ಯಾದಗಿರಿ, (ಜುಲೈ.14): ಮಹಾಮಾರಿ ಕೋವಿಡ್ ಆತಂಕ ಹೆಚ್ಚಾಗುತ್ತಿರುವುದರಿಂದ  ಯಾದಗಿರಿ ಜಿಲ್ಲಾಡಳಿತ ಕೊನೆಗೂ ಜುಲೈ 15ರ ರಾತ್ರಿ 8ರಿಂದ 22ರ ರಾತ್ರಿ 8 ಗಂಟೆಯ ವರೆಗೆ ಲಾಕ್‌ಡೌನ್ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ ಆದೇಶ ಹೊರಡಿಸಿದ್ದಾರೆ.

ಬ್ಯಾಂಕ್, ಅಂಚೆಕಚೇರಿ, ಬಿಎಸ್‌ಎನ್‌ಎಲ್ ಕಚೇರಿ ಕಾರ್ಯನಿರ್ವಹಣೆ, ಆಸ್ಪತ್ರೆ, ಔಷಧಿ, ಪಶು ಆಸ್ಪತ್ರೆ, ಇತ್ಯಾದಿ ತುರ್ತು ಸೇವೆಗಳಿಗೆ ಆದೇಶ ಅನ್ವಯವಾಗಲ್ಲ. ಅದೇ ರೀತಿ ಎಲ್ಲಾ ತರಹದ ಆಹಾರ ಧಾನ್ಯಗಳ ಸಂಸ್ಕರಣ ಘಟಕ, ಕಾರ್ಖಾನೆಗಳಿಗೆ ಆದೇಶ ಅನ್ವಯವಾಗುವುದಿಲ್ಲ.

ಮಂಗಳವಾರ ರಾಜ್ಯದಲ್ಲಿ 2496 ಜನರಿಗೆ ಕೊರೋನಾ: ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್..?

 ಇನ್ನುಳಿದಂತೆ ನಿಷೇಧಾಜ್ಞೆಯ ಅವಧಿಯಲ್ಲಿ ಜಿಲ್ಲಾದ್ಯಂತ ಮದ್ಯಾಹ್ನ 1 ಗಂಟೆಯ ವರೆಗೆ ಮಾತ್ರ ದಿನ ಬಳಕೆಯ ವಸ್ತುಗಳಾದ ಹಾಲು, ಹಣ್ಣು, ತರಕಾರಿ, ಪೆಟ್ರೋಲ್ ಪಂಪ್ ಹಾಗೂ ಇನ್ನಿತರ ಅವಶ್ಯಕ ಅಂಗಡಿಗಳು ಅಲ್ಲದೇ ಕೃಷಿ ಹಾಗೂ ತೋಟಗಾರಿಕೆಗೆ ಸಂಬಂಧಿಸಿದ ರಸಗೊಬ್ಬರ, ಯಂತ್ರೋಪಕರಣ, ಬಿಡಿಭಾಗದ ಅಂಗಡಿಗಳು ತೆರೆದಿರುತ್ತದೆ.

ಯಾವುದೇ ಸಭೆ, ಸಮಾರಂಭ, ಜಾತ್ರೆ, ಸಂತೆಗೆ ನಿರ್ಬಂಧಿಸಲಾಗಿದೆ.  ಬಾರ್, ರೆಸ್ಟೋರೆಂಟ್, ಲಿಕ್ಕರ್ ಔಟ್ ಲೆಟ್, ಹೋಟಲ್, ಬಟ್ಟೆ ಅಂಗಡಿ, ಬಂಗಾರದ ಅಂಗಡಿ ಹಾಗೂ ಖಾನಾವಾಳಿ, ಪಾನ್ ಶಾಪ್, ಟೀಸ್ಟಾಲ್‌ಗಳನ್ನು ತೆರೆಯುವುದನ್ನು ನಿಷೇಧಿಸಲಾಗಿದ್ದು ಕೇವಲ (ಪಾರ್ಸೆಲ್ ಮತ್ತು ಹೋಂ ಡೆಲಿವರಿಗೆ ಅವಕಾಶವಿದೆ).

ಆಟೋ, ಟ್ಯಾಕ್ಸಿ, ಖಾಸಗಿ ವಾಹನ ಸಂಚಾರಕ್ಕೆ ಅಗತ್ಯ ಮತ್ತು ತುರ್ತು ಪರಿಸ್ಥಿತಿ ಹೊರತುಪಡಿಸಿ ಉಳಿದ ವೇಳೆ ನಿರ್ಬಂಧಿಸಲಾಗಿದೆ. ಇನ್ನು ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿದ್ದು ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರಬಂದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.