ಪೀರ್ ಬೌಂಡ್ರಿ ಮೈದಾನ ಪಾಲಿಕೆಯ ಆಸ್ತಿ ಎಂದು ನ್ಯಾಯಾಲಯ ಘೋಷಣೆ. ಶೀಘ್ರ ತಡೆಗೋಡೆ ನಿರ್ಮಾಣ ಮಾಡಿ ಆಸ್ತಿ ರಕ್ಷಣೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದ ತುಷಾರ್ ಗಿರಿನಾಥ್.
ಬೆಂಗಳೂರು (ಜು.28): ಕಾಟನ್‌ಪೇಟೆ ರಸ್ತೆಯ ಬಳಿಯ ಪೀರ್ ಬೌಂಡ್ರಿ ಮೈದಾನ ಬಿಬಿಎಂಪಿ ಆಸ್ತಿಯಾಗಿದ್ದು, ಶೀಘ್ರವಾಗಿ ಕಾಂಪೌಂಡ್ ನಿರ್ಮಿಸಿ ಆಸ್ತಿ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೀರ್ ಬೌಂಡ್ರಿ ಮೈದಾನ ಪಾಲಿಕೆಯ ಆಸ್ತಿಯಾಗಿದೆ. ಅದರೆ ಖಾಸಗಿ ವ್ಯಕ್ತಿಗಳು ಈ ಆಸ್ತಿಯನ್ನು ತಮ್ಮದೆಂದು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ನ್ಯಾಯಾಲಯಕ್ಕೆ ಸೂಕ್ತ ದಾಖಲೆಗಳನ್ನು ಪಾಲಿಕೆಯಿಂದ ಸಲ್ಲಿಸಿತ್ತು. ದಾಖಲೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿದ ನ್ಯಾಯಾಲಯ ಬಿಬಿಎಂಪಿ ಆಸ್ತಿಯೆಂದು ಆದೇಶಿಸಿದೆ. ಈ ಪೀರ್ ಬೌಂಡ್ರಿ ಬಳಿಯಿರುವ ಮಸೀದಿ ಹೊರತುಪಡಿಸಿ 3.22 ಎಕರೆ ಮೈದಾನಕ್ಕೆ ಕಾಂಪೌಂಡ್ ಹಾಕಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಕಳೆದ 2016ರಲ್ಲಿ ಕಬ್ಬಿಣದ ಜಾಲರಿ ಬೇಲಿ ನಿರ್ಮಾಣಕ್ಕೆ .49 ಲಕ್ಷ ಮೀಸಲಿಡಲಾಗಿತ್ತು. ಕಾರಣಾಂತರದಿಂದ ಬೀಲಿ ನಿರ್ಮಾಣವಾಗಿರಲಿಲ್ಲ. ಇದೀಗ ಪಾಲಿಕೆ ಸ್ವತ್ತಿಗೆ ಕಾಂಪೌಂಡ್ ನಿರ್ಮಾಣಕ್ಕೂ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪಾರದರ್ಶಕತೆ ಕಾಯ್ದೆ ಅಡಿ (4ಜಿ) ವಿನಾಯಿತಿ ಪಡೆದು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್) ಸಂಸ್ಥೆಗೆ ಕಾಮಗಾರಿ ನೀಡಲು ತೀರ್ಮಾನಿಸಲಾಗಿದೆ. ಶೀಘ್ರವಾಗಿ ಮೈದಾನದ ಸುತ್ತಲೂ ಕಾಂಪೌಂಡ್ ನಿರ್ಮಿಸುವ ಕಾರ್ಯ ಆರಂಭಿಸಲಾಗುತ್ತದೆ. ಒಂದು ವೇಳೆ ವಿರೋಧ ವ್ಯಕ್ತವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ನೆರವು ಪಡೆಯಲಾಗುವುದು ಎಂದು ವಿವರಿಸಿದರು.
