ಬೆಂಗಳೂರು [ಮಾ.11]:  ಬೆಂಗಳೂರಿನಲ್ಲಿ ಮಾರಣಾಂತಿಕ ಕೊರೋನಾ ಸೋಂಕು ದೃಢಪಟ್ಟಪ್ರಕರಣಗಳ ಸಂಖ್ಯೆ ಮಂಗಳವಾರ ನಾಲ್ಕಕ್ಕೆ ಏರಿಕೆಯಾಗಿದ್ದು, ಸೋಮವಾರ ಕೊರೋನಾ ಸೋಂಕು ದೃಢಪಟ್ಟಿದ್ದ ಸಾಫ್ಟ್‌ವೇರ್‌ ಇಂಜಿನಿಯರ್‌ ಪತ್ನಿ ಹಾಗೂ ಮಗಳಿಗೂ ಸೋಂಕು ಇರುವುದು ಖಚಿತವಾಗಿದೆ.

ಇದಲ್ಲದೆ, ಈ ಪ್ರಕರಣಕ್ಕೆ ಸಂಬಂಧವಿಲ್ಲದ್ದ ಮತ್ತೊಬ್ಬ ವ್ಯಕ್ತಿಯೂ ಸೋಂಕು ಪೀಡೀತನಾಗಿರುವುದು ಖಚಿತಪಟ್ಟಿದ್ದು, ಆತಂಕ ಹೆಚ್ಚಲು ಕಾರಣವಾಗಿದೆ. ಈ ಪ್ರತ್ಯೇಕ ಪ್ರಕರಣದಲ್ಲಿ ಮಾ.8ರಂದು ಅಮೆರಿಕದಿಂದ ಬೆಂಗಳೂರಿಗೆ ಆಗಮಿಸಿದ್ದ 50 ವರ್ಷದ ಮತ್ತೊಬ್ಬ ಟೆಕಿಗೂ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಬೆಂಗಳೂರಿನಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ನಾಲ್ಕು ಮಂದಿಗೆ ಸೋಂಕು ದೃಢಪಟ್ಟಿದ್ದು, ರಾಜ್ಯಾದ್ಯಂತ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಟೆಕಿ ಪುತ್ರಿಗೆ ಪ್ರತ್ಯೇಕ ಪರೀಕ್ಷೆ ವ್ಯವಸ್ಥೆ

ಮಂಗಳವಾರ ಕೊರೋನಾ ಸೋಂಕು ಪತ್ತೆಯಾದ 50 ವರ್ಷದ ಸಾಫ್ಟ್‌ವೇರ್‌ ಇಂಜಿನಿಯರ್‌ ಪುತ್ರಿಗೆ ಬುಧವಾರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಇದೆ. ಈ ವಿದ್ಯಾರ್ಥಿನಿಗೆ ಸೋಂಕು ಹಬ್ಬಿರುವ ಶಂಕೆ ಹಿನ್ನೆಲೆಯಲ್ಲಿ ಮನೆಯಲ್ಲೇ ಪ್ರತ್ಯೇಕ ನಿಗಾ ವಹಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಬುಧವಾರ ಪರೀಕ್ಷೆ ಬರೆಯಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ.

ಕೊರೋನಾಕ್ಕಿಂತ ಡ್ರಂಕ್ ಆ್ಯಂಡ್ ಡ್ರೈವ್ ಡೇಂಜರ್: ಕುಡುಕ ಚಾಲಕರಿಗೆ ಭಾಸ್ಕರ್ ರಾವ್ ಎಚ್ಚರಿಕೆ..

ಈ ಬಗ್ಗೆ  ಪ್ರತಿಕ್ರಿಯಿಸಿರುವ ಪಿ.ಯು. ಮಂಡಳಿ ನಿರ್ದೇಶಕಿ ಎಂ. ಕನಗವಲ್ಲಿ, ವಿದ್ಯಾರ್ಥಿನಿಗೆ ಪ್ರತ್ಯೇಕವಾಗಿ ಪರೀಕ್ಷೆ ವ್ಯವಸ್ಥೆ ಮಾಡಲು ಸಚಿವರೊಂದಿಗೆ ಚರ್ಚೆ ನಡೆಸುತ್ತಿದ್ದೇವೆ. ಇದರ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.