ಬೆಳಗಾವಿ(ಜು.20): ಜಿಲ್ಲಾ ಕೋವಿಡ್‌ ಆಸ್ಪತ್ರೆ ಬಿಮ್ಸ್‌ನಲ್ಲಿ ಸೂಕ್ತ ಚಿಕಿತ್ಸೆ ಸಿಗದೆ 65 ವರ್ಷದ ವೃದ್ಧ ಬೆತ್ತಲೆಯಾಗಿ ನೆಲದ ಮೇಲೆ ನರಳಿ ನರಳಿ ಮೃತಪಟ್ಟಿರುವ ಘಟನೆ ಮಾಸುವ ಮುನ್ನವೇ ಮತ್ತೆ ಇಂತಹದ್ದೇ ಅಮಾನವೀಯ ಘಟನೆ ಮರುಕಳಿಸಿದೆ. ಮಹಿಳೆಯೊಬ್ಬರು ಸೂಕ್ತ ಚಿಕಿತ್ಸೆ ಲಭಿಸದೇ ನರಳಿ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದ್ದು ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

‘ನನಗೆ ಶುಗರ್‌ ಇದೆ’ ಎಂದು ಹೇಳಿ ನರಳಿ ಮೃತಪಟ್ಟಿರುವ ಮಹಿಳೆಯ ಕೊನೆ ಘಳಿಗೆಯ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದ್ದು ಇದೀಗ ವೈರಲ್‌ ಆಗಿದೆ. ಕಾಗವಾಡದ 30 ವರ್ಷದ ಮಹಿಳೆ ತೀವ್ರ ಮಧುಮೇಹದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದರೂ ಯಾರು ದಾಖಲಿಸಿಕೊಳ್ಳಲಿಲ್ಲ. ಕೊನೆಗೆ ಬಿಮ್ಸ್‌ ಆಸ್ಪತ್ರೆಗೆ ಮಹಿಳೆಯನ್ನು ದಾಖಲಿಸಲಾಗಿತ್ತು. ಮಹಿಳೆಗೆ ಕೊರೋನಾ ಪಾಸಿಟಿವ್‌ ಇರುವುದು ದೃಢಪಟ್ಟಿದ್ದರಿಂದ ಕೋವಿಡ್‌ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಮಧುಮೇಹದಿಂದ ಬಳಲುತ್ತಿದ್ದ ಮಹಿಳೆಗೆ ಸೂಕ್ತ ಚಿಕಿತ್ಸೆ ದೊರೆಯದೇ ನರಳಿ ಪ್ರಾಣಬಿಟ್ಟಿದ್ದಾಳೆ.

'ಕೊರೋನಾ ನಿಯಂತ್ರಿಸುವಲ್ಲಿ ಸರ್ಕಾರ ವಿಫಲ, ರೋಗಿಗಳಿಗೆ ಚಿಕಿತ್ಸೆ ಸಿಗದೆ ಸಾಯುವಂತಾಗಿದೆ'

ನನ್ನ ಮಗಳು ಮಧುಮೇಹದಿಂದ ಬಳಲುತ್ತಿದ್ದರೂ ಬಿಮ್ಸ್‌ ಆಸ್ಪತ್ರೆಯಲ್ಲಿ ಸೂಕ್ತಚಿಕಿತ್ಸೆ ಲಭಿಸದೇ ಇರುವುದರಿಂದ ಆಕೆ ನರಳಿ ಪ್ರಾಣಬಿಟ್ಟಿದ್ದಾಳೆ. ನನ್ನ ಮಗಳ ಸಾವಿಗೆ ಬಿಮ್ಸ್‌ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತ ಮಹಿಳೆ ತಂದೆ ಬಿಮ್ಸ್‌ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.