ಕೊರೋನಾ ಚಿಕಿತ್ಸೆ ನೀಡಲು ಆಸ್ಪತ್ರೆಗಳು ಸಿದ್ಧ​ಗೊಳ್ಳಲಿ| ಖಾಸಗಿ ಆಸ್ಪತ್ರೆ ವೈದ್ಯ​ರಿಗೆ ಸೂಚನೆ ನೀಡಿದ ಜಿಲ್ಲಾ​ಧಿ​ಕಾರಿ ಪಾಟೀ​ಲ| ಸಾರ್ವಜನಿಕರು, ರೋಗಿಗಳು ತಮಗೆ ಯಾವುದೇ ರೋಗ ಲಕ್ಷಣ ಕಂಡು ಬಂದರೂ ಅದು ಕೋವಿಡ್‌ ಎಂದೇ ತಿಳಿಯಬಾರದು| ಏಕೆಂದರೆ ಇತ್ತೀಚೆಗೆ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಕಂಡು ಬರುತ್ತಿದ್ದು, ಸಾರ್ವಜನಿಕರು ಭಯಭೀತರಾಗಬಾರದು|

ವಿಜಯಪುರ(ಜು.12):  ನೆಗಡಿ, ಕೆಮ್ಮು, ಜ್ವರ ಹಾಗೂ ಉಸಿರಾಟ ತೊಂದರೆಯಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ ಸಂಬಂಧಪಟ್ಟ ಆಸ್ಪತ್ರೆಗಳು ಸಕಲ ರೀತಿಯಲ್ಲಿ ಸಜ್ಜುಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅವರು ಖಾಸಗಿ ಆಸ್ಪತ್ರೆಗಳ ವೈದ್ಯರುಗಳಿಗೆ ಸೂಚಿಸಿದ್ದಾರೆ.

ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರೊಂದಿಗೆ ಸಮನ್ವಯ ಸಭೆ ನಡೆಸಿದರು. ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರು ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಕೋವಿಡ್‌ ಸೋಂಕಿತ ರೋಗಿಗಳ ಚಿಕಿತ್ಸೆಗೆ ಸಂಬಂಧಿಸಿದಂತೆ ಮಾಡಲಾದ ಬೆಡ್‌ಗಳ ವ್ಯವಸ್ಥೆ, ಕೋವಿಡ್‌ವಲ್ಲದ ರೋಗಿಗಳ ಚಿಕಿತ್ಸೆ ಕುರಿತಂತೆ ಮಾಹಿತಿಯನ್ನು ಸಮನ್ವಯ ಅಧಿಕಾರಿಗಳಾಗಿ ನಿಯೋಜಿಸಿದ ಡಾ. ಧಾರವಾಡಕರ ಅವರಿಗೆ ದಿನನಿತ್ಯ ಮಾಹಿತಿ ನೀಡುವಂತೆ ಅವರು ಸೂಚಿಸಿ​ದರು.

ಆಯಾ ಆಸ್ಪತ್ರೆಗಳಿಗೆ ತೀವ್ರ ಉಸಿರಾಟ ತೊಂದರೆಯಿಂದ ಆಗಮಿಸುವ ರೋಗಿಗಳು ವೈದ್ಯರ ಸಲಹೆ ಮೀರಿ ಮರಳಿ ಹೋಗುವ ರೋಗಿಗಳ ಬಗ್ಗೆ ಮಾಹಿತಿಯನ್ನೂ ನೋಡಲ್‌ ಅಧಿಕಾರಿಗಳಾಗಿ ನಿಯೋಜಿಸಿದ ತಾಲೂಕು ಆರೋಗ್ಯಾಧಿಕಾರಿ ಕುಮಾರಿ ಕವಿತಾಗೆ ನೀಡಬೇಕು. ರೋಗಿಗಳ ಲಕ್ಷಣಗಳ ಆಧಾರದ ಮೇಲೆ ಹೋಂ ಕ್ವಾರಂಟೈನ್‌ ಹಾಗೂ ಕೋವಿಡ್‌ ಸೋಂಕು ಇದ್ದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ಗೆ ದಾಖಲಿಸುವ ಕುರಿತಂತೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ರೋಗಿಗಳ ಅಲೆದಾಟ ತಪ್ಪಿಸಲು ಸದ್ಯಕ್ಕೆ ಲಭ್ಯವಿರುವ ಆಯಾ ಆಸ್ಪತ್ರೆಗಳಲ್ಲಿನ ಬೆಡ್‌ ವ್ಯವಸ್ಥೆಗಳ ಬಗ್ಗೆ ನಿರಂತರ ಮಾಹಿತಿ ಒದಗಿಸುವಂತೆ ಸೂಚಿಸಿದರು.

