ಬೆಂಗಳೂರು[ಮಾ.19]: ರಾಜ್ಯದಲ್ಲಿ ಕೊರೋನಾ ವೈರಸ್‌ ಸೋಂಕು ತೀವ್ರಗತಿಯಲ್ಲಿ ಹರಡದಂತೆ ನಿಯಂತ್ರಿಸಲು ಹಗಲಿರುಳು ಶ್ರಮಿಸುತ್ತಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರ ಕಾರ್ಯ ವೈಖರಿಗೆ ಪ್ರತಿಪಕ್ಷದ ನಾಯಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ಬುಧವಾರ ವಿಧಾನಸಭೆಯಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಸಚಿವ ಡಾ.ಕೆ. ಸುಧಾಕರ್‌ ವಿಸ್ತೃತ ಮಾಹಿತಿ ನೀಡಿದರು. ಇದುವರೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳು ಹಾಗೂ ಮುಂದೆ ಅನುಸರಿಸಬೇಕಾದ ದಿಟ್ಟಹೆಜ್ಜೆಯ ಬಗ್ಗೆ ವಿಸ್ತೃತವಾಗಿ ವಿವರಿಸಿದರು.

ಕೊರೋನಾ ವೈರಸ್: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸುಧಾಕರ್‌ ಅವರ ಮಾತುಗಳನ್ನು ಆಲಿಸಿದ ನಂತರ ಪ್ರತಿಪಕ್ಷ ಕಾಂಗ್ರೆಸ್‌ನ ಸದಸ್ಯರಾದ ಆರ್‌.ವಿ. ದೇಶಪಾಂಡೆ, ಯು.ಟಿ. ಖಾದರ್‌, ಪ್ರಿಯಾಂಕ ಖರ್ಗೆ, ಡಾ.ಯತೀಂದ್ರ ಸಿದ್ದರಾಮಯ್ಯ, ಡಾ.ಅಜಯ್‌ಸಿಂಗ್‌ ಮತ್ತಿತರರು ಸರ್ಕಾರದ ಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಆರ್‌.ವಿ. ದೇಶಪಾಂಡೆ ಮಾತನಾಡಿ, ಈವರೆಗೆ ತೆಗೆದುಕೊಂಡಿರುವ ರಾಜ್ಯ ಸರ್ಕಾರದ ಕ್ರಮಗಳ ಬಗ್ಗೆ ಮೆಚ್ಚುಗೆ ಇದೆ. ಆದರೆ ಕೇಂದ್ರ ಸರ್ಕಾರವು ಎಸ್‌ಡಿಆರ್‌ಎಫ್‌ ನಿಧಿಯಿಂದ ಹಣ ಬಳಸಿಕೊಳ್ಳುವಂತೆ ಹೇಳಿದೆ. ಪ್ರಸ್ತುತ 15ನೇ ಹಣಕಾಸು ಆಯೋಗದ ಪ್ರಕಾರ 1,073 ಕೋಟಿ ರು.ಗಳಷ್ಟುಹಣ ಮಾತ್ರ ನಮಗೆ ಲಭ್ಯವಾಗುತ್ತದೆ. ಇದರಿಂದ ದಯವಿಟ್ಟು ಕೊರೋನಾ ಸೋಂಕು ನಿಯಂತ್ರಣಕ್ಕೆ ಹಣ ಬಳಕೆ ಮಾಡಿಕೊಳ್ಳಬೇಡಿ. ಮುಂದಿನ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಹೇಳಲು ಕಷ್ಟಎಂದರು.

ಯು.ಟಿ. ಖಾದರ್‌ ಮಾತನಾಡಿ, ಸರ್ಕಾರವು ಸೋಂಕು ನಿಯಂತ್ರಣಕ್ಕೆ ಬಹಳಷ್ಟುಶ್ರಮ ಪಡುತ್ತಿದೆ. ಎಲ್ಲಾ ಕಾರ್ಯಗಳೂ ಅಭಿನಂದನಾರ್ಹ. ಆದರೆ ಖಾಸಗಿ ಆಸ್ಪತ್ರೆಗಳ ಪ್ರಯೋಗಾಲಯಗಳಲ್ಲೂ ಕೊರೋನಾ ಸೋಂಕು ಪರೀಕ್ಷೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಪ್ರತಿಪಕ್ಷದ ಸದಸ್ಯರ ಅಭಿಪ್ರಾಯ ಹಾಗೂ ಸಲಹೆಗಳನ್ನು ಆಲಿಸಿದ ನಂತರ ಮಾತನಾಡಿದ ಸಚಿವ ಸುಧಾಕರ್‌, ವಿಪಕ್ಷದ ಎಲ್ಲ ಸದಸ್ಯರ ಸಲಹೆಗಳನ್ನು ಸ್ವೀಕರಿಸಿದ್ದೇವೆ. ನಿಮ್ಮ ಸಲಹೆಯಂತೆ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಕೊರೋನಾ ವೈರಸ್‌ ಪೀಡಿತರು ಹಾಗೂ ಶಂಕಿತರ ಚಿಕಿತ್ಸಾ ಕ್ರಮವನ್ನು ಪರಿಶೀಲಿಸಲು ಆಗಾಗ ಖುದ್ದಾಗಿ ಆಸ್ಪತ್ರೆಗಳಿಗೆ ತೆರಳುವ ಸಚಿವ ಸುಧಾಕರ್‌ ಅವರ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಸಚಿವರು ಖುದ್ದಾಗಿ ಆಸ್ಪತ್ರೆಗಳಿಗೆ ತೆರಳುವ ಅಗತ್ಯವಿಲ್ಲ. ಇದರಿಂದ ಸಚಿವರಿಗೇ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಅವರು ಹೊರಗಿದ್ದುಕೊಂಡೇ ಆಸ್ಪತ್ರೆಗಳ ಉಸ್ತುವಾರಿ ನೋಡಿಕೊಳ್ಳಬಹುದು. ಅಪಾಯ ತಂದುಕೊಳ್ಳುವುದು ಬೇಡ ಎಂಬ ಸಲಹೆ ರೂಪದ ಅಭಿಪ್ರಾಯ ಕೇಳಿಬಂದಿದೆ.