ಹುಬ್ಬಳ್ಳಿ(ಜು.03): ಕೊರೋನಾ ಸೋಂಕಿತನಾಗಿ ಆ್ಯಂಬುಲೆನ್ಸ್‌ ಬರುವಿಕೆಗಾಗಿ ಗಂಟೆಗಟ್ಟಲೆ ಮನೆಯ ಹೊರಗೆ ಕುಳಿತ ವ್ಯಕ್ತಿ. ಮಗನಿಗೆ ಧೈರ್ಯ ತುಂಬಬೇಕೊ ಅಥವಾ ದೂರವಿರಬೇಕೊ ಎಂಬ ಸಂದಿಗ್ಧದಲ್ಲಿ ತಂದೆ. ಆತಂಕದಿಂದ ಕುಳಿತ ಮನೆಯ ಇತರ ಸದಸ್ಯರು.

ಹೌದು! ಆ ವ್ಯಕ್ತಿಗೆ ನಿಮಗೆ ಕೊರೋನಾ ಸೋಂಕು ದೃಢವಾಗಿದೆ, ನಿಮ್ಮ ಮನೆಗೆ ನಾವೇ ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಕರೆ ಬಂದಿದ್ದು ಗುರುವಾರ ಮಧ್ಯಾಹ್ನ 2.30ರ ಸುಮಾರಿಗೆ. ಆದರೆ, ಕಿಮ್ಸ್‌ ಆಸ್ಪತ್ರೆ ಸಿಬ್ಬಂದಿ ಬಂದು ಸೋಂಕಿತನನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದು ಸಂಜೆ 6.10ಕ್ಕೆ. ಅಂದರೆ, ಬರೋಬ್ಬರಿ 4 ಗಂಟೆಗಳ ಕಾಲ ರೋಗಿ ಮನೆಯಲ್ಲೇ ಕಳೆದಿದ್ದಾರೆ. ಇದರಿಂದ ಮಕ್ಕಳೂ ಸೇರಿದಂತೆ 16 ಜನರಿರುವ ತುಂಬು ಕುಟುಂಬದ ಸದಸ್ಯರು ಆತಂಕದಿಂದ ಸಮಯ ಕಳೆಯುವಂತಾಯಿತು.

ಅಣ್ಣಿಗೇರಿ: ಇಂದಿನಿಂದ 10 ದಿನ ಸ್ವಯಂ ಲಾಕ್‌ಡೌನ್‌

ಇಲ್ಲಿನ ಮೂರುಸಾವಿರ ಮಠದ ಬಳಿಯ ಗುರುಸಿದ್ಧೇಶ್ವರ ನಗರದ ನಿವಾಸಿ ಕಳೆದ ಸೋಮವಾರ ಕೊರೋನಾ ತಪಾಸಣೆಗೆ ಒಳಗಾಗಿದ್ದರು. ಗುರುವಾರ ಮಧ್ಯಾಹ್ನ ಬ್ರಾಡ್‌ವೆ ಬಳಿಯ ತಮ್ಮ ಅಂಗಡಿಯಿಂದ ಮನೆಗೆ ಬರುವಾಗ ಕಿಮ್ಸ್‌ನಿಂದ ಕರೆ ಬಂದಿದೆ. ಕೋವಿಡ್‌-19 ದೃಢಪಟ್ಟಿರುವ ಕುರಿತು ತಿಳಿಸಿರುವ ವೈದ್ಯರು ನಿಮ್ಮನ್ನು ಕಿಮ್ಸ್‌ಗೆ ಕರೆತರುತ್ತೇವೆ ಎಂದು ಹೇಳಿದ್ದಾರೆ. ಮನೆಗೆ ಬಂದು ವಿಷಯ ತಿಳಿಸಿದ ವ್ಯಕ್ತಿ ಮನೆಯ ಹೊರಗೆ ಕುಳಿತಿದ್ದಾರೆ.

ಬೆಡ್‌ ಫುಲ್‌!

