ಯಾದಗಿರಿ(ಏ.11): ಕಾಮಾಲೆ ಅಥವಾ ಹೃದಯಾಘಾತ ಸೇರಿದಂತೆ ಅನ್ಯತರಹದ ಕಾರಣಗಳಿಂದಾಗುವ ಸಾವುಗಳಿಗೂ ಇದೀಗ ಕೊರೋನಾ ಭೀತಿ ಮೂಡಿದೆ. ಸಹಜ ಸಾವಿನಿಂದ ವ್ಯಕ್ತಿ ಸತ್ತರೂ, ಕೊರೋನಾ ಶಂಕೆಯಿಂದಲೇ ನೋಡುವಂತಾಗಿದೆ ಎಂಬ ಮಾತುಗಳು ಮೂಡಿಬಂದಿವೆ.
"

ಕಾಮಾಲೆಯಿಂದ ಬಳಲುತ್ತಿದ್ದ  ಜಿಲ್ಲೆಯ ಶಹಾಪುರದ ಕೊಂಗಂಡಿ ಬಾಲಕಿಯೊಬ್ಬಳು ಕೊರೋನಾದಿಂದ ತೀರಿಕೊಂಡಿಲ್ಲ ಎಂದು ದೃಢಪಟ್ಟ ನಂತರ, ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ಜಿಲ್ಲೆಯ ಜನರು ಇದೀಗ ಮತ್ತೊಮ್ಮೆ ಬೆಚ್ಚಿಬಿದ್ದಿದ್ದಾರೆ. ಗುರುವಾರ ಸಂಜೆ, ಶಹಾಪುರ ತಾಲೂಕಿನ ಗ್ರಾಮವೊಂದರ 20 ವರ್ಷದ ಯುವಕನೊಬ್ಬನ ಸಾವು ಪ್ರಕರಣ ಇದೀಗ ಜನರಲ್ಲಿ ಮತ್ತೊಮ್ಮೆ ಆತಂಕ ಮೂಡಿಸಿದೆ.

ಪ್ರಾಣವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ: ಆಶಾ ಕಾರ್ಯಕರ್ತೆಯರಿಗೆ ಹೂಮಳೆ ಸ್ವಾಗತ

ತೀವ್ರ ಎದೆನೋವೆಂದು ಹೇಳಿ, ಅಸ್ವಸ್ಥಗೊಂಡ ಆ ಯುವಕನನ್ನು ಸಂಬಂಧಿಕರು ಬೈಕಿನಲ್ಲಿ ಕುಳ್ಳಿರಿಸಿಕೊಂಡು ಶಹಾಪುರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಗೆ ತಲುಪಿದಾಗ ಆ ಯುವಕ ಮಾರ್ಗಮಧ್ಯೆ ತೀರಿಕೊಂಡಿದ್ದು ತಿಳಿದಿದೆ. ಯುವಕನ ಹಿನ್ನೆಲೆ ಕೇಳಿದಾಗ, ಆತನಿಗೆ ಉಬ್ಬಸ (ಅಸ್ತಮಾ) ಬರುತ್ತಿತ್ತೆಂದು ಕೆಲವರು ತಿಳಿಸಿದ್ದಾರೆ. ತಕ್ಷಣ, ಇದು ಕೊರೋನಾ ಸೋಂಕು ಇರಬಹುದೆಂದು ಶಂಕೆ ವ್ಯಕ್ತಪಡಿಸಿದ ವೈದ್ಯರು, ಆತನ ಮರಣೋತ್ತರ ಪರೀಕ್ಷೆ ನಡೆಸಿ, ರಕ್ತದ ಮಾದರಿ ಹಾಗೂ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದಾರೆ.

ಇತ್ತ, ಎದೆನೋವೆಂದು ಹೇಳಿ ಹೋದ ಮಗ ಮನೆಗೆ ಮರಳುತ್ತಾನೆಂದು ಕಾಯ್ದಿದ್ದ ತಂದೆ, ತಾಯಿ ಹಾಗೂ ಸಂಬಂಧಿಕರಿಗೆ ಆತನ ಸಾವಿನ ಸುದ್ದಿ ಬರಸಿಡಿಲಿನಂತೆ ಬಡಿದಿದೆ. ಅಷ್ಟೇ ಅಲ್ಲದೆ, ಶವವನ್ನೂ ಗ್ರಾಮಕ್ಕೂ ತರಲು ಆಗುವುದಿಲ್ಲ ಎಂಬ ಕಾರಣಕ್ಕಾಗಿ ಅಲ್ಲಿನ ಹೊರವಲಯದಲ್ಲಿ ಅಂಬ್ಯಲೆನ್ಸ್ ಮೂಲಕ ಕರೆತಂದು ಅಂತ್ಯಸಂಸ್ಕಾರ ಮಾಡಲಾಗುತ್ತಿದ್ದು, ಅಲ್ಲಿಯೇ ಬಂದು ದೂರದಿಂದಲೇ ಮಗನ ಮುಖ ನೋಡುವಂತೆ ಸೂಚಿಸಿದ್ದರೆನ್ನಲಾಗಿದೆ. ಏಕಾಏಕಿ ಮಗನ ಕಳೆದುಕೊಂಡ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಶಂಕಿತ ಅನ್ನುವ ಕಾರಣಕ್ಕೆ ಆತನ ಮೃತದೇಹವನ್ನು ವಿಶ್ವ ಆರೋಗ್ಯ ಸಂಸ್ಥೆಯ ನಿಯಮನುಸಾರ ಅಂತ್ಯಸಂಸ್ಕಾರ ಮಾಡಲಾಗಿದೆ. ಜೆಸಿಬಿ ಮೂಲಕ ತೆಗ್ಗು ತೋಡಿ, ನಂತರ ಟ್ರ್ಯಾಕ್ಟರ್ ಮೂಲಕ ಮಣ್ಣು ಹಾಕಿಸಿ ತೆಗ್ಗು ಮುಚ್ಚಿಸಲಾಗಿದೆ. ಒಂದು ವೇಳೆ ಸೋಂಕು ತಗುಲಿದ್ದರೆ ಮಣ್ಣು ಕೈಗೆ ಹತ್ತಬಹುದು ಎಂಬ ಕಾರಣಕ್ಕೆ ತಂದೆ, ತಾಯಿ ಸೇರಿದಂತೆ ಯಾರಿಂದಲೂ ಇಲ್ಲಿ ಮಣ್ಣು ಹಾಕಲು ಆಸ್ಪದ ನೀಡಲಾಗಿಲ್ಲ. ಈ ಪ್ರಕರಣ ಗ್ರಾಮದಲ್ಲಿ ಭಾರಿ ಆತಂಕ ಹಾಗೂ ಆಘಾತ ಮೂಡಿಸಿದೆ.