ಕೂಡ್ಲಿಗಿಯಲ್ಲಿ ಓಡಾಡಿದ್ದ ದಾವಣಗೆರೆ ಕೊರೋನಾ ಸೋಂಕಿತ..!
ಬಳ್ಳಾರಿ ಎಸ್ಪಿಗೆ ಪತ್ರ ಬರೆದು ಮಾಹಿತಿ ನೀಡಿದ ದಾವಣಗೆರೆಗೆ ಎಸ್ಪಿ| ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಹೆಚ್ಚಿದ ಆತಂಕ, ಅನೇಕರ ಜೊತೆ ಸಂಪರ್ಕ| ಮಾರ್ಚ್ 5ರಂದು ದಾವಣಗೆರೆಯಿಂದ ಹೊರಟು ಕೂಡ್ಲಿಗಿಯಲ್ಲಿ ಓಡಾಡಿದ್ದ ಕೊರೋನಾ ಸೋಂಕಿತ| ಈರುಳ್ಳಿ ಮಾರಾಟ ಮಾಡಲು ಲಾರಿಯೊಂದರಲ್ಲಿ ಕೂಡ್ಲಿಗಿಗೆ ಬಂದಿದ್ದ ಎಂಬುದು ಸಿಡಿಆರ್ ಮಾಹಿತಿಯಿಂದ ತಿಳಿದು ಬಂದಿದೆ|
ಬಳ್ಳಾರಿ(ಮೇ.09): ದಾವಣಗೆರೆಯ ಕೊರೋನಾ ವೈರಸ್ ಸೋಂಕಿತ ವ್ಯಕ್ತಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಓಡಾಡುತ್ತಿರುವುದು ಬೆಳಕಿಗೆ ಬಂದಿದೆ. ದಾವಣಗೆರೆ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಳ್ಳಾರಿ ಎಸ್ಪಿಗೆ ಪತ್ರ ಬರೆದು ಇದನ್ನು ಖಚಿತ ಪಡಿಸಿದ್ದು, ಮುಂದಿನ ಕ್ರಮಕ್ಕಾಗಿ ಮಾಹಿತಿ ರವಾನಿಸಿದ್ದಾರೆ.
ಕಳೆದ ಮೇ 3ರಂದು ದಾವಣಗೆರೆ ನಗರದಲ್ಲಿ ನಡೆಸಿದ ತಪಾಸಣೆ ವೇಳೆ ವ್ಯಕ್ತಿಯೋರ್ವನಿಗೆ (ಪಿ-617) ಸೋಂಕು ಇರುವುದು ದೃಢಗೊಂಡಿತ್ತು. ಈತ ಮಾರ್ಚ್ 5ರಂದು ದಾವಣಗೆರೆಯಿಂದ ಹೊರಟು ಕೂಡ್ಲಿಗಿಯಲ್ಲಿ ಓಡಾಡಿಕೊಂಡಿದ್ದಾನೆ. ಈರುಳ್ಳಿ ಮಾರಾಟ ಮಾಡಲು ಲಾರಿಯೊಂದರಲ್ಲಿ ಕೂಡ್ಲಿಗಿಗೆ ಬಂದಿದ್ದಾನೆ ಎಂಬುದು ಸಿಡಿಆರ್ ಮಾಹಿತಿಯಿಂದ ತಿಳಿದು ಬಂದಿದೆ. ಈತ ಓಡಾಡಿರುವ ಪ್ರದೇಶಗಳು ಹಾಗೂ ಸಂಪರ್ಕ ಜನರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಮಾರ್ಚ್ 5 ರ ಬಳಿಕವೂ ಈತ ಈ ಪ್ರದೇಶಕ್ಕೆ ಬಂದಿದ್ದನೇ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದ್ದು, ಮಾಹಿತಿ ಕಲೆ ಹಾಕಲಾಗುತ್ತಿದೆ.
ಶೀಲ ಶಂಕಿಸಿ ಪತ್ನಿಯ ರುಂಡ ಚೆಂಡಾಡಿದ ಪಾಪಿ ಗಂಡ..!
ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ:
ಕೊರೋನಾ ವೈರಸ್ ಸೋಂಕಿತ ವ್ಯಕ್ತಿ ಈ ಹಿಂದೆ ಕೂಡ್ಲಿಗಿಯ ಮಾರುಕಟ್ಟೆಪ್ರದೇಶದಲ್ಲಿ ಓಡಾಡಿದ್ದಾನೆ. ಅನೇಕರ ಜೊತೆ ಸಂಪರ್ಕದಲ್ಲಿದ್ದಾನೆ ಎಂಬ ಮಾಹಿತಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಏತನ್ಮಧ್ಯೆ ಸಂಡೂರು ತಾಲೂಕಿಗೂ ಕೊರೋನಾ ವೈರಸ್ ಪ್ರವೇಶ ಪಡೆದಿರುವುದು ಪಕ್ಕದ ಕೂಡ್ಲಿಗಿ ತಾಲೂಕಿನ ಜನರಿಗೆ ಭೀತಿ ಮೂಡಿಸಿದೆ.
