ಬೆಂಗಳೂರು(ಏ.02): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಎರಡನೇ ಅಲೆಯ ಕೊರೋನಾ ಪ್ರಕರಣ ಹೆಚ್ಚಾಗುತ್ತಿದ್ದು, ಕಳೆದ ಒಂದೇ ತಿಂಗಳಿನಲ್ಲಿ ಸಕ್ರಿಯ ಸೋಂಕು ಪ್ರಕರಣ 30 ಸಾವಿರ ಗಡಿ ದಾಟಿದೆ. ಪರಿಣಾಮ ಬೆಂಗಳೂರಿನಲ್ಲಿ ಕೊರೋನಾಗೆ ಮೀಸಲಿಟ್ಟಿದ್ದ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆ ಬೆಡ್‌ಗಳು ಬಹುತೇಕ ಭರ್ತಿಯಾಗಿವೆ. ಮಾ.1ರಂದು 5 ಸಾವಿರ ಮಾತ್ರವಿದ್ದ ಸಕ್ರಿಯ ಸೋಂಕಿನ ಸಂಖ್ಯೆ ಏ.1ರ ವೇಳೆಗೆ 30,865ಕ್ಕೆ ಏರಿಕೆಯಾಗಿದೆ. ಈ ಪೈಕಿ ಬೆಂಗಳೂರು ನಗರ ಒಂದರಲ್ಲೇ 21,789 ಸಕ್ರಿಯ ಪ್ರಕರಣಗಳಿವೆ.

ಈ ಪೈಕಿ ಶೇ.80ರಷ್ಟು ಪ್ರಕರಣ ಸಂಪೂರ್ಣ ರೋಗ ಲಕ್ಷಣವಲ್ಲದ ಪ್ರಕರಣಗಳಾಗಿದ್ದರೂ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಭರ್ತಿಯಾಗಿವೆ. ಡಿಸೆಂಬರ್‌ನಲ್ಲಿ ಕೊರೋನಾ ಸೋಂಕು ಕಡಿಮೆಯಾಗಿದ್ದರಿಂದ ಸರ್ಕಾರಿ ಕೋಟಾದಡಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡುವ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿತ್ತು. ಅಲ್ಲದೆ, ಕೊರೋನಾಗೆ ಮೀಸಲಿಟ್ಟಿರುವ ಹಾಸಿಗೆ ಮಿತಿಯನ್ನು ಶೇ.50ರಿಂದ ಶೇ.10ಕ್ಕೆ ಇಳಿಕೆ ಮಾಡಲಾಗಿತ್ತು.

ಇದೀಗ ಏಕಾಏಕಿ ಕೊರೋನಾ ಸೋಂಕು ಉಲ್ಬಗೊಂಡಿರುವುದರಿಂದ ಬೆಂಗಳೂರಿನಲ್ಲಿ ಹಾಸಿಗೆ ಕೊರತೆ ಸೃಷ್ಟಿಯಾಗುವ ಭೀತಿ ಎದುರಾಗಿದೆ. ಉಳಿದ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ಇನ್ನೂ ಉಲ್ಬಣಗೊಂಡಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಮಾತ್ರ ಸಮಸ್ಯೆ ಉಂಟಾಗಿದೆ. ಬೆಂಗಳೂರಿನ ಆಸ್ಪತ್ರೆಗಳಲ್ಲಿ ಕನಿಷ್ಠ ಶೇ.30ರಷ್ಟು ಹಾಸಿಗೆಗಳನ್ನು ಕಾಯ್ದಿರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಸ್ಪತ್ರೆಗಳ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗ್ಳೂರಲ್ಲಿ ಒಂದೇ ದಿನ ಕೊರೋನಾಗೆ 18 ಬಲಿ..!