ವಿಜಯಪುರ: ಅಕ್ಕಮಹಾದೇವಿ ಮಹಿಳಾ ವಿವಿ 7 ಮಂದಿಗೆ ಕೊರೋನಾ ಸೋಂಕು..!

144 ಬೆಡ್‌​ಗಳು ಸಿದ್ಧ:

ವಿಜಯಪುರ ನಗರದ 8 ಖಾಸಗಿ ಆಸ್ಪತ್ರೆಗಳಾದ ಅಲ್‌- ಆಮೀನ್‌, ಬಿಎಲ್‌ಡಿಇ, ಯಶೋಧಾ, ಆಯುಷ್‌, ಅಶ್ವಿನಿ, ಡಾ. ಬಾಂಗಿ, ಡಾ. ಚೌಧರಿ ಹಾಗೂ ಯಶೋಧರಾ ಆಸ್ಪತ್ರೆಗಳಲ್ಲಿ ಹೈ ಪ್ರೋವ್‌ ಆಕ್ಸಿಜನ್‌ವುಳ್ಳ ಬೆಡ್‌ಗಳನ್ನು ಸಮರ್ಪಕವಾಗಿ ಸಿದ್ಧವಾಗಿಟ್ಟುಕೊಳ್ಳಬೇಕು. ಕೋವಿಡ್‌ ಸೋಂಕಿತ ರೋಗಿಗಳಿಗೆ ಪೂರ್ಣ ಪ್ರಮಾಣದಲ್ಲಿ ಚಿಕಿತ್ಸೆ ಒದಗಿಸಲು ಬೇಕಾದ ಸೌಲಭ್ಯಗಳೊಂದಿಗೆ ಸಿದ್ಧತೆಯಲ್ಲಿ ಇರಬೇಕು. ಸದ್ಯಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ 144 ಬೆಡ್‌ಗಳು ಸಿದ್ಧವಾಗಿದ್ದು, ಮುಂಬರುವ ಮಂಗಳವಾರದವರೆಗೆ 270 ಬೆಡ್‌ಗಳ ವ್ಯವಸ್ಥೆ ಕೂಡ ಸಿದ್ಧವಾಗಲಿದ್ದು, ಜಿಲ್ಲಾಸ್ಪತ್ರೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಈಗಾಗಲೇ ಕ್ರಮಕೈಗೊಂಡಿದ್ದು, ಜೀವದ ಸಂಕಷ್ಟದಲ್ಲಿ ರೋಗಿಗಳ ಅಲೆದಾಟ ತಪ್ಪಿಸಲು ನಿಗದಿತ ಸಮಯಕ್ಕೆ ಆಯಾ ರೋಗಿಗಳಿಗೆ ನೆರವಾಗಬೇಕು. ಪ್ರತಿದಿನ ಲಭ್ಯವಿರುವ ಬೆಡ್‌ಗಳ ಮಾಹಿತಿಯನ್ನು ನೋಡಲ್‌ ಅಧಿಕಾರಿಗಳು ಪಡೆದು, ತಮಗೆ ಮಾಹಿತಿ ನೀಡುವಂತೆ ಸೂಚಿ​ಸಿ​ದರು.

ಈಗಾಗಲೇ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಜಿಲ್ಲಾಡಳಿತದೊಂದಿಗೆ ಸೂಕ್ತ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, ಅವಶ್ಯಕ ಸಂದರ್ಭದಲ್ಲಿ ಸಿಬ್ಬಂದಿಗಳ ನಿಯೋಜನೆಗೂ ನೆರವು ಒದಗಿಸಲಾಗುವುದು. ಸಾರ್ವಜನಿಕರು ಕೂಡಾ ಯಾವುದೇ ರೀತಿಯ ಕೋವಿಡ್‌ ಲಕ್ಷಣಗಳು ಕಂಡು ಬಂದಲ್ಲಿ ವಿಳಂಬ ಮಾಡದೇ ತಕ್ಷಣ ಆಯಾ ಆಸ್ಪತ್ರೆಗಳಿಗೆ ಸಂಪರ್ಕಿಸಬೇಕು. ಸಭೆಯಲ್ಲಿ ಪ್ಯಾರಾಮೆಡಿಕಲ್‌ ಸಿಬ್ಬಂದಿ ಬಳಕೆ, ಪ್ಲಾಸ್ಮಾ ಥೆರಪಿ ಅಳವಡಿಕೆ, ವಿವಿಧ ಆಸ್ಪತ್ರೆಗಳಲ್ಲಿ ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಿದ್ಧಗೊಳಿಸಲಾದ ವ್ಯವಸ್ಥೆಗಳ ಬಗ್ಗೆ ಜಿಲ್ಲಾಧಿಕಾರಿಗಳು ಪರಿಶೀಲಿಸಿದರು.

