆಕ್ ನೀರು ಸಾಗಿಸುವ ಸಾಮರ್ಥ್ಯ ಹೊಂದಿರುವ ಈ ಯೋಜನೆಯು 4.5 ಲಕ್ಷ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಕಲ್ಪಿಸುತ್ತದೆ.
ಈ ಯೋಜನೆಯಿಂದ 4,400 ಗೇಟುಗಳ ಮೂಲಕ ಹರಿಯುವ ನೀರು ಪೋಲಾಗದಂತೆ ನೋಡಿಕೊಳ್ಳಲಾಗುತ್ತಿದೆ. ಕಲಬುರಗಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳ 560 ಗ್ರಾಮಗಳ 3 ಲಕ್ಷಕ್ಕೂ ಹೆಚ್ಚು ರೈತರಿಗೆ ಇದರಿಂದ ಅನುಕೂಲವಾಗಲಿದೆ. ಯೋಜನೆಯ ಒಟ್ಟು ವೆಚ್ಚ ಸುಮಾರು 4,700 ಕೋಟಿ ರೂಪಾಯಿ ಆಗಿದೆ.
ಸೂರತ್ -ಚೆನ್ನೈ ಎಕ್ಸಪ್ರೆಸ್ ವೇ :
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳೊಲ್ಲಂದಾದ ಭಾರತಮಾಲಾ ರಾಷ್ಟಿ್ರೕಯ ಹೆದ್ದಾರಿ, ಸೂರತ್ ಚೆನ್ನೈ ಎಕ್ಸಪ್ರೆಸ್ ವೇ ಷಟ್ಪಥ ರಸ್ತೆ ನಿರ್ಮಾಣ ಕಾರ್ಯಕ್ಕೆ ಮೋದ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಷಟ್ಪಥದ ಹಸಿಲು ವಲಯ ರಸ್ತೆ ಯೋಜನೆಯು ಸೂರತ್-ಚೆನ್ನೈ ಎಕ್ಸಪ್ರೆಸ್ ಮಾರ್ಗದ ಭಾಗವಾಗಿದೆ. ಇದನ್ನು ಸುಮಾರು 2,000 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.
ಬಹುಗ್ರಾಮ ಕುಡಿಯುವ ನೀರು :
ಜಲಜೀವನ ಅಭಿಯಾನ(jala jeevan mission)ದಡಿಯಲ್ಲಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೂ ಶಂಕುಸ್ಥಾಪನೆಯನ್ನು ಪ್ರಧಾನಿ ಮೋದಿ ನೆರವೇರಲಿಸಲಿದ್ದಾರೆ. ಈ ಯೋಜನೆಯಡಿ 117 ಎಂಎಲ್.ಡಿ ನೀರು ಸಂಸ್ಕರಣಾ ಘಟಕವನ್ನು ನಿರ್ಮಿಸಲಾಗುವುದು. 2,050 ಕೋಟಿ ರುಪಾಯಿಗೂ ಹೆಚ್ಚು ವೆಚ್ಚದ ಈ ಯೋಜನೆಯು ಯಾದಗಿರಿ ಜಿಲ್ಲೆಯ 700ಕ್ಕೂ ಹೆಚ್ಚು ಗ್ರಾಮೀಣ ಜನವಸತಿಗಳು ಮತ್ತು ಮೂರು ಪಟ್ಟಣಗಳ ಸುಮಾರು 2.3 ಲಕ್ಷ ಮನೆಗಳಿಗೆ ಕುಡಿಯುವ ನೀರನ್ನು ಪೂರೈಸುತ್ತದೆ.
ಕರ್ನಾಟಕದಲ್ಲಿ ಮತ್ತೆ ಮೋದಿ ಹವಾ: ಇಂದು ಯಾದಗಿರಿ, ಕಲಬುರಗಿಗೆ ಇಂದು ಪ್ರಧಾನಿ ಭೇಟಿ
ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ, ಪಶು ಸಂಗೋಪನೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಸುರಪುರ ಮತಕ್ಷೇತ್ರದ ಶಾಸಕ ನರಸಿಂಹ ನಾಯಕ್ (ರಾಜುಗೌಡ), ರಾಯಚೂರು ಸಂಸದ ರಾಜಾ ಅಮರೇಶ್ ನಾಯಕ್ ಮುಂತಾದವರು ಇದರಲ್ಲಿ ಪಾಲ್ಗೊಳ್ಳಲಿದ್ದು, ಸುಮಾರು 3 ಲಕ್ಷ ಜನರು ಆಗಮಿಸುವ ಸಾಧ್ಯತೆಯಿದೆ ಎನ್ನಲಾಗಿದೆ.