ಒತ್ತುವರಿ ತೆರವು ತಲೆನೋವು: ಪೀರ್ ಬೌಂಡ್ರಿ ಮೈದಾನದಲ್ಲಿ ಹಲವು ಉದ್ಯಮಗಳನ್ನು ನಡೆಸಲಾಗುತ್ತಿದೆ, ಗೂಡ್‌್ಸ ವಾಹನಗಳನ್ನು ನಿಲ್ಲಿಸುವುದು, ತ್ಯಾಜ್ಯ ಸುರಿಯುವುದು, ಶಾಮಿಯಾನದ ಸಾಮಗ್ರಿಗಳನ್ನು ಇಡುವುದು, ದುರಸ್ತಿ ಮಾಡುವ ಬೈಕ್‌ಗಳನ್ನು ನಿಲ್ಲಿಸುವುದು ಮಾಡಲಾಗುತ್ತದೆ. ಜತೆಗೆ, ಸುತ್ತಲಿನ ನಿವಾಸಿಗಳು ಯಾವುದೇ ಕಟ್ಟಡ ನಿರ್ಮಾಣ ಕಾಮಗಾರಿಗೆ ಅಗತ್ಯವಿರುವ ಜಲ್ಲಿಕಲ್ಲು, ಮಣ್ಣು ಇತ್ಯಾದಿ ಉಪಕರಣಗಳನ್ನು ಮೈದಾನದಲ್ಲಿ ತಂದು ಹಾಕಿಕೊಂಡಿದ್ದಾರೆ. ವಾಹನ ನಿಲುಗಡೆ ಮತ್ತು ಮೈದಾನದಲ್ಲಿ ಹಾಕಲಾಗಿರುವ ಸಾಮಗ್ರಿಗಳನ್ನು ತೆರವುಗೊಳಿಸಲು ಪಾಲಿಕೆ ಸೂಚಿಸಿದರೂ, ಪಾಲನೆ ಮಾಡದಿರುವುದು ಬಿಬಿಎಂಪಿ ಅಧಿಕಾರಿಗಳಿಗೆ ತಲೆನೋವಾಗಿದೆ.
ರುದ್ರಭೂಮಿಯಲ್ಲಿ ಪಾಲಿಕೆ ಸೌಧ: ಮುಖ್ಯ ಆಯುಕ್ತರಿಗೆ ದೂರು
ರಸ್ತೆ ಗುಂಡಿಯ ಸ್ಥಿತಿ ವರದಿ ನೀಡಿ: ರಸ್ತೆ ಗುಂಡಿ ಮುಚ್ಚುವ ಕಾರ್ಯದ ವಸ್ತುಸ್ಥಿತಿ ವರದಿ ಸಲ್ಲಿಸಲು ಆ.3 ರವರೆಗೆ ಬಿಬಿಎಂಪಿಗೆ ಹೈಕೋರ್ಟ್ ಕಾಲಾವಕಾಶ ನೀಡಿದೆ. ಬೆಂಗಳೂರು ನಗರದ ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿ ಮುಚ್ಚುವ ಸಂಬಂಧ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರ ನೇತೃತ್ವದ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು.
ಖಾಸಗಿ ವಾಹನಗಳಲ್ಲಿ ‘ಬಿಬಿಎಂಪಿ’ ಸ್ಟೀಕರ್ ಬಳಕೆಗೆ ಪಾಲಿಕೆ ನಿಷೇಧ
ಈ ವೇಳೆ ಬಿಬಿಎಂಪಿ ಪರ ವಕೀಲರು ಹಾಜರಾಗಿ, ರಸ್ತೆ ಗುಂಡಿ ಮುಚ್ಚುವ ಕಾರ್ಯ ಕೈಗೊಂಡು ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಹೈಕೋರ್ಟ್ ಗೆ ಪಾಲಿಕೆಗೆ ನಿರ್ದೇಶಿಸಿದೆ. ಅದರಂತೆ ಆದೇಶದ ಅನುಪಾಲನಾ ವರದಿ ಸಿದ್ಧವಿದೆ. ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸ್ವಲ್ಪ ಕಾಲಾವಕಾಶ ಬೇಕಿದೆ ಎಂದು ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯ ಮತದಾರ ಪಟ್ಟಿ ಪರಿಷ್ಕರಣೆ ಆರಂಭ
ಅರ್ಜಿದಾರ ಪರ ವಕೀಲರು, ಬಿಬಿಎಂಪಿ ಸಲ್ಲಿಸುವ ಅನುಪಾಲನಾ ವರದಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ, ಆಗಸ್ಟ್ 3ರೊಳಗೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಆಗಸ್ಟ್ 11ಕ್ಕೆ ಮುಂದೂಡಿತು.
