ದಾಬಸ್‌ಪೇಟೆ(ಜೂ.21): ದಾಬಸ್‌ಪೇಟೆ ಕೈಗಾರಿಕಾ ಪ್ರದೇಶದ ಕೈಗಾರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಕೊರೋನಾ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿದ್ದ ಕಂಪನಿ ಸೇರಿದಂತೆ ಕೈಗಾರಿಕಾ ಪ್ರದೇಶದಲ್ಲಿ ಆತಂಕ ಸೃಷ್ಟಿಯಾಗಿದೆ.

ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವಾರದ ದ್ವಾರಕನಗರದಲ್ಲಿ ವಾಸವಾಗಿರುವ 30 ವರ್ಷದ ಮಹಿಳೆಗೆ ಕಳೆದ ಎರಡು ದಿನಗಳ ಹಿಂದೆ ಕೊರೋನಾ ಪಾಸಿಟಿವ್‌ ಬಂದಿದ್ದು ಈಕೆ ದಾಬಸ್‌ಪೇಟೆ ಕೈಗಾರಿಕಾ ಪ್ರದೇಶದಲ್ಲಿರುವ ಟಿಡಿಪಿಎಸ್‌ ಎಂಬ ಕಂಪನಿಯಲ್ಲಿ ಸ್ಟೋರ್‌ ಕೀಪರ್‌ ಆಗಿದ್ದರು ಎನ್ನಲಾಗಿದೆ. ಇದೀಗ ಕಂಪನಿಯ ಕಾರ್ಮಿಕರಿಗೆ ಎರಡು ದಿನ ರಜೆ ನೀಡಲಾಗಿದೆ. ಈಕೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ 4 ಜನ ಕುಟುಂಬಸ್ಥರು ಹಾಗೂ ಕಂಪನಿಯ 30 ಕಾರ್ಮಿಕರನ್ನು ಕ್ವಾರಂಟೇನ್‌ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಬೆಂಗಳೂರು: ಸ್ಟಂಟ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಮೂವರು ಯುವಕರು

100ಕ್ಕೂ ಹೆಚ್ಚು ಕೈಗಾರಿಕೆಗಳು

ಸೋಂಪುರ ಕೈಗಾರಿಕಾ ಪ್ರದೇಶಕದಲ್ಲಿ ಸುಮಾರು 100ಕ್ಕೂ ಹೆಚ್ಚು ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು ಸುಮಾರು ಸಾವಿರಾರು ಕಾರ್ಮಿಕರು ಈ ಕೈಗಾರಿಕಾ ಪ್ರದೇಶದಲ್ಲಿರುವ ವಿವಿಧ ಕಾರ್ಖಾನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಟಿಡಿಪಿಎಸ್‌ ಕಂಪನಿಯ ಮಹಿಳೆಯ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಇಡೀ ಕೈಗಾರಿಕಾ ಪ್ರದೇಶದಲ್ಲಿ ಆತಂಕ ಎಡೆಮಾಡಿಕೊಟ್ಟಿದ್ದು ಕಾರ್ಮಿಕರು ಕೆಲಸಕ್ಕೆ ಹೋಗಲು ಭಯ ಪಡುತ್ತಿದ್ದಾರೆ.

ಈ ಕಂಪನಿಯಲ್ಲಿ ಬೆಂಗಳೂರು, ತುಮಕೂರು ಸೇರಿದಂತೆ ದಾಬಸ್‌ಪೇಟೆ, ನೆಲಮಂಗಲ ಪಟ್ಟಣದ ಕಾರ್ಮಿಕರು ಹಾಗೂ ಸೋಂಪುರ ಹೋಬಳಿಯ ಹಲವಾರು ಗ್ರಾಮಗಳ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇದೀಗ ಈ ಮಹಿಳೆಗೆ ಸೋಂಕು ಕಂಡು ಬಂದಿರುವ ಹಿನ್ನೆಲೆಯಲ್ಲಿ ಆಕೆ ಕಂಪನಿಯ ಒಳಗಡೆ ಹಾಗೂ ಹೊರಗಡೆ ಒಡಾಡಿರುವುದರಿಂದ ಕಂಪನಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಸೇರಿದಂತೆ ಆ ಕಾರ್ಮಿಕರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆತಂಕದಲ್ಲಿದ್ದಾರೆ.