ಜಿಲ್ಲೆಯ ಸಾರ್ವಜನಿಕರು, ರೋಗಿಗಳು ತಮಗೆ ಯಾವುದೇ ರೋಗ ಲಕ್ಷಣ ಕಂಡು ಬಂದರೂ ಅದು ಕೋವಿಡ್‌ ಎಂದೇ ತಿಳಿಯಬಾರದು. ಏಕೆಂದರೆ ಇತ್ತೀಚೆಗೆ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಕಂಡು ಬರುತ್ತಿದ್ದು, ಸಾರ್ವಜನಿಕರು ಭಯಭೀತರಾಗಬಾರದು ಎಂದು ತಿಳಿಸಿದ್ದಾರೆ.

ಜಿಲ್ಲೆ ಹಾಗೂ ರಾಜ್ಯಾದ್ಯಂತ ಇಂತಹ ಘಟನೆಗಳನ್ನು ಅವಲೋಕಿಸಿದಾಗ ರೋಗಿ ತಡವಾಗಿ ಆಸ್ಪತ್ರೆಗೆ ದಾಖಲಾದರೆ, ರೋಗಿಯನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ. ಸಾರ್ವಜನಿಕರು ಹೀಗೆ ವಿನಾಕಾರಣ ಭಯಭೀತರಾಗದೆ ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ದಾಖಲಾಗುವಂತೆ ಅವರು ಮನವಿ ಮಾಡಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಇದುವರೆಗೆ 15 ಮಂದಿ ಕೊರೋನಾದಿಂದ ಮೃತಪಟ್ಟಿದಂತಾಗಿದೆ ಎಂದು ತಿಳಿಸಿದ್ದಾರೆ. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಮತ್ತು ವೈದ್ಯರು ಇದ್ದರು.

90 ವರ್ಷ ಮೀರಿದವರು ಗುಣಮುಖ

ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತ ರೋಗಿಗಳನ್ನು ಗುಣಪಡಿಸುವಲ್ಲಿ ವೈದ್ಯರು ಹೆಚ್ಚಿನ ಸಾಧನೆ ಮಾಡಿದ್ದು, 90 ವಯೋಮಾನ ಮೀರಿದ ಇಬ್ಬರು ವೃದ್ಧೆಯರನ್ನು ಕೋವಿಡ್‌ದಿಂದ ಗುಣಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ತಿಳಿಸಿದ್ದಾರೆ. ರೋಗಿ ಸಂಖ್ಯೆ -16965 (95 ವರ್ಷ ವೃದ್ಧೆ) ಹಾಗೂ ರೋಗಿ ಸಂಖ್ಯೆ -13457 (90 ವರ್ಷದ ವೃದ್ಧೆ) ಅವರನ್ನು ಕೋವಿಡ್‌ ಸೋಂಕಿನಿಂದ ಗುಣಪಡಿಸಿದ್ದು, ಜುಲೈ 5ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದರು.

ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗಳ ಸಾವು

ವಿಜಯಪುರ ನಗರದ ಅಕ್ಕಿ ಕಾಲೋನಿ ನಿವಾಸಿ 72 ವರ್ಷದ ವೃದ್ಧ ರೋಗಿ ಸಂಖ್ಯೆ - 31920 ಅವರು ಚಿಕಿತ್ಸೆ ಫಲಕಾರಿಯಾಗದೆ ಜುಲೈ 9ರಂದು ಮೃತಪಟ್ಟಿದ್ದಾರೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಈ ವೃದ್ಧ ತೀವ್ರ ರಕ್ತದೊತ್ತಡ, ಸಕ್ಕರೆ ಕಾಯಿಲೆ ಹಾಗೂ ಐಎಚ್‌ಡಿ ಕಾಯಿಲೆಗಳಿಂದ ಬಳಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಶಿಷ್ಟಾಚಾರದಂತೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಅವರೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದವರ ಬಗ್ಗೆ ಗುರುತಿಸುವ ಕಾರ್ಯ ಚಾಲ್ತಿಯಲ್ಲಿದೆ ಎಂದರು. ಇಂಡಿ ತಾಲೂಕಿನ ಗುಬ್ಬೇವಾಡ ಗ್ರಾಮದ 65 ವರ್ಷದ ವೃದ್ಧ ಆಸ್ಪತ್ರೆಗೆ ದಾಖಲಾಗುವ ಮುಂಚೆ ಮೃತಪಟ್ಟಿದ್ದು, ಸ್ವ್ಯಾಬ್‌ ಪರೀಕ್ಷಾ ವರದಿ ನಂತರ ಬಂದಿದೆ. ಈ ವೃದ್ಧನಿಗೆ ಕೋವಿಡ್‌ ಪಾಸಿಟಿವ್‌ ಇರುವುದು ದೃಢಪಟ್ಟಿದ್ದು, ಜುಲೈ 7ರಂದು ಮೃತಪಟ್ಟಿದ್ದಾರೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.