ಬೆಡ್‌ಗಳ ಇ-ಹಂಚಿಕೆ ಆರಂಭಿಸಿ:

ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳ ಹಾಸಿಗೆಗಳು ಈಗಾಗಲೇ ಭರ್ತಿಯಾಗಿವೆ. ದಿನದಿಂದ ದಿನಕ್ಕೆ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಮತ್ತೆ ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ಹಾಸಿಗೆಗಳ ಇ-ಹಂಚಿಕೆ ಶುರು ಮಾಡುವಂತೆ ಕೊರೋನಾ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಅಲ್ಲದೆ, ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾಗೆ ಮೀಸಲಿರುವ ಶೇ.10ರಷ್ಟುಹಾಸಿಗೆಗಳ ಪ್ರಮಾಣವನ್ನು ಮತ್ತಷ್ಟುಹೆಚ್ಚಿಸಬೇಕು ಎಂದು ಸಲಹೆ ನೀಡಿದೆ.

ಬೆಂಗಳೂರಿನಲ್ಲೇ ಸಮಸ್ಯೆ:

ಬೆಂಗಳೂರಿನಲ್ಲಿ ಏಕಾಏಕಿ ಸೋಂಕು ಉಲ್ಬಣಗೊಂಡಿರುವುದರಿಂದ ಸಮಸ್ಯೆಯಾಗಿದೆ. ಅದರಲ್ಲೂ ದಕ್ಷಿಣ ಹಾಗೂ ಪೂರ್ವ ವಲಯಗಳಲ್ಲಿ ಕ್ಲಸ್ಟರ್‌ಗಳು ವರದಿಯಾಗಿರುವುದರಿಂದ ಹಾಸಿಗೆ ಸಮಸ್ಯೆ ಹೆಚ್ಚಾಗಿದೆ.

ಬಿಎಂಸಿಆರ್‌ಐ (ವಿಕ್ಟೋರಿಯಾ) ಆಸ್ಪತ್ರೆ ನೋಡಲ್‌ ಅಧಿಕಾರಿ ಸ್ಮಿತಾ ಸೆಗು ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಇದೀಗ ರೋಗಿಗಳು ಹೆಚ್ಚಾಗಿದ್ದಾರೆ. ಹಿಂದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 550 ಕೊರೋನಾ ಹಾಸಿಗೆಯನ್ನು ಮೀಸಲಿಡಲಾಗಿತ್ತು. ಇದೀಗ ಕೇವಲ 160 ಹಾಸಿಗೆಗಳಿದ್ದು, ಎಲ್ಲವೂ ಭರ್ತಿಯಾಗಿವೆ. ಹೀಗಾಗಿ ಹೆಚ್ಚುವರಿಯಾಗಿ 140 ಹಾಸಿಗೆಗಳನ್ನು ಕೊರೋನಾಗೆ ಬದಲಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ. ಇದಕ್ಕೆ ಇನ್ನೂ ಎರಡು ವಾರ ಕಾಲಾವಕಾಶ ಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.

ಇನ್ನು ಬೌರಿಂಗ್‌ ಆಸ್ಪತ್ರೆಯಲ್ಲಿದ್ದ 160 ಕೊರೋನಾ ಹಾಸಿಗೆಯಿಂದ 110ಕ್ಕೆ ಇಳಿಸಲಾಗಿದೆ. ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್‌. ನಾಗರಾಜ್‌, ಆಸ್ಪತ್ರೆಯಲ್ಲಿರುವ 174 ಕೊರೋನಾವಲ್ಲದ ಸಾರಿ ಹಾಗೂ ಐಎಲ್‌ಐ ವಾರ್ಡ್‌ ಹಾಸಿಗೆಗಳಲ್ಲಿ ಬಹುತೇಕ ಭರ್ತಿಯಾಗುತ್ತಿವೆ. ಇವರಲ್ಲಿ ಶೇ.2ರಷ್ಟು ಮಂದಿಗೆ ಕೊರೋನಾ ಸೋಂಕು ದೃಢಪಡುತ್ತಿದೆ. ಅಂತಹವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗುತ್ತಿದೆ ಎಂದರು.