Asianet Suvarna News Asianet Suvarna News

ಯಾದಗಿರಿ: ಕೋವಿಡ್‌ ಟೆಸ್ಟ್ ಮಾಡಲು ಬಂದಾಗ ಊರಲ್ಲೇ ಇರ್‍ಲಿಲ್ಲ, ಆದ್ರೂ ಪಾಸಿಟಿವ್ !

ಕೋವಿಡ್ ಟೆಸ್ಟ್ ಗೊಂದಲ| ಸ್ವ್ಯಾಬ್ ಟೆಸ್ಟ್ ಕೊಡುವುದಕ್ಕೂ ಮುನ್ನ ರಿಪೋರ್ಟರ್ಸ್‌ ರಿಪೋರ್ಟ್ ಪಾಸಿಟಿವ್| ಪಾಸಿಟಿವ್ ರಿಪೋರ್ಟ್‌ನಲ್ಲಿ ಗಂಡು ಹೆಣ್ಣಾದ ಗೊಂದಲ|
 

Coronavirus Report Confusion in Yadgir District
Author
Bengaluru, First Published Jul 16, 2020, 3:04 PM IST

ಯಾದಗಿರಿ(ಜು.16): ಕೋವಿಡ್ ಟೆಸ್ಟ್‌ನ ಪ್ರಯೋಗಾಲಯ ವರದಿಯಲ್ಲಿನ ಕೆಲವೊಂದು ಪ್ರಕರಣಗಳಲ್ಲಿ ಉಂಟಾಗಿರುವ ಗೊಂದಲಗಳಿಂದಾಗಿ ಈಗ ಸಾರ್ವಜನಿಕರ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಶಹಾಪೂರ ತಾಲೂಕಿಜನ ಹುರಸಗುಂಡಗಿ ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ಪಾಸಿಟಿವ್ ಬಂದವರ ಕರೆದೊಯ್ಯಲು ಬಂದ ಅಧಿಕಾರಿಗಳಿಗೆ ದಿಗ್ಭ್ರಮೆ ಮೂಡಿಸಿತ್ತು. ಕಾರಣ, ಪಾಸಿಟಿವ್ ಇರುವವರ ಪಟ್ಟಿಯಲ್ಲಿದ್ದ ಮಹಿಳೆಯರಿಬ್ಬರು ಗಂಟಲು ದ್ರವದ ಮಾದರಿಯನ್ನೇ ಕೊಟ್ಟಿರಲಿಲ್ಲ. ಅಷ್ಟೇ ಏಕೆ, ಆರೋಗ್ಯ ಇಲಾಖೆಯವರು ಗಂಟಲು ದ್ರವ ಮಾದರಿ ಸಂಗ್ರಹಕ್ಕೆಂದು ಬಂದಾಗ ಈ ಮಹಿಳೆಯರಿಬ್ಬರು ಊರಲ್ಲೇ ಇರಲಿಲ್ಲ. ಆದರೂ, ಸೋಂಕಿತರ ಪಟ್ಟಿಯಲ್ಲಿ ಇವರ ಹೆಸರುಗಳು ಸೇರಿದ್ದು ಜನಾಕ್ರೋಶಕ್ಕೆ ಕಾರಣವಾಗಿತ್ತು.

ಮತ್ತೊಂದು ಜಿಲ್ಲೆ ಲಾಕ್‌ಡೌನ್ ಘೋಷಣೆ: ಜನರು ಅನಗತ್ಯವಾಗಿ ಹೊರಬಂದ್ರೆ ಕ್ರಮ

60 ವರ್ಷದ ವೃದ್ಧೆ ಅಂದು ಗ್ರಾಮದಲ್ಲೇ ಇರಲಿಲ್ಲ, ಇನ್ನೊಬ್ಬ 36 ವರ್ಷದ ಮಹಿಳೆ ಪತಿಯೊಡನೆ ಬೆಂಗಳೂರಿನಲ್ಲಿದ್ದಳು. ಹೀಗಿರುವಾಗ, ಇವರ ಟೆಸ್ಟ್ ಪಾಸಿಟಿವ್ ಬರಲು ಹೇಗೆ ಸಾಧ್ಯ ಎಂದು ಅನೇಕರು ಅಧಿಕಾರಿಗಳ ವಿರುದ್ಧ ಹರಿಹಾಯ್ದರಲ್ಲದೆ, ಟೆಸ್ಟ್ ರಿಪೋರ್ಟ್ ಗೊಂದಲದಿಂದಾಗಿ ಉಳಿದವರೂ ಸಹ ಆಸ್ಪತ್ರೆಗೆ ಬರಲು ನಿರಾಕರಿಸಿದ್ದರು. ಕೊನೆಗೆ ಪೊಲೀಸ್ ಅಽಕಾರಿಯೊಬ್ಬರು ಗ್ರಾಮಸ್ಥರನ್ನು ಸಮಾಧಾನ ಪಡಿಸಿದರು ಎನ್ನಲಾಗಿದೆ. ಇವರ ಹೆಸರು ಕಡಿತಗೊಳಿಸಿದ್ದರೂ ಅದ್ಹೇಗೆ ಪಾಸಿಟಿವ್ ಬಂತು ಅನ್ನೋದೂ ವೈದ್ಯರಲ್ಲಿ ಅಚ್ಚರಿಗೆ ಕಾರಣವಾಗಿದೆಯಂತೆ.

