ಯಾದಗಿರಿ(ಮೇ.28): ಜಿಲ್ಲೆಯ ಯರಗೋಳ್‌ ಚೆಕ್‌ಪೋಸ್ಟ್‌ನಲ್ಲಿ ಸ್ಕ್ರೀನಿಂಗ್‌ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದ ಮಹಿಳೆಗೆ ಕೊರೋನಾ ಸೋಂಕು ತಗಲಿರುವುದು ಬುಧವಾರ ದೃಢಪಟ್ಟಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ. ಇದೀಗ ಮುಂಜಾಗ್ರತಾ ಕ್ರಮವಾಗಿ ಆಕೆ ಬಂದ ಬಸ್‌ನಲ್ಲಿದ್ದ 23 ಮಂದಿಯ ಗಂಟಲು ದ್ರವದ ಮಾದರಿ ಪರೀಕ್ಷೆಗೆ ಲ್ಯಾಬಿಗೆ ಕಳುಹಿಸಿಕೊಡಲಾಗಿದೆ.

ಮುಂಬೈನಿಂದ ಜಿಲ್ಲೆಗೆ ಮೇ 20ರಂದು ಮಿನಿಬಸ್‌ನಲ್ಲಿ ಆಗಮಿಸಿದ್ದ ತಾಲೂಕಿನ ಅರಕೇರಾ ಕೆ.ಗ್ರಾಮದ 69 ವರ್ಷದ ಮಹಿಳೆ(ಪಿ 2301) ಯರಗೋಳ ಚೆಕ್‌ಪೋಸ್ಟ್‌ನಲ್ಲಿ ತೀವ್ರ ಅನಾರೋಗ್ಯದ ಕಾರಣದಿಂದ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರೂ ಹಾದಿಯಲ್ಲೇ ಕೊನೆಯುಸಿರೆಳೆದರು.

ಯಾದಗಿರಿ: ತಾಂಡಾ ನಿವಾಸಿಗಳಲ್ಲೇ ಕೊರೋನಾ ತಾಂಡವ..!

ಮಹಿಳೆಯ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿ ಕೊಟ್ಟು ನಿಯಮಾನುಸಾರವಾಗಿ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಈಗ ಮೃತಳಿಗೆ ಕೊರೋನಾ ಸೋಂಕು ದೃಢಪಟ್ಟಿರುವುದರಿಂದ ಉಳಿದವರ ಗಂಟಲು ದ್ರವದ ಮಾದರಿಯನ್ನು ಟೆಸ್ಟ್‌ಗೆ ಕಳುಹಿಸಲಾಗಿದೆ. ಜೊತೆಗೆ ಆ ಬಸ್‌ನಲ್ಲಿ ಪ್ರಯಾಣಿಸಿದ್ದ 4 ಮಕ್ಕಳು ಸೇರಿದಂತೆ ಒಟ್ಟು 23 ಮಂದಿಯನ್ನು ಕ್ವಾರಂಟೈನ್‌ಗೊಳಪಡಿಸಲಾಗಿದೆ. 

ಯಾದಗಿರಿ: ಕ್ವಾರಂಟೈನ್ ಕೇಂದ್ರಗಳೇ ಈಗ ಕೊರೋನಾ ಹಾಟ್‌ಸ್ಪಾಟ್..!

ಸಿಬ್ಬಂದಿಗೂ ಸೋಂಕು ಭೀತಿ!:

ಚೆಕ್‌ಪೋಸ್ಟ್‌ನಲ್ಲಿ ಮಹಿಳೆ ಸ್ಕ್ರೀನಿಂಗ್‌ ವೇಳೆ ಕುಸಿದು ಮೃತಪಟ್ಟಾಗ ಮಹಿಳೆಯ ಸಂಬಂಧಿಕರು ಮತ್ತು ಕೆಲವರು ಪೊಲೀಸ್‌ ಮತ್ತು ಆರೋಗ್ಯ ಸಿಬ್ಬಂದಿಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಗಲಾಟೆ ಎಬ್ಬಿಸಿದ್ದಲ್ಲದೆ ಹಲ್ಲೆಗೂ ಯತ್ನಿಸಿದ್ದರು. ಹೀಗಾಗಿ ಸ್ಥಳದಲ್ಲಿದ್ದ ಸಿಬ್ಬಂದಿಗೂ ಕೊರೋನಾತಂಕ ಎದುರಾಗಿದ್ದು ಅಷ್ಟೂ ಸಿಬ್ಬಂದಿಯ ಗಂಟಲು ಮಾದರಿ ದ್ರವವನ್ನೂ ಪರೀಕ್ಷೆಗೆ ಕಳುಹಿಸಲಾಗಿದೆ.