ಬೆಂಗಳೂರು(ಸೆ.30): ಕೊರೋನಾ ಸೋಂಕು ನಿಯಂತ್ರಣ ಸಂಬಂಧ ಸ್ಯಾನಿಟೈಸರ್‌, ಪಿಪಿಇ ಕಿಟ್‌ಗಳ ಖರೀದಿಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಖರೀದಿ ಸಂಬಂಧ ವಿವರವಾದ ಮಾಹಿತಿ ನೀಡುವಂತೆ ಬಿಬಿಎಂಪಿ ವಿಶೇಷ ಆಯುಕ್ತ(ಆಡಳಿತ), ಪಶ್ಚಿಮ ವಲಯದ ಜಂಟಿ ಆಯುಕ್ತರು ಮತ್ತು ಪಶ್ಚಿಮ ವಲಯದ ಆರೋಗ್ಯಾಧಿಕಾರಿಗೆ ಸೂಚಿಸಿದ್ದಾರೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಜುಲೈ 7ರಂದು ನೀಡಲಾದ ದೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೋನಾ ಸೋಂಕು ನಿಯಂತ್ರಣ ಸಂಬಂಧ ಪಾಲಿಕೆ ಆರೋಗ್ಯಾಧಿಕಾರಿಗಳು ಖರೀದಿಸಿರುವ ಸ್ಯಾನಿಟೈಸರ್‌, ಮಾಸ್ಕ್‌, ಪಿಇಇ ಕಿಟ್‌ಗಳಿಗೆ ಐದು ಪಟ್ಟು ದುಬಾರಿ ಹಣ ಪಾವತಿಸಲಾಗಿದೆ. ಇದರಲ್ಲಿ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿರುವುದು ಕಂಡು ಬಂದಿದೆ. ವೈದ್ಯಾಧಿಕಾರಿ ಡಾ. ಯೋಗೇಶ್‌ ಅವರು 250 ಮೌಲ್ಯದ 500 ಮಿ.ಲೀ. ಸ್ಯಾನಿಟೈಜರ್‌ಗೆ 710 ಪಾವತಿಸಿರುವ ಬಗ್ಗೆ ದಾಖಲೆಗಳಿವೆ. ಇದರಿಂದ ಪಾಲಿಕೆ ಆರ್ಥಿಕ ನಷ್ಟ ಉಂಟಾಗಿದೆ. ದುಬಾರಿ ಹಣ ಪಾವತಿಸಿ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಖರೀದಿಸಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣರಾಗಿದ್ದಾರೆ. ಹೀಗಾಗಿ ವೈದ್ಯಾಧಿಕಾರಿ ಡಾ. ಯೋಗೇಶ್‌ ಹಾಗೂ ಇತರೆ ಪಾಲಿಕೆ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸುವಂತೆ ದೂರಿನಲ್ಲಿ ಕೋರಿತ್ತು.

'ಕೊರೋನಾ ಪರೀಕ್ಷೆ ನಿರಾಕರಿಸಿದರೆ ಕೇಸ್‌ ಹಾಕ್ತೀವಿ'

ಈ ಹಿನ್ನೆಲೆಯಲ್ಲಿ ಜುಲೈ 23 ಮತ್ತು ಆಗಸ್ಟ್‌ 8ರಂದು ಈ ಖರೀದಿ ಸಂಬಂಧ ಮಾಹಿತಿ ನೀಡುವಂತೆ ಸೂಚಿಸಿದ್ದರೂ ಈವರೆಗೂ ಮಾಹಿತಿ ನೀಡಿಲ್ಲ. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ನಿಗದಿತ ಸಮಯದೊಳಗೆ ಆದ್ಯತೆಯ ಮೇಲೆ ಪರಿಗಣಿಸಿ ಆಡಳಿತ ಶಾಖೆಗೆ ಮಾಹಿತಿ ನೀಡುವಂತೆ ಖಡಕ್‌ ಸೂಚನೆ ನೀಡಿದ್ದಾರೆ.