ಬೆಂಗಳೂರು(ಸೆ.30): ಕೊರೋನಾ ಸೋಂಕಿತರೊಂದಿಗೆ ಸಂಪರ್ಕಿತರು, ಸೋಂಕಿನ ಲಕ್ಷಣ ಹೊಂದಿರುವವರು ಸೋಂಕು ಪರೀಕ್ಷೆ ಮಾಡಿಸಿಕೊಳ್ಳಲು ನಿರಾಕರಿಸಿದರೆ ಅಂತವರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆಯಡಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಸೋಂಕಿತರೊಂದಿಗೆ ಪ್ರಾಥಮಿಕ ಮತ್ತು ಪರೋಕ್ಷ ಸಂಪರ್ಕಿತರು, ಸೋಂಕಿತ ಲಕ್ಷಣ ಉಳ್ಳವರು ಹಾಗೂ ಕೆಮ್ಮು, ಶೀತ, ಜ್ವರ ಹಾಗೂ ಉಸಿರಾಟದ ಸಮಸ್ಯೆ ಇರುವವರು ಕಡ್ಡಾಯವಾಗಿ ಕೊರೋನಾ ಸೋಂಕು ಪರೀಕ್ಷೆಗೆ ಒಳಗಾಗಬೇಕು. ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಪರೀಕ್ಷೆಗೆ ಒಳಗಾಗದವರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆ ಅಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಈ ರೀತಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳುವ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಈ ಕುರಿತು ಆದೇಶ ಹೊರಡಿಸಲಾಗುತ್ತದೆ ಎಂದು ತಿಳಿಸಿದರು.

ದೇಶದಲ್ಲಿ ಕೊರೋನಾ ಪೀಕ್‌ ಮುಕ್ತಾಯ?, 9 ದಿನಗಳಿಂದ ಕೇಸ್‌ಗಳು ಭಾರಿ ಕುಸಿತ!

ದಿನಕ್ಕೆ 40 ಸಾವಿರ ಪರೀಕ್ಷೆಗೆ ಸಿದ್ಧತೆ:

ನಗರದಲ್ಲಿ ಕೊರೋನಾ ಸೋಂಕು ಪರೀಕ್ಷೆ ಸಂಖ್ಯೆ ದ್ವಿಗುಣಗೊಳಿಸಿ, ಸೋಂಕು ಪತ್ತೆ ಪ್ರಮಾಣವನ್ನು ಶೇ.5ಕ್ಕಿಂತ ಕಡಿಮೆ ಮಾಡಿ ಹಾಗೂ ಸಾವಿನ ಪ್ರಮಾಣ ಶೇ.1ಕ್ಕಿಂತ ಕಡಿಮೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ನಗರದಲ್ಲಿ ಕೊರೋನಾ ಸೋಂಕು ಪತ್ತೆ ಪ್ರಮಾಣವನ್ನು 27 ಸಾವಿರದಿಂದ 40 ಸಾವಿರಕ್ಕೆ ಹೆಚ್ಚಳ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಅದಕ್ಕೆ ಬೇಕಾದ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, 148 ಮಂದಿ ಸೋಂಕು ಮಾದರಿ ಸಂಗ್ರಹಿಸುವ ಸಿಬ್ಬಂದಿ ನೇಮಿಸಿಕೊಳ್ಳಲಾಗಿದೆ. ಬುಧವಾರದಿಂದ ಈ ಸಿಬ್ಬಂದಿ ವಿವಿಧ ವಲಯಗಳಲ್ಲಿ ಕೆಲಸ ಆರಂಭಿಸಲಿದ್ದಾರೆ ಎಂದು ತಿಳಿಸಿದರು.

ಪಾಲಿಕೆಯಿಂದ 5 ಲಕ್ಷ ಕಿಟ್‌ ಖರೀದಿ:

ಆರ್‌ಟಿಪಿಸಿಆರ್‌ ಹಾಗೂ ರಾರ‍ಯಪಿಡ್‌ ಆ್ಯಂಟಿಜೆನ್‌ ಕಿಟ್‌ಗಳ ಕೊರತೆ ಆಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಬಿಬಿಎಂಪಿಯಿಂದಲೇ ಐದು ಲಕ್ಷ ಕಿಟ್‌ಗಳ ಖರೀದಿಗೆ ಟೆಂಡರ್‌ ಕರೆಯಲಾಗಿದ್ದು, ಇದರ ವೆಚ್ಚವನ್ನು ಆರೋಗ್ಯ ಇಲಾಖೆ ವಹಿಸಲಿದೆ. ಗಾರ್ಮೆಂಟ್ಸ್‌ ಕಾರ್ಖಾನೆ, ವಸತಿ ಸಮುಚ್ಛಯಗಳಿಗೂ ಕೊರೋನಾ ಸೋಂಕು ಪರೀಕ್ಷೆಗೆ ಸಹಕಾರ ನೀಡುವಂತೆ ಕೋರಲಾಗಿದೆ. ಇತ್ತೀಚಿನ ದಿನಗಳಲ್ಲಿ 26ರಿಂದ 28 ಸಾವಿರ ಜನರನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

‘ಸೋಂಕಿತರ ಚಿಕಿತ್ಸೆಗೆ ಹಾಸಿಗೆ ಸಮಸ್ಯೆ ಇಲ್ಲ’

ಕೊರೋನಾ ಸೋಂಕಿತರ ಚಿಕಿತ್ಸೆಗೆ ನಗರದಲ್ಲಿ ಹಾಸಿಗೆ ಸಮಸ್ಯೆ ಇಲ್ಲ. ನಗರದ ವಿವಿಧ ಆಸ್ಪತ್ರೆಗಳಲ್ಲಿ ಹೆಚ್ಚವರಿಯಾಗಿ 165 ಐಸಿಯು ಮತ್ತು ವೆಂಟಿಲೇಟರ್‌ ಇರುವ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಸದ್ಯದ ಮಾಹಿತಿ ಪ್ರಕಾರ ನಗರದ ಖಾಸಗಿ ಮತ್ತು ಸರ್ಕಾರಿ ಹಾಗೂ ಮೆಡಿಕಲ್‌ ಕಾಲೇಜಿನಲ್ಲಿ ಒಟ್ಟು 2711 ಸಾಮಾನ್ಯ ಹಾಸಿಗೆ ಖಾಲಿಯಿವೆ. 857 ಎಚ್‌ಡಿಯು ಸೌಲಭ್ಯ (ಹೈ ಡಿಪೆಂಡೆನ್ಸಿ ಯೂನಿಟ್‌) ಇರುವ ಹಾಸಿಗೆ ಖಾಲಿ ಇವೆ. 301 ಐಸಿಯು ಹಾಸಿಗೆ ಹಾಗೂ 113 ಐಸಿಯು ಹಾಗೂ ವೆಂಟಿಲೇಟಲ್‌ ಸೌಲಭ್ಯ ಇರುವ ಹಾಸಿಗೆ ಸೇರಿದಂತೆ ಒಟ್ಟು 3,982 ಹಾಸಿಗೆ ಖಾಲಿ ಇವೆ ಎಂದು ಆಯುಕ್ತ ಮಂಜುನಾಥ ಪ್ರಸಾದ್‌ ಸ್ಪಷ್ಟಪಡಿಸಿದ್ದಾರೆ.