ಯಾದಗಿರಿ(ಮೇ.24): ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಜಿಲ್ಲೆಗೆ ವಾಪಸ್ಸಾಗಿ, ಇನ್ಸಟಿಟ್ಯೂಷನ್ ಕ್ವಾರಂಟೈನ್ ಕೇಂದ್ರಗಳಲ್ಲಿರುವ ವಲಸಿರಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಕಂಡುಬರುತ್ತಿರುವುದರಿಂದ, ಇದೀಗ ಕ್ವಾರಂಟೈನ್ ಕೇಂದ್ರಗಳೇ ಸೋಂಕು ಹಬ್ಬುವಿಕೆಗೆ ಹಾಟ್‌ಸ್ಪಾಟ್ ಎಂಬಂತಾಗಿರುವುದು ಆತಂಕ ಮೂಡಿಸಿದೆ.

ಶನಿವಾರ ಒಂದೇ ದಿನದಲ್ಲಿ 72 ಪಾಸಿಟಿವ್ ಪ್ರಕರಣಗಳು ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸಿದೆ. ಇದರಲ್ಲಿ 54 ಜನರು ಶಹಾಪುರ ತಾಲೂಕಿನ ಕನ್ಯಾ ಕೋಳೂರು ಗ್ರಾಮದ ಒಂದೇ ಕ್ವಾರಂಟೈನ್ ಕೇಂದ್ರಗಳಲ್ಲಿರುವುದು ಹಾಗೂ 16 ಜನರು ವಿವಿಧ ಕೇಂದ್ರಗಳಲ್ಲಿದ್ದು, ಇಬ್ಬರು ಮಾತ್ರ ಯಾದಗಿರಿ ನಗರದ ದುಕಾನವಾಡಿ ಬಡಾವಣೆಯಲ್ಲಿದ್ದವರು.

ಶೋಚನೀಯ ಸ್ಥಿತಿಯಲ್ಲಿ ಕ್ವಾರಂಟೈನ್‌ ಕೇಂದ್ರಗಳು: ಇಲ್ಲಿ ಇರೋದಾದ್ರೂ ಹೇಗೆ? ಬಡ ಕಾರ್ಮಿಕರು ಅಳಲು..!

ಜಿಲ್ಲೆಯ ವಿವಿಧೆಡೆಯ ಒಟ್ಟು 215 ಕ್ವಾರಂಟೈನ್ ಕೇಂದ್ರಗಳಲ್ಲಿ ಶುಕ್ರವಾರದವರೆಗೆ 12 ಸಾವಿರಕ್ಕೂ ಹೆಚ್ಚು ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಅನ್ಯ ರಾಜ್ಯಗಳಿಂದ, ಅದರಲ್ಲೂ ಮಹಾರಾಷ್ಟ್ರದಿಂದ ಜಿಲ್ಲೆಯ ವಿವಿಧ ತಾಂಡಾಗಳಲ್ಲಿನ ಜನರು ಹೆಚ್ಚು ವಾಪಸ್ಸಾಗಿದ್ದಾರೆ.

ಇನ್ನು, ಸೋಂಕು ತಗುಲಿದವರಲ್ಲಿ ಎಳೆಯ ಮಕ್ಕಳಿಂದ ಹಿಡಿದು ವಯೋವೃದ್ಧರೂ ಇರುವುದು ಆತಂಕ ಮೂಡಿಸಿದೆ. ಕ್ವಾರಂಟೈನ್ ಕೇಂದ್ರಗಳಲ್ಲಿ ಹಿಂಡು ಹಿಂಡಾಗಿ ವಲಸಿಗರನ್ನು ತುಂಬಿರುವುದೂ ಸಹ ಸೋಂಕು ಹಬ್ಬುವಿಕೆಗೆ ಸಹಕಾರಿಯಾಗಿದೆ ಎಂಬ ಅನುಮಾನಗಳು ಮೂಡಿವೆ.

ಕ್ವಾರಂಟೈನ್ ಕೇಂದ್ರಗಳಲ್ಲಿನ ಅವ್ಯವಸ್ಥೆ, ಊಟ-ನೀರಿಗಾಗಿ ವಲಸಿಗರ ತಾಪತ್ರಯ, ಭುಗಿಲೆದ್ದ ಆಕ್ರೋಶ ಮುಂತಾದವುಗಳು ಕ್ವಾರಂಟೈನ್ ಕೇಂದ್ರಗಳ ಸುರಕ್ಷತೆಯನ್ನೇ ಪ್ರಶ್ನಿಸುವಂತಿದ್ದವು. ಸೂಕ್ಷ್ಮ ಭಾಗಗಳಿಂದ ಬಂದಿದ್ದ ವಲಸಿಗರನ್ನು ಹಾಗೂ ಸಾಧಾರಣ ಸೋಂಕಿನ ಪ್ರದೇಶದಿಂದ ಬಂದವರನ್ನು ಪ್ರತ್ಯೇಕವಾಗಿರಿಸಬೇಕಾಗಿದ್ದ ಜಿಲ್ಲಾಡಳಿತ, ಎಲ್ಲರನ್ನೂ ಕುರಿ ಹಿಂಡುಗಳಂತೆ ತುಂಬುವ ಮೂಲಕ, ಸೋಂಕು ಹಬ್ಬುವಿಕೆ ಮತ್ತಷ್ಟೂ ರಳವಾಗುವಂತೆ ಮಾಡುವಲ್ಲಿ ಸಹಕಾರಿಯಾಯಿತು ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೂ ಮೊದಲು ಜಿಲ್ಲೆಯಲ್ಲಿನ ಒಟ್ಟು 15 ಪ್ರರಣಗಳಲ್ಲಿ 13 ಪ್ರಕರಣಗಳು ಇಂತಹುದ್ದೇ ಅವ್ಯವಸ್ಥೆ ಹೊಂದಿದ್ದ ಕ್ವಾರಂಟೈನ್ ಕೇಂದ್ರದವು.

ಕ್ವಾರಂಟೈನ್ ಕೇಂದ್ರಗಳ ಅವ್ಯವಸ್ಥೆ, ಹದಗೆಡುತ್ತಿರುವ ಆರೋಗ್ಯ, ವಲಸಿಗರ ಆಕ್ರೋಶ ಮುಂತಾದವುಗಳ ಬಗ್ಗೆ ವಿಶೇಷ ವರದಿಗಳ ಮೂಲಕ ಜಿಲ್ಲಾಡಳಿತದ ಗಮನ ಸೆಳೆಯಲು ಯತ್ನಿಸಿದ್ದ ‘ಕನ್ನಡಪ್ರಭ’, ಕ್ವಾರಂಟೈನ್ ಕೇಂದ್ರಗಳಲ್ಲೇ ಸೋಂಕು ತೀವ್ರವಾಗಿ ಹಬ್ಬುವ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು.