ದಾವಣಗೆರೆ ವಿವಿ ನೇಮಕಾತಿಯಲ್ಲಿ ಭ್ರಷ್ಟಾಚಾರ: ಪ್ರತಿಭಟನೆ
ದಾವಣಗೆರೆ ವಿಶ್ವ ವಿದ್ಯಾನಿಲಯ ಬೋಧಕ ವೃಂದದ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಯಲ್ಲಿನ ಭ್ರಷ್ಟಾಚಾರ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ, ಜಿಲ್ಲಾ ಘಟಕದಿಂದ ನಗರದಲ್ಲಿ ಗುರುವಾರ ಪ್ರತಿಭಟಿಸಲಾಯಿತು.
ದಾವಣಗೆರೆ(ಜು.12): ದಾವಣಗೆರೆ ವಿಶ್ವ ವಿದ್ಯಾನಿಲಯ ಬೋಧಕ ವೃಂದದ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಯಲ್ಲಿನ ಭ್ರಷ್ಟಾಚಾರ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ, ಜಿಲ್ಲಾ ಘಟಕದಿಂದ ನಗರದಲ್ಲಿ ಗುರುವಾರ ಪ್ರತಿಭಟಿಸಲಾಯಿತು.
ನಗರದ ಜಯದೇವ ವೃತ್ತದಿಂದ ಹಳೆ ಪಿ.ಬಿ.ರಸ್ತೆ ಮಾರ್ಗವಾಗಿ ಉಪ ವಿಭಾಗಾಧಿಕಾರಿ ಕಚೇರಿವರೆಗೆ ವಿಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಮುಖಂಡರು, ಕಾರ್ಯಕರ್ತರು ಎಸಿ ಕಚೇರಿಗೆ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ಅವರು ಮಾತನಾಡಿ, ಯುಜಿಸಿ ನಿಯಮಗಳು ಹಾಗೂ ಸರ್ಕಾರದ ನಿಯಮ ಗಾಳಿಗೆ ತೂರಿ, ಕುಲಪತಿ, ಕುಲ ಸಚಿವರು, ವಿವಿಧ ವಿಭಾಗ ಮುಖ್ಯಸ್ಥರು, ಪ್ರಾಧ್ಯಾಪಕರೂ ಸೇರಿ ಅನೇಕರು ಭ್ರಷ್ಟಾಚಾರ ನಡೆಸಿದ್ದಾರೆ. ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಒಂದೊಂದು ಹುದ್ದೆಗೂ 25 ರಿಂದ 30 ಲಕ್ಷ ರು.ಗಳನ್ನು ವಸೂಲಿ ಮಾಡಲಾಗಿದೆ. 371 ಜೆ ಮೀಸಲು ಹುದ್ದೆ ಹಾಗೂ ಪತ್ರಿಕೋದ್ಯಮ, ಎಂಬಿಎ, ಭೌತಶಾಸ್ತ್ರ, ಎಂಇಡಿ ವಿಭಾಗಗಳಿಗೆ ಹುದ್ದೆ ಭರ್ತಿ ಮಾಡಲಾಗಿದೆ. ಇಲ್ಲೂ ಯುಜಿಸಿ, ಸರ್ಕಾರದ ನಿಯಮಕ್ಕೆ ತಿಲಾಂಜಲಿ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಜೂ.19ರಿಂದ 22ರ ವರೆಗೆ ಸಮಾಜಶಾಸ್ತ್ರ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ವಾಣಿಜ್ಯ ಶಾಸ್ತ್ರ ಸೇರಿದಂತೆ 6 ವಿಭಾಗಕ್ಕೆ ಸಂದರ್ಶನ ನಡೆಸಿ, ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ. ಜು.11, 12ರಂದು ಬಯೋ ಟೆಕ್ನಾಲಜಿ ಅರ್ಥಶಾಸ್ತ್ರ, ಇತಿಹಾಸ, ಕಂಪ್ಯೂಟರ್ ಸೈನ್ಸ್ ವಿಭಾಗಗಳ ಸಹಾಯಕ ಪ್ರಾಧ್ಯಾಪಕ ಹುದ್ದೆ, ಸಹ ಪ್ರಾಧ್ಯಾಪಕ ಹುದ್ದೆ ಭರ್ತಿಗೆ ಸಂದರ್ಶನ ಕರೆಯಲಾಗಿತ್ತು.
ಸಂಘಟನೆ ಮುಖಂಡರಾದ ಬಾಬುರಾವ್, ಅಮ್ಜದ್ ಅಲಿ, ಕೆ.ಎಚ್.ಮೆಹಬೂಬ್, ಎಂ.ರವಿ, ಅಜಯ್, ರಜ್ವಿ, ಸಿಕಂದರ್, ಮಂಜುನಾಥ ಗಂಗೂರ್, ಬಿ.ದಯಾನಂದ, ಸಂತೋಷ ದೊಡ್ಮನಿ, ಸಿರಾಜ್ ಅಹಮ್ಮದ್, ಸೋಮಣ್ಣ, ಬಿಲಾಲ್, ವೀರೇಶ, ಅಜೀಮ್, ಷಫೀ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಲಂಚಬಾಕರಿಗೆ ಬಿಸಿ ಮುಟ್ಟಿಸಿದ ಮಂಡ್ಯ ರೈತರು... ಎಲ್ಲರೂ ಹೀಗೆ ಮಾಡ್ಬೇಕ್!