ಗುತ್ತಿಗೆದಾರರು, ನಿವೃತ್ತ ನೌಕರರರು, ಪಾಲಿಕೆ ಮಾಜಿ ಸದಸ್ಯರಿಂದ ಬಿಬಿಎಂಪಿ ಹೆಸರು ದುರ್ಬಳಕೆ ಹಿನ್ನೆಲೆ ಖಾಸಗಿ ವಾಹನಗಳಲ್ಲಿ ‘ಬಿಬಿಎಂಪಿ’ ಸ್ಟೀಕರ್‌ ಬಳಕೆಗೆ ಪಾಲಿಕೆ ನಿಷೇಧ. 

ಬೆಂಗಳೂರು (ಜು.24): ನಗರದಲ್ಲಿ ಖಾಸಗಿ ವ್ಯಕ್ತಿಗಳು, ಗುತ್ತಿಗೆದಾರರು, ನಿವೃತ್ತ ನೌಕರರು, ಪಾಲಿಕೆಯ ಮಾಜಿ ಸದಸ್ಯರು ತಮ್ಮ ವಾಹನಗಳಿಗೆ ‘ಬಿಬಿಎಂಪಿ’ ಸ್ಟಿಕ್ಕರ್‌ ಅಂಟಿಸಿಕೊಂಡು ದುರುಪಯೋಗ ಮಾಡಿಕೊಳ್ಳುತ್ತಿರುವ ಪ್ರಕರಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳ ಮೇಲೆ ಬಿಬಿಎಂಪಿ ಹೆಸರಿನ ಸ್ಟಿಕ್ಕರ್‌ ಅಂಟಿಸುವುದನ್ನು ನಿಷೇಧಿಸಿ ಪಾಲಿಕೆ ಆದೇಶಿಸಿದೆ. ಬಿಬಿಎಂಪಿ ಅಧಿಕಾರಿಗಳು, ನೌಕರರು ಮತ್ತು ಸಿಬ್ಬಂದಿ ತಮ್ಮ ವಾಹನಗಳ ಮೇಲೆ ಬಿಬಿಎಂಪಿ ಎಂದು ಸ್ಟಿಕ್ಕರ್‌ ಅಂಟಿಸಿಕೊಂಡಿರುತ್ತಾರೆ. ಕೆಲವು ತುರ್ತು ಕಾರ್ಯಗಳನ್ನು ಕೈಗೊಳ್ಳಲು ಮತ್ತು ಮೂಲ ಸೌಕರ್ಯಗಳನ್ನು ಒದಗಿಸಲು ಇದರಿಂದ ಅನುಕೂಲ ಆಗಲಿದೆ. ಜತೆಗೆ, ಸಂಚಾರ ಪೊಲೀಸರು ಕೂಡ ಬಿಬಿಎಂಪಿ ಸ್ಟಿಕ್ಕರ್‌ ಇರುವ ವಾಹನಗಳನ್ನು ಕಂಡಲ್ಲಿ ಸಾರ್ವಜನಿಕ ಸೇವೆಗೆ ಹೋಗುವುದಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಆದರೆ, ಇದನ್ನೇ ದುರುಪಯೋಗ ಮಾಡಿಕೊಳ್ಳುವ ಅನೇಕ ಖಾಸಗಿ ವ್ಯಕ್ತಿಗಳು ತಮ್ಮ ವಾಹನಗಳಾದ ಬೈಕ್‌, ಕಾರು, ವ್ಯಾನ್‌, ಟಿಪ್ಪರ್‌ ಲಾರಿಗಳು, ಗೂಡ್‌್ಸ ಆಟೋಗಳ ಮೇಲೆ ಪಾಲಿಕೆಯ ಸ್ಟಿಕ್ಕರ್‌ಗಳನ್ನು ಅಂಟಿಸಿಕೊಂಡು ತಿರುಗಾಡುತ್ತಿರುವುದು ಹೆಚ್ಚು ಕಂಡು ಬಂದಿದೆ.

ಪಾಲಿಕೆಯ ನಿವೃತ್ತ ನೌಕರರು, ಹಾಲಿ ನೌಕರರ ಸಂಬಂಧಿಕರು ಹಾಗೂ ಗುತ್ತಿಗೆದಾರರು ಕೂಡ ಇದೇ ಚಾಳಿಯನ್ನು ಮುಂದುವರೆಸಿದ್ದಾರೆ. ಈ ರೀತಿ ಸ್ಟಿಕ್ಕರ್‌ ಅಂಟಿಸಿಕೊಂಡವರು ನಗರದಲ್ಲಿ ಸಂಚಾರ ಉಲ್ಲಂಘಿಸಿದರೆ ಅಥವಾ ಅಪಘಾತ ಮಾಡಿದಲ್ಲಿ ಬಿಬಿಎಂಪಿಗೆ ಕೆಟ್ಟಹೆಸರು ಬರುತ್ತಿದೆ. ಹೀಗಾಗಿ, ಅನಧಿಕೃತವಾಗಿ ಬಿಬಿಎಂಪಿ ಸ್ಟಿಕ್ಕರ್‌ ಬಳಕೆ ನಿಷೇಧಿಸಿ ಆದೇಶಿಸಲಾಗಿದೆ. ಜತೆಗೆ ಬಿಬಿಎಂಪಿಯ ಬಹುತೇಕ ಮಾಜಿ ಸದಸ್ಯರು ತಮ್ಮ ವಾಹನಗಳ ಮೇಲೆ ಬಿಬಿಎಂಪಿ ಸದಸ್ಯರು ಎಂದು ಇಲ್ಲವೇ ನಿಕಟಪೂರ್ವ ಬಿಬಿಎಂಪಿ ಸದಸ್ಯರು ಎಂದು ಸ್ಟಿಕ್ಕರ್‌ ಅಂಟಿಸಿಕೊಂಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯ ಮತದಾರ ಪಟ್ಟಿ ಪರಿಷ್ಕರಣೆ ಆರಂಭ