ಕರೆ ಬಂದು ಎರಡು ಗಂಟೆ ಕಳೆದರೂ ಆ್ಯಂಬುಲೆನ್ಸ್‌ ಬಾರದ್ದರಿಂದ ಆತಂಕಗೊಂಡೆವು. ಬಳಿಕ ಕಿಮ್ಸ್‌ಗೆ ಕರೆ ಮಾಡಿದಾಗ ವೈದ್ಯರು ಮಾತನಾಡಿ, ನಮ್ಮಲ್ಲಿ ಎಲ್ಲ ಬೆಡ್‌ಗಳೂ ಭರ್ತಿಯಾಗಿವೆ. ರೋಗಿಗಳು ಬಿಡುಗಡೆಯಾಗಿ ಹೋದರೆ ಬೆಡ್‌ ಸಿಗಲಿದೆ. ಆಗ ನಿಮ್ಮನ್ನು ಕರೆದುಕೊಂಡು ಹೋಗುತ್ತೇವೆ ಎಂದು ತಿಳಿಸಿದರು. ಈ ಮಾತಿಂದ ಇನ್ನಷ್ಟುಗಾಬರಿಗೊಂಡೆವು. ಎಷ್ಟುಗಂಟೆಗೆ ಆ್ಯಂಬುಲೆನ್ಸ್‌ ಬರುತ್ತದೆ? ಅಲ್ಲಿವರೆಗೂ ಸೋಂಕಿತನನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಯಾವುದೆ ಸೂಚನೆಯನ್ನೂ ನೀಡಿಲ್ಲ. ನಮ್ಮ ಮನೆಯಲ್ಲಿ ಒಂದೂವರೆ ವರ್ಷದ ಮಗು ಸೇರಿ 16 ಜನರಿದ್ದೇವೆ. ಕಿಮ್ಸ್‌ನಿಂದ ಕರೆ ಮಾಡಿದ ಬಳಿಕ ಆದಷ್ಟುಶೀಘ್ರ ಮಗನನ್ನು ಕರೆದುಕೊಂಡು ಹೋಗುವುದು ಬಿಟ್ಟು ವಿಳಂಬ ಮಾಡಿದ್ದಾರೆ. ಇದರಿಂದ ಮನೆಯಲ್ಲಿ ಆತಂಕ ಉಂಟಾಗಿತ್ತು ಎಂದು ಸೋಂಕಿತನ ತಂದೆ ಬೇಸರ ವ್ಯಕ್ತಪಡಿಸಿದರು.

ಸದ್ಯ ಕಿಮ್ಸ್‌ನಲ್ಲಿ 196 ಕೊರೋನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 186 ಜನರು ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಕಿಮ್ಸ್‌ನಲ್ಲಿ ಇನ್ನೂ ನೂರಾರು ಬೆಡ್‌ಗಳನ್ನು ಕೊರೋನಾ ಸೋಂಕಿತರಿಗಾಗಿ ಮೀಸಲಿಡಲಾಗಿದೆ. ಆದರೆ, ಗುರುವಾರ ಕಿಮ್ಸ್‌ ವೈದ್ಯರು ಹಾಸಿಗೆಗಳು ಭರ್ತಿಯಾಗಿವೆ ಎಂದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಕಿಮ್ಸ್‌ನಲ್ಲಿ ಹಾಸಿಗೆಗಳನ್ನು ಸಿದ್ಧಪಡಿಸಿಕೊಂಡಿರುವ ಕುರಿತಂತೆ ಅನುಮಾನಕ್ಕೆ ಕಾರಣವಾಗಿದೆ. ಈ ಕುರಿತಂತೆ ಪ್ರತಿಕ್ರಿಯೆ ಪಡೆಯಲು ಕಿಮ್ಸ್‌ ನಿರ್ದೇಶಕರಿಗೆ ಕರೆ ಮಾಡಿದರೆ ಅವರು ಸ್ವೀಕರಿಸಿಲ್ಲ.