ಈವರೆಗೆ ಹೊಸಪೇಟೆ, ಸಿರುಗುಪ್ಪ, ಬಳ್ಳಾರಿ ನಗರಕ್ಕಷ್ಟೇ ಸೀಮಿತಗೊಂಡಿದ್ದ ಕೊರೋನಾ ವೈರಸ್ ಗಣಿ ನಗರಿ ಸಂಡೂರಿಗೆ ಸಹ ಕಾಲಿರಿಸಿದೆ. ಗುರುವಾರ ರಾತ್ರಿ ಸಂಡೂರಿನ ಮಹಿಳೆಯೋರ್ವರಿಗೆ ಸೋಂಕು ಇರುವುದು ದೃಢಪಟ್ಟಿದ್ದು ಈ ಬೆಳವಣಿಗೆ ನೆರೆಯ ತಾಲೂಕುಗಳಲ್ಲಿ ಆತಂಕ ಮೂಡಿಸಿದೆ.
ವ್ಯಾಟ್ಸಪ್‌ಗಳಲ್ಲಿ ಸುಳ್ಳು ಮಾಹಿತಿ ಹರಿದಾಟ-ಜನರ ಸಂಕಟ
ವ್ಯಾಟ್ಸಪ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಕೊರೋನಾ ವೈರಸ್ ಸೋಂಕಿತರ ಕುರಿತು ಮಾಹಿತಿಗಳು ಹರಿದಾಡುತ್ತಿದ್ದು ಜನರಲ್ಲಿ ಭೀತಿ ಮೂಡಿಸಿದೆ. ಕೂಡ್ಲಿಗಿ ತಾಲೂಕಿನಲ್ಲಿ 7 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಬಳ್ಳಾರಿ ನಗರದಲ್ಲಿ ಇನ್ನೂ 15 ಜನರಿಗೆ ಸೋಂಕು ಇದೆ. ಸಂಡೂರಿನಲ್ಲಿ 6 ಪ್ರಕರಣಗಳು ಬಂದಿವೆ. ಸಿರುಗುಪ್ಪದ 13 ಜನರಲ್ಲಿ ಕೊರೋನಾ ಹರಡಿದೆ. ಹೊರಗಡೆ ಮಾಹಿತಿ ಬಿಡುತ್ತಿಲ್ಲ. ಹೀಗೆ ನಾನಾ ಬಗೆಯ ಸುಳ್ಳು ಮಾಹಿತಿಗಳು ಹರಿದಾಡುತ್ತಿವೆ. ಇದು ಅನೇಕರಲ್ಲಿ ಗೊಂದಲ ಮೂಡಿಸಿದ್ದು, ಕೆಲವರು ಪತ್ರಿಕಾ ಕಚೇರಿಗಳಿಗೆ ಫೋನಾಯಿಸಿ ಸೋಂಕಿತರ ಸಂಖ್ಯೆಯಲ್ಲಿ ಖಚಿತ ಪಡಿಸಿಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಸುಳ್ಳು ಮಾಹಿತಿಯನ್ನೇ ನಂಬಿ ಬೇರೆಯವರಿಗೆ ಅದನ್ನೇ ಹೇಳಿಕೊಂಡು ಓಡಾಡುತ್ತಿದ್ದಾರೆ.
ದಾವಣಗೆರೆಯ ಕೋರೋನಾ ಸೋಂಕಿತ ವ್ಯಕ್ತಿ ಕೂಡ್ಲಿಗಿಯಲ್ಲಿ ಮೂರ್ನಾಲ್ಕು ತಾಸು ಓಡಾಡಿದ್ದಾನೆ ಎಂಬ ಮಾಹಿತಿ ಇದೆ. ಈ ಕುರಿತು ಮುಂದಿನ ಹಂತದ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಅವರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಸುಳ್ಳು ಮಾಹಿತಿಗಳು ಜನರಲ್ಲಿ ಆತಂಕ ಮೂಡಿಸಿರುವುದು ನಿಜ. ಸಾರ್ವಜನಿಕರು ವಿನಾಕಾರಣ ಆತಂಕಗೊಳ್ಳುವ ಬದಲು ಅಧಿಕೃತ ಮಾಹಿತಿ ನೀಡುವ ಪತ್ರಿಕೆಗಳನ್ನು ಓದಿ, ಖಚಿತಪಡಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣದಲ್ಲಿ ಸಿಗುವ ಮಾಹಿತಿ ಪೂರ್ಣ ವಿಶ್ವಾಸ ಇಡಲು ಸಾಧ್ಯವಿಲ್ಲ ಎಂದು ಬಳ್ಳಾರಿಯ ಉಪನ್ಯಾಸಕ ಶ್ರೀನಿವಾಸಮೂರ್ತಿ ಹೇಳಿದ್ದಾರೆ.