ಬೆಳಗಾವಿ(ಜು.19): ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಶನಿವಾರ ಕೊರೋನಾ ಪಾಸಿಟಿವ್‌ ದೃಢಪಟ್ಟಿದೆ.

ಇದೆ ವೇಳೆಗೆ ಬೈಲಹೊಂಗಲದಲ್ಲಿ ಶುಕ್ರವಾರವಷ್ಟೇ ಚನ್ನಮ್ಮನ ಕಿತ್ತೂರಿನ ಶಾಸಕ ಮಹಾಂತೇಶ ದೊಡ್ಡಗೌಡರ, ತಹಸೀಲ್ದಾರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಕೋವಿಡ್‌ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಶಾಸಕ ಮಹಾಂತೇಶ ದೊಡ್ಡಗೌಡರ ಅವರಿಗೂ ಭೀತಿ ಎದುರಾಗಿದೆ.

ಬೆಳಗಾವಿ: ಕೊರೋನಾ ಟೆಸ್ಟ್‌ ಮಾಡಿಸದೇ ಪಾಸಿಟಿವ್‌ ಇದೆ ಎಂದಿದ್ದ ಜಿಲ್ಲಾಡಳಿತ

ಇತ್ತೀಚೆಗಷ್ಟೇ ಬೆಂಗಳೂರಿಗೆ ತೆರಳಿ ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಶಾಸಕ ಮಹಾಂತೇಶ ಕೌಜಲಗಿ ಅವರು, ಜು.16 ರಂದು ಬೈಲಹೊಂಗಲ ತಾಲೂಕು ಮಟ್ಟದ ಕೋವಿಡ್‌ 19 ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು. ಕಿತ್ತೂರು ವಿಧಾನಸಭೆ ಕ್ಷೇತ್ರದ ಕೆಲ ಹಳ್ಳಿಗಳು ಬೈಲಹೊಂಗಲ ತಾಲೂಕಿನ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಕಿತ್ತೂರಿನ ಶಾಸಕ ಮಹಾಂತೇಶ ದೊಡ್ಡಗೌಡರ ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದರು. 

ಶಾಸಕರಾದ ಕೌಜಲಗಿ ಮತ್ತು ದೊಡ್ಡಗೌಡರ ಅವರು ಅಕ್ಕಪಕ್ಕದಲ್ಲಿಯೇ ಕುಳಿತ್ತಿದ್ದರು. ಅಲ್ಲದೇ, ಮಾಸ್ಕ್‌ ಅನ್ನು ಸರಿಯಾಗಿ ಹಾಕದೇ ಅಧಿಕಾರಿಗಳ ಸಭೆ ನಡೆಸಿದ್ದರು. ತಹಸೀಲ್ದಾರ ಸೇರಿದಂತೆ ತಾಲೂಕು ಮಟ್ಟದ ಮಟ್ಟದ ಅಧಿಕಾರಿಗಳು ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದರು. ಶಾಸಕ ಕೌಜಲಗಿ ಅವರಿಗೆ ಕೊರೋನಾ ಪಾಸಿಟಿವ್‌ ಕಂಡುಬಂದ ಹಿನ್ನೆಲೆಯಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರೂ ಕ್ವಾರಂಟೈನ್‌ಗೊಳಗಾಗಬೇಕಿದೆ.