ಗುತ್ತಿಗೆ ವಾಹನ ಅವಘಡ, ಬಿಬಿಎಂಪಿ ಮಾನ ಹರಾಜು: ಇತ್ತೀಚೆಗೆ ಪಾಲಿಕೆಯ ಗುತ್ತಿಗೆದಾರರೊಬ್ಬರ ಟಿಪ್ಪರ್‌ ಲಾರಿ ನಾಗರಬಾವಿ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದ ದಂಪತಿಗೆ ಢಿಕ್ಕಿಯಾದ ಪರಿಣಾಮ ಇಬ್ಬರೂ ಸಾವನ್ನಪ್ಪಿದ್ದರು. ಆದರೆ, ಲಾರಿಯ ಮೇಲೆ ಬಿಬಿಎಂಪಿ ಸ್ಟಿಕ್ಕರ್‌ ಎಂದು ಅಂಟಿಸಿದ್ದರಿಂದ ಎಲ್ಲ ಸುದ್ದಿ ಮಾಧ್ಯಮಗಳು ಹಾಗೂ ಪತ್ರಿಕೆಗಳಲ್ಲಿ ಪಾಲಿಕೆ ಲಾರಿ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ವರದಿ ಪ್ರಕಟಿಸಲಾಯಿತು. ಆದರೆ, ಈ ವಾಹನ ಪಾಲಿಕೆಯದ್ದಲ್ಲ ಎಂದು ಹಿರಿಯ ಅಧಿಕಾರಿ ಸ್ಪಷ್ಟೀಕರಣ ನೀಡುವ ವೇಳೆಗೆ ಸಾರ್ವಜನಿಕರ ಮುಂದೆ ಪಾಲಿಕೆ ಮಾನ ಹರಾಜಾಗಿತ್ತು.

ಬಿಬಿಎಂಪಿ ಸ್ಟಿಕ್ಕರ್‌ಗಳನ್ನು ಅನೇಕರು ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಪಾಲಿಕೆ ಕೆಲಸ ಕಾರ್ಯದ ನೆಪದಲ್ಲಿ ಖಾಸಗಿ ವ್ಯಕ್ತಿಗಳು ಪಾಲಿಕೆ ಹೆಸರು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. 5 ವಾಹನಗಳ ಬಗ್ಗೆ ಖಚಿತ ಮಾಹಿತಿ ಇದ್ದು, ಪೊಲೀಸರಿಗೆ ದೂರು ನೀಡಿ ಕಾನೂನು ಕ್ರಮಕ್ಕೆ ಸೂಚಿಸಲಾಗಿದೆ.

-ಡಾ.ಹರೀಶ್‌ ಕುಮಾರ್‌, ಬಿಬಿಎಂಪಿ ವಿಶೇಷ ಆಯುಕ್ತ.

ಸಿಲ್ಕ್‌ಬೋರ್ಡ್ ಸರ್ವೀಸ್ ರಸ್ತೆಯಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ: ಬಿಬಿಎಂಪಿ ಮುಖ್ಯ ಆಯುಕ್ತ

ನಿಷೇಧಿತ ಪ್ಲಾಸ್ಟಿಕ್‌ ಬಳಕೆ, 2 ಕಾರ್ಖಾನೆಗಳಿಗೆ ದಂಡ: ಬಿಬಿಎಂಪಿ ಅಧಿಕಾರಿಗಳು ಶುಕ್ರವಾರ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಎರಡು ಪ್ಲಾಸ್ಟಿಕ್‌ ಕಾರ್ಖಾನೆಗಳಿಗೆ ಐದು ಸಾವಿರ ರು ದಂಡ ವಿಧಿಸಲಾಗಿದೆ.

ಕೆಎಸ್‌ಪಿಸಿಬಿ ಹಾಗೂ ಬಿಬಿಎಂಪಿ ದಾಸರಹಳ್ಳಿ ವಲಯದ ಅಧಿಕಾರಿಗಳು ಶುಕ್ರವಾರ ನಿಷೇಧಿತ ಪ್ಲಾಸ್ಟಿಕ್‌ ತಯಾರಿಕಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ನಿಷೇಧಿತ ಪ್ಲಾಸ್ಟಿಕ್‌ ತಯಾರಿಕೆ ಕಂಡು ಬಂದ ಹಿನ್ನೆಲೆಯಲ್ಲಿ 5 ಸಾವಿರ ರು. ದಂಡ ವಿಧಿಸಿದರು. ಜತೆಗೆ, 810 ಕೆ.ಜಿ ಪ್ಲಾಸ್ಟಿಕ್‌ ವಶಕ್ಕೆ ಪಡೆಯಲಾಗಿದೆ. ಜತೆಗೆ, ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ತಯಾರಿಸದಂತೆ ಕಾರ್ಖಾನೆ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ. ವಶಕ್ಕೆ ಪಡೆದ ನಿಷೇಧಿತ ಪ್ಲಾಸ್ಟಿಕ್‌ ಅನ್ನು ಚೂರು ಚೂರು ಮಾಡಿ ಹರಾಜು ಮಾಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.