ಹಾಗೆಯೇ, ಜಿಲ್ಲೆಯಲ್ಲಿ ಮೂವರು ಪತ್ರಕರ್ತರಿಗೆ ಪಾಸಿಟಿವ್ ಬಂದಿದ್ದರಿಂದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜುಲೈ 7 ರಂದು ಇಲ್ಲಿನ ಪತ್ರಕರ್ತರಿಗೆ ಟೆಸ್ಟ್ ಮಾಡಲಾಗಿತ್ತು. ಆದರೆ, ಪಾಸಿಟಿವ್ ಪಟ್ಟಿಯಲ್ಲಿ ಇವರ ಗಂಟಲು ದ್ರವ ಪರೀಕ್ಷೆ ಜುಲೈ 3 ರಂದು ಸಂಗ್ರಹಿಸಲಾಗಿತ್ತು ಎಂದು ನಮೂದಾಗಿದೆ. ವಿಚಿತ್ರ ಎಂದರೆ, ಜುಲೈ 11 ರಂದು ಯಾದಗಿರಿಯ ರಾಜ್ಯ ಮಟ್ಟದ ಪತ್ರಿಕೆಯೊಂದರ ಹಿರಿಯ ವರದಿಗಾರ, ಸುದ್ದಿ ವಾಹಿನಿಯೊಂದರ ಹಿರಿಯ ವರದಿಗಾರ ಹಾಗೂ ಕ್ಯಾಮರಾಮನ್‌ಗೆ ಪಾಸಿಟಿವ್ ಬಂದಿತ್ತು. ದಿನಾಂಕ ನಮೂದು ವೇಳೆ ಗೊಂದಲ ಆಗಿರುಬಹುದು ಎನ್ನಲಾಗಿದೆ.

ಇನ್ನು, ಇದೇ ಗ್ರಾಮದ ಪುರುಷರೊಬ್ಬರಿಗೆ ಪಾಸಿಟಿವ್ ಬಂದಿತ್ತು. ಆದರೆ ಅವರ ಹೆಸರು ಮಹಿಳೆಯ ಹೆಸರಾಗಿತ್ತಲ್ಲದೆ, ‘ಫೀಮೇಲ್’ ಎಂದು ಪಾಸಿಟಿವ್ ಪಟ್ಟಿಯಲ್ಲಿ ಬಂದಿದ್ದು ಅಚ್ಚರಿ ಮೂಡಿಸಿತ್ತು. ಹೆಸರು ಹುಡುಕುತ್ತ ಹೊರಟಾಗ, ಅವರು ಮಹಿಳೆ ಅಲ್ಲ, ಪುರುಷ ಎಂದು ಗೊತ್ತಾಗಿ ತಿದ್ದುಪಡಿ ಮಾಡಲಾಯಿತಂತೆ.

ಯಾದಗಿರಿ ಜಿಲ್ಲಾಸ್ಪತ್ರೆ ವೈದ್ಯರಿಗೆ ಮುಂಜಾನೆ ಪಾಸಿಟಿವ್, ಸಂಜೆ ನೆಗೆಟಿವ್ ಸೇರಿದಂತೆ ಇಂತಹ ವಿಚಾರಗಳು ಜನಮಾನಸದಲ್ಲಿ ಭಾರಿ ಅನುಮಾನಕ್ಕೆ ಕಾರಣವಾಗಿದ್ದು, ಕೋವಿಡ್ ಟೆಸ್ಟ್ ಇಂತಹ ಪ್ರಮಾದಗಳ ಬಗ್ಗೆ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕಿದೆ ಅನ್ನೋದು ಸಾರ್ವಜನಿಕರ ಆಗ್ರಹವಾಗಿದೆ.

ಟೆಸ್ಟ್ ಮಾಡಲು ಬಂದಾಗ ನಮ್ಮ ಅಜ್ಜಿ ಊರಲ್ಲೇ ಇರಲಿಲ್ಲ. ಆದ್ರೂ, ಪಾಸಿಟಿವ್ ಬಂದಿದೆ ಎಂದು ಕರೆದುಕೊಂಡು ಹೋಗಲು ಬಂದಿದ್ದರು. ಇದನ್ನು ನಾವು ಅದ್ಹೇಗೆ ಎಂದು ಬೇಸರ ವ್ಯಕ್ತಪಡಿಸಿದಾಗ ಬಿಟ್ಟರು ಎನ್ನುತ್ತಾರೆ ಹುರಸಗುಂಡಗಿ ಗ್ರಾಮದ ಯುವತಿ.

ನನ್ನ ಹೆಸರನ್ನು ಮಹಿಳೆಯ ಹೆಸರಿನಲ್ಲಿ ಜೋಡಿಸಲಾಗಿತ್ತು. ಇಂತಹ ಗೊಂದಲ ನಮಗೆ ಅನುಮಾನಕ್ಕೆ ಕಾರಣವಾಗಿತ್ತು. ವಿಚಿತ್ರವೆನಿಸಿದೆ. ಟೆಸ್ಟ್ ಬಗ್ಗೆನೇ ಅನುಮಾನ ಹುಟ್ತಿದೆ ಎಂದು ಹುರಸಗುಂಡಗಿ ಗ್ರಾಮದವರು ಹೇಳಿದ್ದಾರೆ.
 

Follow Us:
Download App:
  • android
  • ios