ಹುಬ್ಬಳ್ಳಿ: ಆ್ಯಂಬುಲೆನ್ಸ್ ವಿಳಂಬ, ಚೆನ್ನಮ್ಮ ವೃತ್ತದಲ್ಲಿ ಸೋಂಕಿತನ ಓಡಾಟ
ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದ ಸೋಂಕಿತ| ಶನಿವಾರ ರಾತ್ರಿ 11 ಗಂಟೆಗೆ ಸೋಂಕು ದೃಢ| ಭಾನುವಾರ ಬೆಳಗ್ಗೆ 11 ಗಂಟೆಯಾದರೂ ಚಿಕಿತ್ಸೆಗೆ ಕರೆದೊಯ್ಯದ ಆರೋಗ್ಯ ಇಲಾಖೆ ಸಿಬ್ಬಂದಿ|
ಹುಬ್ಬಳ್ಳಿ(ಜು.13): ಶನಿವಾರ ರಾತ್ರಿ 11 ಗಂಟೆಗೆ ಕೊರೋನಾ ಪಾಸಿಟಿವ್ ದೃಢಪಟ್ಟ ರೋಗಿಯನ್ನು ಭಾನುವಾರ ಬೆಳಗ್ಗೆ 11 ಗಂಟೆಯಾದರೂ ಚಿಕಿತ್ಸೆಗೆ ಕರೆದೊಯ್ಯದ ಘಟನೆ ನಗರದಲ್ಲಿ ನಡೆದಿದ್ದು, ಈ ನಡುವೆ ಬೆಳಗ್ಗೆ ಸೋಂಕಿತ ಇಲ್ಲಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿಯೆ ಓಡಾಡಿ ಅವಾಂತರ ಸೃಷ್ಟಿಸಿದ್ದಾನೆ.
ಈತ ರೈಲ್ವೆ ಗುತ್ತಿಗೆದಾರನಾಗಿದ್ದು, ಮೂರು ತಿಂಗಳಿನಿಂದ ಹುಬ್ಬಳ್ಳಿಯಲ್ಲಿದ್ದ. ಇಲ್ಲಿಯೆ ಹಳೆಯ ಬಸ್ ನಿಲ್ದಾಣದ ಲಾಡ್ಜ್ ಒಂದರಲ್ಲಿ ತಂಗಿದ್ದ. ಎರಡು ದಿನಗಳಿಂದ ಜ್ವರ ಕಂಡುಬಂದ ಕಾರಣ ಸ್ವ್ಯಾಬ್ ಟೆಸ್ಟ್ ಮಾಡಿಸಿಕೊಂಡಿದ್ದಾನೆ. ಶನಿವಾರ ರಾತ್ರಿ ಕೊರೋನಾ ದೃಢಪಟ್ಟಿದೆ. ಆದರೆ, ಆಂಬ್ಯುಲೆನ್ಸ್ ಈತನನ್ನು ಕರೆದುಕೊಂಡು ಹೋಗಲು ಆಗಮಿಸಿಲ್ಲ. ಭಾನುವಾರ ಬೆಳಗ್ಗೆ ವರೆಗೆ ಕಾದ ಈತ ಬಳಿಕ ರಸ್ತೆಗೆ ಬಂದು ಪೊಲೀಸರ ಬಳಿ ಬಂದು ಸಹಾಯ ಕೇಳಿದ್ದಾನೆ. ಆಸ್ಪತ್ರೆಗೆ ಸೇರಿಸಲು ಆ್ಯಂಬುಲೆನ್ಸ್‌ಗೆ ಕರೆ ಮಾಡಿ ಎಂದು ನೆರವು ಕೋರಿದ್ದಾನೆ. ಆದರೆ ಕಂಗಾಲಾದ ಸಿಬ್ಬಂದಿ ಈತನ ಬಳಿ ಸುಳಿದಿಲ್ಲ.
ಕೊರೋನಾ ಅಟ್ಟಹಾಸದ ವೇಳೆ ಶಿಕ್ಷಕರಿಗೆ ಕಾರ್ಯಾಗಾರ ಬೇಕಾ?
ಇದಾದ ಬಳಿಕ ನೇರವಾಗಿ ಚೆನ್ನಮ್ಮ ವೃತ್ತಕ್ಕೆ ಬಂದ ಈತ ತಿರುಗಾಡಿದ್ದಾನೆ. ಇದರಿಂದ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿದೆ. ಮಾಧ್ಯಮದವರು ಹಾಗೂ ಪೊಲೀಸರು ವಾಪಸ್ ಲಾಡ್ಜ್‌ಗೆ ಹೋಗುವಂತೆ ತಿಳಿಸಿದ ಬಳಿಕ ಮರಳಿದ್ದಾನೆ. ಈ ವರದಿ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆ ಮುಖ್ಯಮಂತ್ರಿ ಕಚೇರಿಯಿಂದ ಡಿಸಿ ಕಚೇರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.
11 ಗಂಟೆ ಬಳಿಕ ಆಗಮಿಸಿದ ಸಿಬ್ಬಂದಿ ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸಂಜೀವಿನಿ ಆಯುರ್ವೇದಿಕ್ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಬಳಿಕ ಮಹಾನಗರ ಪಾಲಿಕೆ ಸಿಬ್ಬಂದಿ ಚೆನ್ನಮ್ಮ ವೃತ್ತವನ್ನು ಸ್ಯಾನಿಟೈಸ್ ಮಾಡಿಸಿದ್ದಾರೆ.